ಮಂಗಳೂರು: ‘ಯಕ್ಷನಂದನ’ ಪಿ.ವಿ. ಐತಾಳ ಇಂಗ್ಲಿಷ್ ಯಕ್ಷಗಾನ ಬಳಗದ 44ನೇ ವಾರ್ಷಿಕೋತ್ಸವದ ಪ್ರಯುಕ್ತ ಜೂ.21ರಂದು ಸಂಜೆ 5.30ರಿಂದ 9 ಗಂಟೆಯವರೆಗೆ ಪುರಭವನದಲ್ಲಿ ‘ವಾಲಿಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಯಕ್ಷನಂದನ ಸಂಚಾಲಕ ಪಿ. ಸಂತೋಷ ಐತಾಳ ಹೇಳಿದರು.
ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವಾಲಿ ಮೋಕ್ಷ’ ಇಂಗ್ಲಿಷ್ ಯಕ್ಷಗಾನ ಪ್ರಸಂಗವನ್ನು ಪಿ.ಸುರೇಶ್ ಕುಮಾರ್ ಐತಾಳ ರಚಿಸಿದ್ದಾರೆ. ಯಕ್ಷನಂದನ ಬಳಗದ ಅನೇಕ ಬಾಲ ಕಲಾವಿದರು ಈ ಕಲೆಯನ್ನು ಮುಂದಿನ ತಲೆಮಾರಿಗೆ ದಾಟಿಸಿದ್ದಾರೆ. ಎಲ್ಲ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನಗೊಳ್ಳಲಿದೆ’ ಎಂದರು.
ಯಕ್ಷಗಾನ ಪ್ರದರ್ಶನದ ಪೂರ್ವದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸುವರು. ಪಿ.ವಿ. ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರಿಟಬಲ್ ಟ್ರಸ್ಟ್ ವತಿಯಿಂದ ವಿದ್ಯಾನಿಧಿ ವಿತರಿಸಲಾಗುವುದು. ದ್ವಿತೀಯ ಪಿಯುಸಿಯಲ್ಲಿ ರ್‍ಯಾಂಕ್ ಪಡೆದ ಪ್ರದ್ಯುಮನ್ ಆರ್. ಉರಾಳ, ರಾಜೀವಗಾಂಧಿ ವಿವಿಯ ಎಂಎಸ್‌ಇಎನ್‌ಟಿಯಲ್ಲಿ ರ್‍ಯಾಂಕ್ ಪಡೆದ ಡಾ. ಶಿವಪ್ರಸಾದ್ ಕಾರಂತ, ಉನ್ನತ ಅಧ್ಯಯನಕ್ಕೆ ಅಮೆರಿಕಕ್ಕೆ ತೆರಳಲಿರುವ ವಾಸುದೇವ ಕೆ.ಭಟ್ ಅವರನ್ನು ಪುರಸ್ಕರಿಸಲಾಗುವುದು ಎಂದರು.
ಬಳಗದ ಪ್ರಮುಖರಾದ ಡಾ.ಪಿ.ಸತ್ಯಮೂರ್ತಿ ಐತಾಳ, ಪಿ. ಸುರೇಶ್ ಕುಮಾರ್ ಐತಾಳ, ರವಿ ಅಲೆವೂರಾಯ ವರ್ಕಾಡಿ, ವೃಂದಾ ಕೊನ್ನಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.