
ಮಂಗಳೂರು: ಕರಾವಳಿ ಉತ್ಸವ ಹಾಗೂ ಗಣರಾಜ್ಯೋತ್ಸವದ ಪ್ರಯುಕ್ತ ಇಲ್ಲಿನ ಕದ್ರಿ ಉದ್ಯಾನದಲ್ಲಿ ಇದೇ 23ರಿಂದ 26ರವರೆಗೆ ಫಲ ಫುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಬಣ್ಣ ಬಣ್ಣದ ಹೂಗಳಿಂದ ನಿರ್ಮಿಸಿದ ‘ವಂದೇ ಭಾರತ್’ ರೈಲಿನ ಪ್ರತಿಕೃತಿ ಈ ಬಾರಿಯ ಪ್ರಮುಖ ಆಕರ್ಷಣೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾಹಿತಿ ನೀಡಿದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನರ್ವಾಡೆ ವಿನಾಯಕ ಕಾರ್ಬಾರಿ, ‘24 ಅಡಿ ಉದ್ದದ ಮೂರು ಬೋಗಿಗಳ ಹಾಗೂ 30 ಅಡಿ ಉದ್ದದ ರೈಲು ಹಳಿಯನ್ನು ಒಳಗೊಂಡ ವಂದೇ ಭಾರತ್ ರೈಲಿನ ಪ್ರತಿಕೃತಿಯನ್ನು ಬಗೆ ಬಗೆಯ ಹೂಗಳಿಂದಲೇ ರಚಿಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಕದ್ರಿ ಉದ್ಯಾನ ಅಭಿವೃದ್ಧಿ ಸಮಿತಿ ಮತ್ತು ಸಿರಿ ತೋಟಗಾರಿಕೆ ಸಂಘಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಫಲ ಪುಷ್ಪ ಪ್ರದರ್ಶದಲ್ಲಿ ಸಾಲ್ವಿಯ, ಸೇವಂತಿಗೆ, ಚೆಂಡು ಹೂ, ಜೀನಿಯಾ, ಡಯಾಂಥಸ್ ಆಸ್ಟರ್, ವಿಂಕಾ ರೋಸಿಯಾ, ಕೋಳಿ ಜುಟ್ಟು, ಡೇಲಿಯಾ, ಪೆಟೂನಿಯಾ, ಟೊರಿನೊ ಸೇರಿದಂತೆ 30 ಬೇರೆ ಬೇರೆ ಜಾತಿಯ ಸುಮಾರು 15 ಸಾವಿರ ಹೂಗಳನ್ನು ಕಣ್ತುಂಬಿಕೊಳ್ಳಬಹುದು’ ಎಂದರು.
‘ತರಕಾರಿ ಕೈತೋಟದ ಪ್ರಾತ್ಯಕ್ಷತೆಯೂ ಇರಲಿದೆ. ವಿವಿಧ ಕ್ಷೇತ್ರಗಳ ಗಣ್ಯರ ಕಲಾಕೃತಿಗಳನ್ನು ಹಣ್ಣು ಮತ್ತು ತರಕಾರಿಗಳಲ್ಲಿ ಕೆತ್ತಿ ಪ್ರದರ್ಶಿಸಲಾಗುವುದು. ವಿವಿಧ ಅಲಂಕಾರಿಕ ಗಿಡಗಳು, ಬೋನ್ಸಾಯ್ ಗಿಡಗಳ ಪ್ರದರ್ಶನ, ಇಕೆಬಾನೆ ಹೂವಿನ ಜೋಡಣೆ ಇರಲಿದೆ. ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆವರೆಗೂ ಪ್ರವೇಶಾವಕಾಶವಿದೆ. ಹಿರಿಯರಿಗೆ ₹ 30 ಹಾಗೂ ಮಕ್ಕಳಿಗೆ ₹ 20 ಪ್ರವೇಶ ಶುಲ್ಕವಿದೆ. ಶಾಲಾ ಅಧ್ಯಾಪಕರ ಜೊತೆ ಸಮವಸ್ತ್ರದಲ್ಲಿ ಬರುವ ವಿದ್ಯಾರ್ಥಿಗಳಿಗೆ ಪ್ರವೇಶ ಉಚಿತ’ ಎಂದರು.
‘ಫಲಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಇದೇ 23ರಂದು ಸಂಜೆ 4ಕ್ಕೆ ಉದ್ಘಾಟಿಸುವರು. ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಂಸದ ಕ್ಯಾ.ಬ್ರಿಜೇಶ್ ಚೌಟ ಭಾಗವಹಿಸುವರು. ಶಾಸಕ ಡಿ.ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸುವರು’ ಎಂದರು.
ತೋಟಗಾರಿಕಾ ಇಲಾಖೆ ಜಹಂಟಿ ನಿರ್ದೇಶಕ ಶಶಿಧರ್ ಎಚ್., ಕದ್ರಿ ಅಭಿವೃದ್ಧಿ ಸಮಿತಿ ಸದಸ್ಯ ಕೆ.ರಾಮ ಮೊಗ್ರೋಡಿ, ಜಿ.ಕೆ.ಭಟ್, ಜಗನ್ನಾಥ ಗಂಭೀರ್, ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಭಾರತಿ ನಿರ್ಮಲ್, ಸದಸ್ಯರಾದ ವೈಕುಂಠ ಹೇರಳೆ, ಹರೀಶ್ಚಂದ್ರ ಅಡ್ಕ, ಹಿರಿಯ ತೋಟಗಾರಿಕಾ ನಿರ್ದೇಶಕರಾದ ಪ್ರಮೋದ್ ಸಿ.ಎಂ., ಜೆ.ಪ್ರದೀಪ್ ಡಿಸೋಜ, ಕೆ.ಪ್ರವೀಣ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದರು.
‘ರೈತರು ಬೆಳೆದಿರುವಂತಹ ವಿಶಿಷ್ಟ ಬಗೆಯ ಹಣ್ಣು ತರಕಾರಿ ತೋಟದ ಬೆಳೆಗಳು ಸಾಂಬಾರು ಬೆಳೆಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ತೋಟಗಾರಿಕೆ ಕರಕುಶಲ ಸಾಮಗ್ರಿಗಳು ಸಾರ್ವಜನಿಕರು ಬೆಳೆಸಿರುವ ಬೊನ್ಸಾಯ್ ಆಂಥೋರಿಯಂ ಗಿಡಗಳು ಮತ್ತಿತರ ಆಕರ್ಷಕ ಗಿಡಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಿದ್ದೇವೆ. ತಾವು ಪ್ರದರ್ಶಿಸುವ ಕೃಷಿ ಉತ್ಪನ್ನಗಳನ್ನು ಅವರು ಇದೇ 22ರಂದೇ ಕದ್ರಿ ಉದ್ಯಾನಕ್ಕೆ ತರಬೇಕು’ ಎಂದು ವಿನಾಯಕ ಕಾರ್ಬಾರಿ ತಿಳಿಸಿದರು.
‘100 ಮಳಿಗೆಗಳಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಜೇನಿನ ಮೌಲ್ಯವರ್ಧಿತ ಉತ್ಪನ್ನ ವಿವಿಧ ನರ್ಸರಿ ಉತ್ಪನ್ನಗಳು ಬೀಜ ಗೊಬ್ಬರ ತೋಟಗಾರಿಕೆ ಉತ್ಪನ್ನಗಳು ಯಂತ್ರೋಪಕರಣಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ. ವಿವಿಧ ಇಲಾಖೆಗಳಿಂದ ಪ್ರದರ್ಶನ ಮಳಿಗೆಗಳೂ ಇರಲಿವೆ. ಇಲಾಖೆಯಿಂದ ಬೆಳೆಸಿದ ತರಕಾರಿ ಸಸಿಗಳನ್ನು ಒಂದು ರೂಪಾಯಿಗೆ ಒಂದರಂತೆ ಮಾರಾಟ ಮಾಡಲಾಗುತ್ತದೆ’ ಎಂದು ಶಶಿಧರ್ ಎಚ್. ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.