ADVERTISEMENT

ಮಂಗಳೂರು: ದೇಗುಲಗಳಲ್ಲಿ ಗಂಟೆಯ ನಾದ, ಮಂತ್ರದ ನಿನಾದ

ವರಮಹಾಲಕ್ಷ್ಮಿ ವ್ರತದ ಅಂಗವಾಗಿ ದೇವಾಲಯಗಳಲ್ಲಿ ಬಳೆ, ಅರಿಸಿನ–ಕುಂಕುಮ ವಿತರಣೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 14:43 IST
Last Updated 5 ಆಗಸ್ಟ್ 2022, 14:43 IST
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು.
ಪುತ್ತೂರಿನ ಮಹಾಲಿಂಗೇಶ್ವರ ದೇವಾಲಯದಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು.   

ಮಂಗಳೂರು: ಹೊರಗೆ ಸುರಿವ ಮಳೆ, ಮನೆಗಳಲ್ಲಿ ಭಕ್ತಿ–ಭಾವದ ಹೊಳೆ. ವರಮಹಾಲಕ್ಷ್ಮಿ ಹಬ್ಬವೆಂದರೆ ಮಹಿಳೆಯರಿಗೆ ವಿಶೇಷ ಸಡಗರ. ಈ ಬಾರಿ ಈ ಸಂಭ್ರಮ ದೇವಾಲಯಗಳಲ್ಲೂ ಕಂಡುಬಂತು. ಮುಜರಾಯಿ ಇಲಾಖೆ ಸೂಚನೆಯಂತೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ಹಬ್ಬದ ಹಿಗ್ಗು ಮನೆಮಾಡಿತ್ತು.

ಬೋಳಾರದ ಮಂಗಳಾದೇವಿ ದೇವಸ್ಥಾನ, ಸೋಮೇಶ್ವರದ ಸೋಮನಾಥ ದೇವಾಲಯ, ಪುತ್ತೂರು ಮಹಾಲಿಂಗೇಶ್ವರ ದೇವಾಲಯ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯ, ಕಾರಿಂಜೇಶ್ವರ, ಗೆಜ್ಜೆಗಿರಿ ಕ್ಷೇತ್ರ ಸೇರಿದಂತೆ ಜಿಲ್ಲೆಯ 34 ‘ಎ’ ಗ್ರೇ‌ಡ್ ದೇವಾಲಯಗಳು, ಮೂರು ‘ಬಿ’ ಗ್ರೇಡ್ ದೇವಾಲಯಗಳಲ್ಲಿ ಮಹಿಳೆಯರಿಗೆ ಆರು ಬಳೆ, ಅರಿಸಿನ–ಕುಂಕುಮವನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು. ಇಲಾಖೆ ನಿರ್ದೇಶನದಂತೆ ದೇವಾಲಯದ ನಿಧಿಯಲ್ಲಿ ಇದರ ವೆಚ್ಚವನ್ನು ಭರಿಸಲಾಗಿತ್ತು.

ನೂರಾರು ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಸಾಮೂಹಿಕವಾಗಿ ಲಕ್ಷ್ಮಿ ಸ್ತೋತ್ರ ಪಠಿಸಿದರು. ಕುಂಕುಮಾರ್ಚನೆ ನೆರವೇರಿಸಿದರು. ವೈದಿಕರ ಮಾರ್ಗದರ್ಶನದಲ್ಲಿ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ADVERTISEMENT

‘ಜಿಲ್ಲೆಯ ಎಲ್ಲ ಎ ಗ್ರೇಡ್ ದೇವಾಲಯಗಳಲ್ಲಿ ಅರಿಸಿನ–ಕುಂಕುಮ, ಬಳೆ ವಿತರಿಸಲಾಗಿದೆ. ಇನ್ನೆರಡು ದೇವಾಲಯದವರು ಈ ಕಾರ್ಯಕ್ರಮವನ್ನು ಆ.12ರಂದು ಹಮ್ಮಿಕೊಂಡಿದ್ದಾರೆ. ನಾಲ್ಕು ಬಿ ಗ್ರೇಡ್ ದೇವಾಲಯಗಳಲ್ಲೂ ಆ.12ರಂದು ಈ ಕಾರ್ಯಕ್ರಮ ನಡೆಯಲಿದೆ’ ಎಂದು ಮುಜರಾಯಿ ಇಲಾಖೆ ಅಧಿಕಾರಿ ರಶ್ಮಿ ಎಸ್.ಆರ್ ತಿಳಿಸಿದರು.

‘ಹಳೆಕೋಟೆ ಮಾರಿಯಮ್ಮ, ಉಳ್ಳಾಲ ಸೋಮನಾಥ ದೇವಾಲಯಗಳಿಗೆ ಮಧ್ಯಾಹ್ನದ ವೇಳೆ ಭೇಟಿ ನೀಡಿದಾಗ, ಮಹಿಳೆಯರ ಸಂಖ್ಯೆ ಅಧಿಕವಾಗಿತ್ತು. ಪ್ರಸಾದ ಸ್ವೀಕರಿಸಿದ ಮಹಿಳೆಯರಲ್ಲಿ ಧನ್ಯತಾ ಭಾವ ಕಂಡುಬಂತು. ದೇವಾಲಯದ ಸಿಬ್ಬಂದಿ ಉತ್ಸಾಹದಿಂದ ಎಲ್ಲ ಸಿದ್ಧತೆ ಮಾಡಿದ್ದರು’ ಎಂದು ಇಲಾಖೆಯ ಸೂಪರಿಂಟೆಂಡೆಂಟ್ ಶ್ವೇತಾ ಮಾಹಿತಿ ನೀಡಿದರು.

‘ಈವರೆಗೆ ದೇವಿಯ ದೇವಸ್ಥಾನಕ್ಕೆ ತೆರಳಿ ನಾವೇ ಬಳೆ, ಹೂ–ಹಣ್ಣು ಕೊಂಡೊಯ್ದು ಪೂಜೆ ಸಲ್ಲಿಸಿ ಬರುತ್ತಿದ್ದೆವು. ಈ ಬಾರಿ ದೇವಾಲಯದಲ್ಲಿ ತಿನ್ನುವ ಪ್ರಸಾದದ ಜತೆಗೆ ಪವಿತ್ರವಾದ ಅರಿಸಿನ–ಕುಂಕುಮ, ಹಸಿರು ಗಾಜಿನ ಬಳೆಗಳನ್ನು ನೀಡಿದ್ದು, ನಮ್ಮನ್ನು ಭಾವುಕರನ್ನಾಗಿ ಮಾಡಿತು’ ಎಂದು ವ್ರತಾಚರಣೆ ಮಾಡಿದ ಸಪ್ನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.