
ಮಂಗಳೂರು: ಇತ್ತೀಚೆಗೆ ನಡೆದ ವಿಧಾನಸಭೆಯ ಕಲಾಪದಲ್ಲಿ ಅರಸೀಕೆರೆ ಕಾಂಗ್ರೆಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ವಿರುದ್ಧ ಬಿಜೆಪಿ ಶಾಸಕರು ತೋರಿದ ವರ್ತನೆ ಖಂಡನೀಯ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಹೇಳಿದೆ.
‘ವಿಬಿ ಗ್ರಾಮ್ ಜಿ ಕಾಯ್ದೆ ವಿರುದ್ಧದ ನಿರ್ಣಯ ಕುರಿತ ಚರ್ಚೆಯಲ್ಲಿ ಮಾತನಾಡಿದ ಶಿವಲಿಂಗೇಗೌಡ ಅವರಿಗೆ ಧರಣಿ ನಿರತ ಬಿಜೆಪಿ ಶಾಸಕರಾದ ವೇದವ್ಯಾಸ್ ಕಾಮತ್ ಮತ್ತು ಶರಣು ಸಲಗರ ಅಡ್ಡಿಪಡಿಸಿ, ಅಶ್ಲೀಲ ಪದ ಬಳಸಿ ಅವಾಚ್ಯವಾಗಿ ನಿಂದಿಸಿದ್ದಾರೆ. ಶಿವಲಿಂಗೇಗೌಡರನ್ನು ಉದ್ದೇಶಿಸಿ ‘ಕೊಬ್ಬರಿ ಕಳ್ಳ’ ಎಂದು ಕೂಗಿ ಪ್ರಚೋದಿಸಿದ್ದರಿಂದ ಶಿವಲಿಂಗೇಗೌಡರು ಪ್ರತಿಕ್ರಿಯಿಸಿದ್ದಾರೆಯೇ ಹೊರತು ಉದ್ದೇಶ ಪೂರಕವಾಗಿ ಮಾತನಾಡಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ಪ್ರತಿನಿಧಿಸುವ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರು ಸದನದಲ್ಲಿ ಅಸಂಸದೀಯ ಪದಗಳನ್ನು ಬಳಸಿರುವುದಲ್ಲದೆ, ಡ್ಯಾನ್ಸ್ ಮಾಡಿ ಜಿಲ್ಲೆಯ ಮರ್ಯಾದೆ ತೆಗೆದಿದ್ದಾರೆ’ ಎಂದು ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಶಾಸಕರು ಯಾವತ್ತೂ ಈ ರೀತಿ ವರ್ತಿಸಿಲ್ಲ. ಸದನದಲ್ಲಿ ವಿಷಯಾಧಾರಿತ ಚರ್ಚೆ ನಡೆಸಬೇಕು. ಅದನ್ನು ಬಿಟ್ಟು ಗಲಾಟೆ ಮಾಡುವುದು, ಸದನದ ನಿಯಮಾವಳಿಗೆ ವಿರುದ್ಧ ವರ್ತಿಸುವುದು ಸರಿಯಲ್ಲ. ಕಾಮತ್ ಅವರು ವಿಧಾನಸಭೆಯಲ್ಲಿ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎನ್ನುವುದನ್ನು ಕಲಿತು, ಸಭ್ಯತೆಯಿಂದ ವರ್ತಿಸಿ ಜಿಲ್ಲೆಯ ಮಾನ ಉಳಿಸಲಿ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.