ADVERTISEMENT

ಉಜಿರೆ| ಸತ್ಯ, ಧರ್ಮದಿಂದ ಶಾಂತಿ-ನೆಮ್ಮದಿ ಜೀವನ: ಎಂ. ವೀರಪ್ಪ ಮೊಯ್ಲಿ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 4:12 IST
Last Updated 15 ಜನವರಿ 2026, 4:12 IST
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು
ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು   

ಉಜಿರೆ: ಸತ್ಯದ ಮಾತಿಗೆ ಸದಾ ಬೆಲೆ ಇದೆ. ಸತ್ಯ ಮತ್ತು ಧರ್ಮದಿಂದ ನಡೆದಾಗ ಉತ್ತಮ ಸಂಸ್ಕಾರದೊಂದಿಗೆ ಶಾಂತಿ-ನೆಮ್ಮದಿಯ ಜೀವನ ಸಾಧ್ಯವಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದರು.

ಬೆಳ್ತಂಗಡಿ ತಾಲ್ಲೂಕಿನ ಅಳದಂಗಡಿಯಲ್ಲಿ ಬುಧವಾರ ಸತ್ಯದೇವತಾ–ಕಲ್ಲುರ್ಟಿ ದೈವಸ್ಥಾನಕ್ಕೆ ಘಂಟಾ ಗೋಪುರ ಸಮರ್ಪಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ವಿಶ್ವವು ದೇವರ ಪ್ರತಿಬಿಂಬವಾಗಿದೆ. ಸತ್ಯದ ಸಾಕ್ಷಾತ್ಕಾರದಿಂದ ನಾವು ದೇವರನ್ನು ಕಾಣಬಹುದು. ಎಲ್ಲಾ ಜೀವಿಗಳ ಸೇವೆ ಮಾಡುವವರು ಮಾತ್ರ ದೇವರನ್ನು ಪೂಜಿಸುವ ಅರ್ಹತೆ ಹೊಂದುತ್ತಾರೆ. ನಾಗರಿಕತೆಗೆ ನೈತಿಕತೆ ಮತ್ತು ಕಾನೂನಿನ ಅಗತ್ಯವಿದೆ. ಸತ್ಯದೇವತೆ, ಕಲ್ಲುರ್ಟಿ ಮೊದಲಾದವರು ಸತ್ಯ, ಧರ್ಮದ ಹಾದಿಯಲ್ಲಿ ನಡೆದು ಅನ್ಯಾಯ, ಶೋಷಣೆ ವಿರುದ್ಧ ನಿರಂತರ ಹೋರಾಟ ನಡೆಸಿ ಅಮಾನುಷ ವ್ಯಕ್ತಿತ್ವ ಹೊಂದಿ ಸತ್ಯದೇವತೆಗಳಾಗಿ ಆರಾಧನೆಗೆ ಅರ್ಹರಾಗಿದ್ದಾರೆ. ತುಳುನಾಡಿನಲ್ಲಿ ನಾವು ಸಾವಿರಾರು ದೈವಗಳ ಆರಾಧನೆ ಮಾಡುವುದನ್ನು ಕಾಣಬಹುದು ಎಂದರು.

ADVERTISEMENT

ನಿರಂತರ ಕಠಿಣ ಪರಿಶ್ರಮದಿಂದ ನಾನು ಉನ್ನತ ಸಾಧನೆ ಮಾಡಲು ಸಾಧ್ಯವಾಯಿತು. ತಾನು ಕೂಡ ಅಜಿಲ ಸೀಮೆಗೆ ಸೇರಿದವನಾಗಿದ್ದು ಈಗಿನ ಅರಸರ ಅಜ್ಜನ ಕಾಲದಲ್ಲಿ ಅರಮನೆಗೆ ಬಂದು ಹೊಸಅಕ್ಕಿ ಊಟ (ತುಳು: ಪುದ್ದರ್) ಮಾಡಿರುವುದನ್ನು ಧನ್ಯತೆಯಿಂದ ಸ್ಮರಿಸಿದರು.

ಮುಂಬೈನ ವಿಶ್ವ ದೇವಾಡಿಗ ಮಹಾಮಂಡಲದ ಅಧ್ಯಕ್ಷ ಧರ್ಮಪಾಲ ದೇವಾಡಿಗ ಮಾತನಾಡಿ, ತುಳುನಾಡಿನ ದೈವಾರಾಧನೆ ವಿಶಿಷ್ಠವಾಗಿದ್ದು, ದೇವಾಡಿಗರು ಸದಾ ದೈವಗಳ ಮತ್ತು ದೇವರ ಸೇವೆಯಲ್ಲಿ ನಿರತರಾಗಿರುತ್ತಾರೆ. ಸತ್ಕಾರ್ಯಗಳಿಗೆ ಸದಾ ದೇವರ ಅನುಗ್ರಹವಿರುತ್ತದೆ ಎಂದರು.

ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ, ದೇವೇಂದ್ರ ಹೆಗ್ಡೆ ಕೊಕ್ರಾಡಿ, ಜಯದೀಪ್ ದೇವಾಡಿಗ, ಕಿರಣ್‌ಚಂದ್ರ ಡಿ. ಪುಷ್ಪಗಿರಿ ಮಾತನಾಡಿದರು.
ಘಂಟಾಗೋಪುರ ದಾನಿಗಳಾದ ವೇಲುಸ್ವಾಮಿ ಹಾಗೂ ಗಣೇಶ ಆಚಾರ್ಯ ಅವರನ್ನು ಗೌರವಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಅಳದಂಗಡಿ ಅರಮನೆಯ ತಿಮ್ಮಣ್ಣರಸ ಪದ್ಮಪ್ರಸಾದ ಅಜಿಲ ಮಾತನಾಡಿ, ಅರಮನೆಗೂ ದೇವಾಡಿಗ ಸಮಾಜಕ್ಕೂ ಅವಿನಾಭಾವ ಸಂಬಂಧವಿದ್ದು ಅವರ ಸಕ್ರಿಯ ಸಹಕಾರದಿಂದ ಎಲ್ಲಾ ಸಂಪ್ರದಾಯ ಮತ್ತು ಕಟ್ಟು ಕಟ್ಟಳೆಗಳನ್ನು ಸುಗಮವಾಗಿ ನಡೆಸಲು ಸಾಧ್ಯವಾಗುತ್ತಿದೆ. ಮಾನ್ಯ ವೀರಪ್ಪ ಮೊಯ್ಲಿ ಅಜಿಲ ಸೀಮೆಗೆ ಸಂಬಂಧಪಟ್ಟವರೆಂಬುದು ನಮಗೆಲ್ಲ ಅಭಿಮಾನ ಉಂಟು ಮಾಡಿದೆ. ಅವರ ಆಗಮನದಿಂದ ಇಡೀ ಊರೇ ಸಂಭ್ರಮ ಸಡಗರದಲ್ಲಿದೆ ಎಂದರು.

ಸತ್ಯದೇವತೆ ದೈವಸ್ಥಾನದ ಆಡಳಿತದಾರ ಶಿವಪ್ರಸಾದ ಅಜಿಲ ಸ್ವಾಗತಿಸಿದರು. ಸಮಿತಿಯ ಕಾರ್ಯದರ್ಶಿ ನಿತ್ಯಾನಂದ ನಾವರ ಧನ್ಯವಾದವಿತ್ತರು.

ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಸಮಾರಂಭವನ್ನು ಉದ್ಘಾಟಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.