ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಬಂದ್‌ಗೆ ಕರೆ ನೀಡಿದ್ದ ವಿಶ್ವಹಿಂದೂ ಪರಿಷತ್ ದಕ್ಷಿಣ ಪ್ರಾಂತ ಕಾರ್ಯವಾಹ ಶರಣ್ ಪಂಪ್‌ವೆಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
‘ಸುಹಾಸ್ ಶೆಟ್ಟಿ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದ ನಗರದ ಕುಂಟಿಕಾನದ ಎ.ಜೆ. ಆಸ್ಪತ್ರೆಯ ಬಳಿ ಮೇ 1ರಂದು ರಾತ್ರಿ ಶರಣ್ ಪಂಪ್‌ವೆಲ್ , ‘ಸುಹಾಸ್ ಶೆಟ್ಟಿ ಹಿಂದೂ ಸಂಘಟನೆಯ ಕಾರ್ಯಕರ್ತ. ಆತ ‘ಇಸ್ಲಾಮಿನ ಜಿಹಾದಿ ಉಗ್ರಗಾಮಿಳಿಂದ‘ ಕೊಲೆಯಾಗಿದ್ದಾನೆ. ನಿಷೇಧಿತ ಪಿಎಫ್‌ಐ ಸಂಘಟನೆ ಈ ಹತ್ಯೆಯಲ್ಲಿ ನೇರವಾಗಿ ಭಾಗಿಯಾಗಿದೆ. ವಿಶ್ವ ಹಿಂದೂ ಪರಿಷತ್ ಮತ್ತು ಇತರ ಹಿಂದುತ್ವವಾದಿ ಸಂಘಟನೆಗಳು ಜಿಲ್ಲೆಯಾದ್ಯಂತ ಬಂದ್ ನಡೆಸಲಿವೆ’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿ ಅಂಗಡಿ ಮಳಿಗೆಗಳನ್ನು ಮುಚ್ಚುವಂತೆ ಸೂಚಿಸಿದ್ದ’ ಎಂದು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.
‘ಬಂದ್ ಕರೆಗೆ ಸಾರ್ವಜನಿಕರು ಸ್ಪಂದಿಸದೇ ಇದ್ದಾಗ, ಶರಣ್ ಪಂಪ್‌ವೆಲ್ ಹೇಳಿಕೆಯಿಂದ ಪ್ರೇರೇಪಿತರಾದ ಕೆಲವರು ನಗರದ ಹಲವು ಕಡೆ ಅಶಾಂತಿಯ ವಾತಾವರಣ ಸೃಷ್ಟಿಸಿದ್ದರು. ಇದರಿಂದ ಸಾರ್ವಜನಿಕ ಸ್ವತ್ತುಗಳು ಹಾನಿಯಾಗಿದ್ದಲ್ಲದೇ ನಗರದಲ್ಲಿ ಕೋಮುಗಲಭೆ ಹಾಗೂ ಸಾರ್ವಜನಿಕ ಶಾಂತಿ ಭಂಗ ಉಂಟಾಗಿತ್ತು. ಈ ಬಗ್ಗೆ ಶರಣ್ ಪಂಪ್‌ವೆಲ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 49 (ಅಪರಾಧ ಕೃತ್ಯಕ್ಕೆ ಪ್ರಚೋದಿಸುವುದು), ಸೆಕ್ಷನ್ 196 (1) (ಎರಡು ಗುಂಪುಗಳ ನಡುವೆ ಧರ್ಮ, ಜನಾಂಗ, ಜನ್ಮಸ್ಥಳ, ವಾಸಸ್ಥಳ, ಭಾಷೆ ಅಥವಾ ಇತರ ಕಾರಣದಿಂದ ದ್ವೇಷವನ್ನು ಹುಟ್ಟಿಸುವುದು), ಸೆಕ್ಷನ್ 324 (2) (ದುಷ್ಕೃತ್ಯ ನಡೆಸುವುದು), ಸೆಕ್ಷನ್ 324 (4) (ದುಷ್ಕೃತ್ಯದಿಂದ ಸ್ವತ್ತುಗಳನ್ನು ಹಾನಿಗೊಳಿಸುವುದು), ಸೆಕ್ಷನ್ 324 (5) (ಮಾರಕಾಸ್ತ್ರ ಬಳಸಿ ಘಾಸಿಗೊಳಿಸುವುದು), 353 (2)ರ (ಸುಳ್ಳು ಮಾಹಿತಿ ಅಥವಾ ಸುಳ್ಳು ಸುದ್ದಿ ಹರಡುವುದು) ಅಡಿ ಎಫ್‌ಐಆರ್ ದಾಖಲಾಗಿತ್ತು. ತನಿಖೆ ನಡೆಸಿ ಇದಕ್ಕೆ ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಿದ್ದೇವೆ’ ಎಂದರು.
‘ಬಂದ್ ಕುರಿತ ಹೇಳಿಕೆಯ ವಿಚಾರಣೆಗೆ ಹಾಜರಾಗುವಂತೆ ಆರೋಪಿಗೆ ಎರಡು ಸಲ ನೋಟಿಸ್ ಜಾರಿ ಮಾಡಿದ್ದೇವೆ. ಆದರೆ ಆತ ಸಹಕರಿಸಿಲ್ಲ. ಹಾಗಾಗಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.