ಮಂಗಳೂರು: ವರ್ಷಂಪ್ರತಿ ನಡೆಯುವ ಹಬ್ಬಗಳ ಪ್ರಯುಕ್ತ ಏರ್ಪಡಿಸುವ ಕಾರ್ಯಕ್ರಮಗಳಿಗೆ, ಮೆರವಣಿಗೆಗಳಿಗೆ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿದಂತೆ 2000ದ ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮಗಳಿಂದ ವಿನಾಯಿತಿ ನೀಡಬೇಕು ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಒತ್ತಾಯಿಸಿದೆ.
ಈ ಕುರಿತು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ‘ನೇಮ, ಕೋಲ, ಯಕ್ಷಗಾನ, ಹುಲಿವೇಷ ನಾಗಾರಾಧನೆ, ಕಂಬಳ, ಮೊಸರುಕುಡಿಕೆ, ದಸರಾ ತುಳುನಾಡಿನ ವಿಶೇಷ ಸಾಂಸ್ಕೃತಿಕ ಪರಂಪರೆ. ದೇಶವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯುತ್ತಿರುವ ಇಂತಹ ಆಚರಣೆಗಳಿಗೆ ಪೊಲೀಸ್ ಇಲಾಖೆ ಅಡ್ಡಿಪಡಿಸಬಾರದು. ಮಂಗಳೂರು ದಸರಾ ಮೆರವಣಿಗೆಯನ್ನು ರಾತ್ರಿ 10ರ ಒಳಗೆ ಮುಗಿಸಲು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ಸ್ವಾತಂತ್ರ್ಯ ದಿನಾಚರಣೆಯೂ ಸೇರಿ ಕೆಲವು ನಾಡ ಹಬ್ಬಗಳಿಗೆ ಧ್ವನಿವರ್ಧಕ ಬಳಸುವುದಕ್ಕೆ 2000ನೇ ಸಾಲಿನ ಶಬ್ದ ಮಾಲಿನ್ಯ (ನಿಯಂತ್ರಣ) ನಿಯಮ 5(3) ರ ಅಡಿ ವಿನಾಯಿತಿ ನೀಡಲಾಗಿದೆ. ಗಣೇಶೋತ್ಸವ, ದಸರಾ, ಶ್ರೀಕೃಷ್ಣ ಜನ್ಮಾಷ್ಠಮಿಗಳೆಲ್ಲ ನಾಡಹಬ್ಬಗಳಲ್ಲವೇ. ಅವುಗಳಿಗೂ ಈ ವಿನಾಯಿತಿಯನ್ನು ವಿಸ್ತರಿಸಬೇಕು. ಧಾರ್ಮಿಕ ಕಾರ್ಯಕ್ರಮಗಳನ್ನು ರಾತ್ರಿ 12ರವರೆಗೆ ಆಚರಿಸಲು ಅನುವು ಮಾಡಿಕೊಡಲೂ ಅವಕಾಶ ಇದೆ. ಆ.27ರಿಂದ ಸೆ.2ರವರೆಗೆ ನಡೆಯುವ ಗಣೇಶೋತ್ಸವ ಹಾಗೂ ಮೆರವಣಿಗೆಗೆ, ಅ.1ರಿಂದ 3ರವರೆಗೆ ನಡೆಯುವ ದಸರಾ ಕಾರ್ಯಕ್ರಮಗಳಿಗೆ ನಿಬಂಧನೆಗಳಿಂದ ವಿನಾಯಿತಿ ನೀಡಬೇಕು ಎಂದು ಕೋರಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದೇವೆ’ ಎಂದರು.
ಸಾರ್ವಜನಿಕ ಕಾರ್ಯಕ್ರಮಗಳಲ್ಲಿ, ಮೆರವಣಿಗೆಗಳಲ್ಲಿ ಡಿ.ಜೆ ನಿಷೇಧಿಸಿರುವ ನಿರ್ಧಾರ ಸ್ವಾಗತಿಸುತ್ತೇವೆ. ಜಿಲ್ಲೆಯನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಕೈಗೊಂಡ ಕ್ರಮಗಳು, ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ ಹರಡುವಿಕೆಗೆ ಕಡಿವಾಣ ಹಾಕಿದ್ದು, ಗೋವುಗಳ ಅಕ್ರಮ ಸಾಗಣೆ ನಿಯಂತ್ರಿಸಿದ ಪೊಲೀಸರ ಕ್ರಮ ಶ್ಲಾಘನೀಯ ಎಂದರು.
‘ಹಬ್ಬಗಳ ಪ್ರಯುಕ್ತ ಏರ್ಪಡಿಸುವ ಕಾರ್ಯಕ್ರಮ ಮೊಟಕುಗೊಳಿಸುವುದು ಸರಿಯಲ್ಲ. ಶಾಮಿಯಾನ, ದೀಪಾಲಂಕಾರ, ವೇದಿಕೆ ನಿರ್ಮಾಣ, ಧ್ವನಿವರ್ಧಕ ಮೊದಲಾದ ಸೇವೆ ಒದಗಿಸಿ ಜೀವನೋಪಾಯ ಕಂಡುಕೊಳ್ಳುವವರಿಗೆ ಇದರಿಂದ ಸಮಸ್ಯೆಯಾಗುತ್ತದೆ’ ಎಂದರು.
ಸುದ್ದಿಗೋಷ್ಠಿಯಲ್ಲಿ ವಿಎಚ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಕೆ.ಪುರುಷೋತ್ತಮ, ಉಪಾಧ್ಯಕ್ಷ ಮನೋಹರ್ ಸುವರ್ಣ, ಪ್ರಾಂತ ಸಹಕಾರ್ಯದರ್ಶಿ ಗೋಪಾಲ್ ಕುತ್ತಾರ್, ಮಠ, ಮಂದಿರ, ಅರ್ಚಕ, ಪುರೋಹಿತ್ ಸಂಪರ್ಕ ಪ್ರಮುಖ್ ಪೊಳಲಿ ಗಿರಿಪ್ರಕಾಶ್ ತಂತ್ರಿ, ಪ್ರದೀಪ ಸರಿಪಲ್ಲ ಮೊದಲಾದವರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.