ಮಂಗಳೂರು: ಮಹಾನಗರ ಪಾಲಿಕೆಯ ಕುದ್ರೋಳಿ ಕಸಾಯಿಖಾನೆಯನ್ನು ಕೇಂದ್ರಿಕರಿಸಿ, ಅಕ್ರಮ ಗೋಕಳ್ಳ ಸಾಗಣೆ ನಡೆಯುತ್ತಿದೆ. ಜೊತೆಗೆ ಅಕ್ರಮ ಗೋಮಾಂಸ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಕೂಡಲೇ ಇಂತಹ ಚಟುವಟಿಕೆಗಳನ್ನು ತಡೆಯಬೇಕು. ಇಂತಹ ಕೃತ್ಯಗಳಲ್ಲಿ ತೊಡಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ವಿಶ್ವ ಹಿಂದೂ ಪರಿಷತ್ ವಿಭಾಗೀಯ ಕಾರ್ಯದರ್ಶಿ ಶರಣ್ ಪಂಪ್‌ವೆಲ್ ಆಗ್ರಹಿಸಿದರು.
ಇಲ್ಲಿನ ಮಹಾನಗರ ಪಾಲಿಕೆ ಕಚೇರಿ ಎದುರು ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ನಗರದ ಇತರೆಡೆ ಇರುವ ಅಕ್ರಮ ಕಸಾಯಿಖಾನೆಗಳಲ್ಲಿ ಗೋಹತ್ಯೆ ಮಾಡಲಾಗುತ್ತಿದ್ದು, ಆ ಮಾಂಸವನ್ನು ನಗರದ ಮಾಂಸದ ಅಂಗಡಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ’ ಎಂದು ದೂರಿದರು.
ಕಳೆದ ವಾರ ಹಾಲು ಸಾಗಣೆ ವಾಹನದಲ್ಲಿ ಗೋಮಾಂಸ ಸಾಗಿಸುತ್ತಿರುವುದು ಪತ್ತೆಯಾಗಿದೆ. ಆ ಸಂದರ್ಭದಲ್ಲಿ 1 ಟನ್ ಗೋಮಾಂಸ ವಶಕ್ಕೆ ಪಡೆಯಲಾಗಿತ್ತು. ಇದೇ 18 ರಂದು ಮೀನಿನ ವಾಹನದಲ್ಲಿ 2.5 ಟನ್ ಗೋಮಾಂಸ ಸಾಗಿಸುತ್ತಿರುವುದು ಬಯಲಿಗೆ ಬಂದಿದೆ ಎಂದು ಹೇಳಿದರು.
ಆದರೆ, ಗೋಕಳ್ಳರು ಸುಳ್ಳು ದಾಖಲೆಗಳನ್ನು ಹಾಜರುಪಡಿಸಿ, ವಶಪಡಿಸಿಕೊಂಡ ಗೋಮಾಂಸವನ್ನು ಬಿಡಿಸಿಕೊಂಡಿದ್ದಾರೆ. ಅದೇ ಗೋಮಾಂಸ ಪಾಲಿಕೆ ವ್ಯಾಪ್ತಿಯ ಮಾಂಸದ ಅಂಗಡಿಗಳಲ್ಲಿ ಮಾರಾಟ ಆಗುತ್ತಿದೆ. ತಕ್ಷಣವೇ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು. ಮಾಂಸದ ಅಂಗಡಿಗಳಿಂದ ಗೋಮಾಂಸ ವಶಕ್ಕೆ ಪಡೆದು, ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಅಂತಹ ಅಂಗಡಿಗಳ ಪರವಾನಗಿ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಗೋಪಾಲ್ ಕುತ್ತಾರ, ಕಾರ್ಯದರ್ಶಿ ಶಿವಾನಂದ ಮೆಂಡನ್, ಬಜರಂಗದಳ ಜಿಲ್ಲಾ ಸಂಚಾಲಕ ಪುನೀತ್ ಅತ್ತಾವರ, ಜಿಲ್ಲಾ ಗೋರಕ್ಷಣಾ ಪ್ರಮುಖರಾದ ಪ್ರದೀಪ್ ಪಂಪ್‌ವೆಲ್, ಗುರುಪ್ರಸಾದ್ ಉಳ್ಳಾಲ ನೇತೃತ್ವ ವಹಿಸಿದ್ದರು.
ನಿರ್ದಾಕ್ಷಿಣ್ಯ ಕ್ರಮಕ್ಕೆ ನಳಿನ್ ಸೂಚನೆ
ಜಿಲ್ಲೆಯಲ್ಲಿ ಗೋ ಕಳ್ಳತನ ಹಾಗೂ ಅಕ್ರಮ ಗೋ ಸಾಗಣೆ ತಡೆಯಲು ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ನಗರ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ಸಂಸದ ನಳಿನ್‌ಕುಮಾರ್ ಕಟೀಲ್ ಸೂಚನೆ ನೀಡಿದ್ದಾರೆ.
ಯಾವುದೇ ರೀತಿಯ ಅಕ್ರಮ ಚಟುವಟಿಕೆಗಳನ್ನು ಬಿಜೆಪಿ ಆಡಳಿತ ಸಹಿಸುವುದಿಲ್ಲ. ಹಿಂಸಾತ್ಮಾಕವಾಗಿ ಗೋವುಗಳನ್ನು ಸಾಗಣೆ ಮಾಡುತ್ತಿರುವ ದುಷ್ಕರ್ಮಿಗಳನ್ನು ಪತ್ತೆ ಹಚ್ಚಲು ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಶಂಕಾಸ್ಪದವಾದ ವಾಹನಗಳನ್ನು ತಪಾಸಣೆ ಮಾಡಬೇಕು. ಅಕ್ರಮ ಗೋಸಾಗಣೆ ಪ್ರಕರಣದಿಂದ ಜಿಲ್ಲೆಯಲ್ಲಿ ಅಶಾಂತಿ ಸೃಷ್ಟಿಯಾಗುವ ಸಾಧ್ಯತೆ ಇದೆ. ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.