ಪುತ್ತೂರು: ವಿವಾಹವಾಗುವುದಾಗಿ ನಂಬಿಸಿ ಯುವತಿಯನ್ನು ಗರ್ಭವತಿಯನ್ನಾಗಿಸಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಂಗ ಹೋರಾಟಕ್ಕಿಂತ ಮಾತುಕತೆಯ ಮೂಲಕ ಸಂತ್ರಸ್ತೆಗೆ ನ್ಯಾಯ ಒದಗಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಬಂದಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ ಅವರು ಮೂವರು ಯತಿಗಳೊಂದಿಗೆ ಪುತ್ತೂರಿನಲ್ಲಿರುವ ಸಂತ್ರಸ್ತೆಯ ಮನೆಗೆ ಶುಕ್ರವಾರ ಭೇಟಿ ನೀಡಿದ್ದಾರೆ.
ವಿಶ್ವಕರ್ಮ ಸಮಾಜದ ಕಲಬುರಗಿ ವಿಶ್ವಕರ್ಮ ಮಠದ ದೊಡ್ಡೇಂದ್ರ ಸ್ವಾಮೀಜಿ, ಕಲಬುರಗಿ ಮೂರು ಜಾವದೀಶ್ವರ ಮಠದ ಪ್ರಣವ ನಿರಂಜನ ಸ್ವಾಮೀಜಿ, ಕೊಪ್ಪಳದ ಸರಸ್ವತಿ ಅಮ್ಮನವರ ಆಸ್ಥಾನದ ಗಣೇಶ್ವರ ಮಹಾ ಸ್ವಾಮೀಜಿ ಜತೆಗಿದ್ದರು. ಸಂತ್ರಸ್ತೆಯ ಮನೆಗೆ ಭೇಟಿ ನೀಡುವ ಮೊದಲು ಅವರು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರನ್ನು ಭೇಟಿ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಪಿ.ನಂಜುಂಡಿ, ಸಂತ್ರಸ್ತೆಗೆ ನ್ಯಾಯ ಸಿಗಬೇಕು. ಕುಟುಂಬದ ಜತೆ ಮಾತನಾಡಲು ನನಗೆ ಅವಕಾಶ ಮಾಡಿಕೊಡಿ ಎಂದು ಕೆಲವು ಪ್ರಮುಖರಲ್ಲಿ ಮಾತನಾಡಲು ಬಂದಿದ್ದೇನೆ. ಈಗಾಗಲೇ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರೊಂದಿಗೆ ಮಾತನಾಡಿದ್ದೇನೆ. ಡಾ.ಪ್ರಭಾಕರ ಭಟ್ ಕಲ್ಲಡ್ಕ, ನಳಿನ್ ಕುಮಾರ್ ಕಟೀಲ್ ಅವರ ಜತೆ ಮಾತನಾಡಲಿದೆ. ನಾನು ಹುಡುಗನ ಕುಟುಂಬದವರೊಂದಿಗೆ ಮಾತನಾಡಿ ರಾಜಿ ಸಂಧಾನದ ಮಾತುಕತೆ ನಡೆಸಲು ಉದ್ದೇಶಿಸಿದ್ದು, ಹುಡುಗ ಮತ್ತು ಹುಡುಗಿ ಪೂರ್ಣ ಜೀವನ ನಡೆಸುವಂತಾಗಬೇಕು. ಮಗುವಿಗೆ ತಂದೆ ಸಿಗುವಂತಾಗಬೇಕು ಎಂಬುದು ನಮ್ಮ ಆಶಯ ಎಂದರು.
ಹುಡುಗನ ತಂದೆ ತಾಯಿಗೆ ಮತ್ತೊಮ್ಮೆ ಮನವಿ ಮಾಡಿದ ಅವರು, ಈ ವಿಚಾರದಲ್ಲಿ ಸಾಧಿಸುವುದು ಏನೂ ಇಲ್ಲ. ಬದುಕು ಕಷ್ಟ ಆಗಬಹುದು. ನ್ಯಾಯಾಂಗ ವ್ಯವಸ್ಥೆಗೆ ಅದರದ್ದೇ ಆದ ಕೆಲಸ ಮಾಡಲು ಆರಂಭಿಸಿದರೆ ತುಂಬಾ ವರ್ಷಗಳ ಕಾಲ ಹುಡುಗ ಸೆರೆಮನೆ ವಾಸ ಮಾಡಬೇಕಾಗುತ್ತದೆ. ಒಂದು ಕಡೆ ನನಗೆ ಮಾತನಾಡಲು ಅವಕಾಶ ಮಾಡಿಕೊಟ್ಟರೆ ನಾನೇ ಬಂದು ಮಾತನಾಡುತ್ತೇನೆ. ಕಾನೂನಿನ ಮೇಲೆ ವಿಶ್ವಾಸವಿದೆ. ಹುಡುಗನ ತಂದೆ ತಾಯಿ ಮೇಲೆ ಅದಕ್ಕಿಂತಲೂ ಹೆಚ್ಚು ವಿಶ್ವಾಸವಿದೆ. ನಾವೆಲ್ಲ ಒಂದಾಗಬೇಕು ಎಂದರು.
ಹುಡುಗನ ಮನೆಯವರಲ್ಲಿ ನೇರವಾಗಿ ಮಾತನಾಡಲು ಹೋಗಲು ನಮಗೆ ಕಷ್ಟ ಆಗಬಹುದು ಎಂದು ಪ್ರಭಾಕರ ಭಟ್ ಅವರಲ್ಲಿ, ನಮಗೆ ವೇದಿಕೆ ಮಾಡಿ ಕೊಡಿ ಎಂದು ಕೇಳಿಕೊಳ್ಳುತ್ತಿದ್ದೇವೆ. ಹುಡುಗನ ಮನೆಯವರು ಮಾತನಾಡಲು ಒಪ್ಪಿಕೊಂಡರೆ ಶೀಘ್ರದ್ಲಲೇ ಸಮಸ್ಯೆಯನ್ನು ಮುಗಿಸಲು ಏನು ಮಾಡಬೇಕೋ ಆ ಪ್ರಯತ್ನ ಮಾಡುತ್ತೇನೆ ಎಂದರು.
ವಿಶ್ವಕರ್ಮ ಸಮಾಜದ ಮುಖಂಡರು ಜತೆಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.