ADVERTISEMENT

ಮಂಗಳೂರಿನಲ್ಲಿರುವ ವಿದ್ಯಾರ್ಥಿಗಳಿಗೆ ತವರಿಗೆ ಮರಳಲು ಕೇರಳ ಸಿಎಂ ಪಿಣರಾಯಿ ಸೂಚನೆ

ಪೌರತ್ವ ತಿದ್ದುಪಡಿ ಕಾಯ್ದೆ ಗಲಭೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಡಿಸೆಂಬರ್ 2019, 4:31 IST
Last Updated 22 ಡಿಸೆಂಬರ್ 2019, 4:31 IST
ಚಿತ್ರಕೃಪೆ: facebook.com/ilovmyksrtc
ಚಿತ್ರಕೃಪೆ: facebook.com/ilovmyksrtc   

ಬೆಂಗಳೂರು: ಮಂಗಳೂರಿನಲ್ಲಿರುವ ಕೇರಳ ಮೂಲದ ವಿದ್ಯಾರ್ಥಿಗಳು ತವರಿಗೆ ಮರಳಲು ಕೇರಳ ಸರ್ಕಾರ ಸಾರಿಗೆ ಸೌಲಭ್ಯ ಕಲ್ಪಿಸಿದೆ. ಮಂಗಳೂರು ಗಲಭೆಗೆ ಕೇರಳ ಮೂಲದವರು ಕಾರಣ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮತ್ತು ಪೊಲೀಸ್ ಕಮಿಷನರ್ ಹರ್ಷ ದೂರಿದ್ದ ಹಿನ್ನೆಲೆಯಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳ ಸುರಕ್ಷೆ ಖಾತ್ರಿಪಡಿಸಲುಕೇರಳ ಸರ್ಕಾರ ಅವರನ್ನು ತವರಿಗೆ ವಾಪಸ್ ಕರೆಸಿಕೊಳ್ಳಲು ನಿರ್ಧರಿಸಿದೆ.

ಗೋಲಿಬಾರ್‌ನಲ್ಲಿ ಮೃತಪಟ್ಟಿದ್ದವರ ಕುಟುಂಬದ ಸದಸ್ಯರಸಂದರ್ಶನ ಮಾಡಲೆಂದು ತೆರಳಿದ್ದ ಮಲಯಾಳಂ ಮಾಧ್ಯಮ ಪ್ರತಿನಿಧಿಗಳ ಬಂಧನವನ್ನು ಗಂಭೀರವಾಗಿ ಪರಿಗಣಿಸಿದ್ದ ಕೇರಳ ಸರ್ಕಾರ, ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳಲೆಂದುಶನಿವಾರ ಐದು ಸರ್ಕಾರಿ ಬಸ್‌ಗಳನ್ನು ಮಂಗಳೂರಿಗೆ ಕಳಿಸಿತ್ತು.

‘ಮಂಗಳೂರಿನಿಂದ ಕೇರಳಕ್ಕೆ ಹಿಂದಿರುಗಲು ಆಗದೆ ತೊಂದರೆ ಅನುಭವಿಸುತ್ತಿದ್ದ ವಿದ್ಯಾರ್ಥಿಗಳು ತಮ್ಮ ಸ್ಥಿತಿಯನ್ನು ಮುಖ್ಯಮಂತ್ರಿ ಕಚೇರಿಗೆ ತಿಳಿಸಿದ್ದರು. ತಕ್ಷಣ ಮಧ್ಯಪ್ರವೇಶಿಸಿದ ಕೇರಳ ಮುಖ್ಯಮಂತ್ರಿ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲು ಅಗತ್ಯ ನೆರವು ನೀಡಲು ಆದೇಶಿಸಿದ್ದರು’ ಎಂದು ಕೇರಳ ಮುಖ್ಯಮಂತ್ರಿ ಕಚೇರಿ ಮೂಲಗಳನ್ನು ಉಲ್ಲೇಖಿಸಿ ‘ದಿ ಪ್ರಿಂಟ್’ ಜಾಲತಾಣ ವರದಿ ಮಾಡಿದೆ.

ADVERTISEMENT

‘ಮಂಗಳೂರಿನಲ್ಲಿರುವ ಎಲ್ಲ ಮಲಯಾಳಿ ವಿದ್ಯಾರ್ಥಿಗಳು ತಕ್ಷಣ ಹಾಸ್ಟೆಲ್‌ಗಳನ್ನು ಬಿಟ್ಟು ಹೊರಟು, ಕೇರಳಕ್ಕೆ ಬರಬೇಕು. ಅಲ್ಲಿ ಪರಿಸ್ಥಿತಿ ತಿಳಿಯಾದ ಮೇಲೆ ಮತ್ತೆ ಮಂಗಳೂರಿಗೆ ಹೋಗಲಿ’ ಎಂದು ಪಿಣರಾಯಿ ಸೂಚಿಸಿದ್ದಾರೆ. ಮುಖ್ಯಮಂತ್ರಿ ಸೂಚನೆ ಮೇರೆಗೆ ಕರ್ನಾಟಕಪೊಲೀಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುವ ಕೇರಳ ಅಧಿಕಾರಿಗಳು ವಿದ್ಯಾರ್ಥಿಗಳ ಸುರಕ್ಷಿತ ಪ್ರಯಣಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಮಂಗಳೂರಿನ ಪಂಪ್‌ವೆಲ್‌ನಿಂದ ಬಸ್‌ನಲ್ಲಿ ವಿದ್ಯಾರ್ಥಿಗಳನ್ನು ಕಾಸರಗೋಡಿಗೆ ಕಳುಹಿಸಲಾಯಿತು.

ಕೇರಳ ತಲುಪಿದ ವಿದ್ಯಾರ್ಥಿಗಳು

ಕಾಸರಗೋಡು: ಗಲಭೆ ಹಾಗೂ ಕರ್ಪ್ಯೂವಿನಿಂದ ನಗರದ ಹಾಸ್ಟೆಲ್ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಸಿಲುಕಿದ್ದ ಕೇರಳದ ನೂರಾರು ವಿದ್ಯಾರ್ಥಿಗಳನ್ನು ವಿಶೇಷ ಬಸ್‌ಗಳಲ್ಲಿ ಶನಿವಾರ ಸಂಜೆ ಕಾಸರಗೋಡಿಗೆ ತಲುಪಿಸಲಾಯಿತು.

ನಗರದಲ್ಲಿ ಸಿಲುಕಿರುವ ವಿದ್ಯಾರ್ಥಿಗಳನ್ನು ಊರಿಗೆ ತಲುಪಿಸಲು ಅನುವು ಮಾಡಿಕೊಡುವಂತೆ ಕೇರಳ ಸರ್ಕಾರ ಮನವಿ ಮಾಡಿತ್ತು. ಕೇರಳ ಕಂದಾಯ ಸಚಿವ ಇ. ಚಂದ್ರಶೇಖರನ್ ಮುತುವರ್ಜಿ ವಹಿಸಿ, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನಿರ್ದೇಶನದಂತೆ ಕೇರಳ ಕೆ.ಎಸ್.ಆರ್.ಟಿ.ಸಿ. ಬಸ್‌ಗಳ ಮೂಲಕ ಇಂದು ಸಂಜೆ ಏಳು ಗಂಟೆ ಸುಮಾರಿಗೆ ವಿದ್ಯಾರ್ಥಿಗಳನ್ನು ಕಾಸರಗೋಡಿಗೆ ಕರೆತರಲಾಯಿತು.

ಪಂಪ್‌ವೆಲ್‌ನಿಂದ ಐದು ಬಸ್‌ಗಳಲ್ಲಿ ವಿದ್ಯಾರ್ಥಿಗಳನ್ನು ಪೊಲೀಸರ ಬೆಂಗಾವಲಿನಲ್ಲಿ ಕಾಸರಗೋಡಿಗೆ ತಲುಪಿಸಿದ್ದು, ಕಂದಾಯ ಸಚಿವ ಇ. ಚಂದ್ರಶೇಖರನ್, ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು.

ಕಾಸರಗೋಡು ಹಾಗೂ ರಾಜ್ಯದ ಇತರ ಜಿಲ್ಲೆಗಳ ವಿದ್ಯಾರ್ಥಿಗಳಿದ್ದು, 300ಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಕಾಸರಗೋಡಿಗೆ ತಲುಪಿಸಿ, ಬಳಿಕ ಅವರ ಊರಿಗೆ ತೆರಳಲು ಜಿಲ್ಲಾಡಳಿತ ಅಗತ್ಯ ಕ್ರಮ ತೆಗೆದುಕೊಂಡಿತು.

ಇಂದಿನಿಂದಲೇ ಊಟ, ಆಹಾರದ ಕೊರತೆ ಉಂಟಾಗಿತ್ತು. ಹಾಸ್ಟೆಲ್ ಕ್ಯಾಂಟೀನ್‌ಗಳಿಂದ 2–3 ದಿನಗಳಿಂದ ಆಹಾರ ಲಭಿಸಿತ್ತು. ಇನ್ನೂ ಅಲ್ಲಿ ಉಳಿಯುತ್ತಿದ್ದರೆ ಆಹಾರಕ್ಕೂ ಸಮಸ್ಯೆ ತಲೆದೋರುತ್ತಿತ್ತು. ಕೇರಳ ಸರ್ಕಾರ ಹಾಗೂ ಜಿಲ್ಲಾಡಳಿತ ತೆಗೆದುಕೊಂಡ ಕ್ರಮದಿಂದ ನಾವು ಸುರಕ್ಷಿತವಾಗಿ ಊರು ಸೇರುವಂತಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದರು.

ಇನ್ನೂ ಯಾರಾದರೂ ವಿದ್ಯಾಥಿಗಳು ಹಾಸ್ಟೆಲ್‌ಗಳಲ್ಲಿ ಸಿಲುಕಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಿ, ಊರಿಗೆ ಕರೆ ತರಲಾಗುವುದು ಎಂದು ಕಾಸರಗೋಡು ಜಿಲ್ಲಾಡಳಿತ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.