ADVERTISEMENT

‘ವಿವಾದ್‌ ಸೆ ವಿಶ್ವಾಸ್‌’ ಉತ್ತಮ ಅವಕಾಶ

ವಿಚಾರಸಂಕಿರಣದಲ್ಲಿ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತೆ ಅಮ್ರಪಾಲಿ ದಾಸ್‌

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2020, 10:23 IST
Last Updated 14 ಮಾರ್ಚ್ 2020, 10:23 IST
ಪಡೀಲ್‌ನ ಐಸಿಎಐ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಚಾರಸಂಕಿರಣದಲ್ಲಿ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತೆ ಅಮ್ರಪಾಲಿ ದಾಸ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ
ಪಡೀಲ್‌ನ ಐಸಿಎಐ ಸಭಾಂಗಣದಲ್ಲಿ ಶುಕ್ರವಾರ ನಡೆದ ವಿಚಾರಸಂಕಿರಣದಲ್ಲಿ ಆದಾಯ ತೆರಿಗೆ ಇಲಾಖೆ ಪ್ರಧಾನ ಆಯುಕ್ತೆ ಅಮ್ರಪಾಲಿ ದಾಸ್‌ ಮಾತನಾಡಿದರು. ಪ್ರಜಾವಾಣಿ ಚಿತ್ರ   

ಮಂಗಳೂರು: ‘ವಿವಾದ್‌ ಸೆ ವಿಶ್ವಾಸ್’ ಯೋಜನೆಯು ತೆರಿಗೆ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದ್ದು, ಇದೇ 31 ರೊಳಗೆ ತೆರಿಗೆ ಪಾವತಿಸುವ ಮೂಲಕ ಸಂಪೂರ್ಣ ಬಡ್ಡಿ ಮತ್ತು ದಂಡ ಮನ್ನಾ ಸೌಲಭ್ಯ ಪಡೆಯಬಹುದಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಮಂಗಳೂರು ಹಾಗೂ ಪಣಜಿಯ ಪ್ರಧಾನ ಆಯುಕ್ತೆ ಅಮ್ರಪಾಲಿ ದಾಸ್ ತಿಳಿಸಿದರು.

ಪಡೀಲ್‌ನ ಐಸಿಎಐ ಭವನದಲ್ಲಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾದ (ಐಸಿಎಐ) ಮಂಗಳೂರು ಶಾಖೆ ವತಿಯಿಂದ ಶುಕ್ರವಾರ ಆಯೋಜಿಸಿದ್ದ ‘ನೇರ ತೆರಿಗೆ ವಿವಾದ ಪರಿಹಾರ ಯೋಜನೆ ‘ವಿವಾದ್‌ ಸೆ ವಿಶ್ವಾಸ್’ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.

ಲೆಕ್ಕಪರಿಶೋಧಕರು, ತೆರಿಗೆ ಪಾವತಿದಾರರು ಮತ್ತು ಇಲಾಖೆಯ ನಡುವಿನ ಅಂತರ ಸಂಪರ್ಕದ ಪಾತ್ರವನ್ನು ವಹಿಸುತ್ತಿದ್ದಾರೆ. ಲೆಕ್ಕಪರಿಶೋಧಕರು ತಮ್ಮ ಗ್ರಾಹಕರೊಂದಿಗೆ ಆದಾಯ ತೆರಿಗೆ ಇಲಾಖೆಯ ಪ್ರತಿನಿಧಿಗಳಾಗಿ ಮಾತನಾಡಬೇಕು. ವಿವಾದ್‌ ಸೆ ವಿಶ್ವಾಸ್‌ ಯೋಜನೆಯಡಿ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ಪರಿಹರಿಸಿಕೊಳ್ಳಲು ಗ್ರಾಹಕರಿಗೆ ಸರಿಯಾದ ಮಾರ್ಗದರ್ಶನ ನೀಡುವ ಮೂಲಕ ಲೆಕ್ಕಪರಿಶೋಧಕರು ರಚನಾತ್ಮಕ ಪಾತ್ರ ವಹಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಆದಾಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಎಸ್‌. ಪಳನಿಕುಮಾರ್‌ ಮಾತನಾಡಿ, ತೆರಿಗೆ ಬಾಕಿಗೆ ಸಂಬಂಧಿಸಿದಂತೆ ಮೇಲ್ಮನವಿ ಆಯುಕ್ತಾಲಯ, ಐಟಿಎಟಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್ ಮತ್ತು ಸಾಲ ವಸೂಲಾತಿ ನ್ಯಾಯಾಧಿಕರಣ ಸೇರಿದಂತೆ ವಿವಿಧ ಮೇಲ್ಮನವಿ ಪ್ರಾಧಿಕಾರಗಳಲ್ಲಿ ಹಲವಾರು ಪ್ರಕರಣಗಳನ್ನು ಬಾಕಿ ಉಳಿದಿವೆ ಎಂದು ತಿಳಿಸಿದರು.

ಪ್ರಸ್ತಾವಿತ ವಿವಾದ್‌ ಸೆ ವಿಶ್ವಾಸ್‌ ಯೋಜನೆಯಡಿ ಇಂತಹ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥ ಮಾಡಿಕೊಳ್ಳಬಹುದಾಗಿದೆ. ವ್ಯಾಜ್ಯಗಳನ್ನು ಪರಿಹರಿಸಲು ಇಚ್ಛಿಸುವ ಗ್ರಾಹಕರು, ಇದೇ 31 ರೊಳಗೆ ಬಾಕಿ ಇರುವ ಸಂಪೂರ್ಣ ತೆರಿಗೆಯನ್ನು ಪಾವತಿಸಬಹುದು. ಅಂತಹ ಗ್ರಾಹಕರಿಗೆ ಸಂಪೂರ್ಣ ಬಡ್ಡಿ ಮತ್ತು ದಂಡವನ್ನು ಮನ್ನಾ ಮಾಡಲು ಅವಕಾಶ ನೀಡಲಾಗುವುದು ಎಂದು ಮಾಹಿತಿ ನೀಡಿದರು.

2018-19ರಲ್ಲಿ 6.49 ಕೋಟಿ, 2017-18ರಲ್ಲಿ 6.74 ಕೋಟಿ ಮತ್ತು ಈ ವರ್ಷದಲ್ಲಿ ಫೆಬ್ರುವರಿವರೆಗೆ 6.67 ಕೋಟಿ ತೆರಿಗೆ ರಿಟರ್ನ್ಸ್ ಸಲ್ಲಿಸಲಾಗಿದೆ ಎಂದ ಅವರು, 2016-17ರಲ್ಲಿ ಕೇವಲ ಶೇ 0.8, 2017-18ರಲ್ಲಿ ಶೇ 0.35 ಮತ್ತು ಕಳೆದ ವರ್ಷ ಶೇ 0.61 ರಷ್ಟು ಮಾತ್ರ ಐಟಿ ರಿಟರ್ನ್‌ಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಹೇಳಿದರು.

ಐಸಿಎಐ ಮಂಗಳೂರು ಶಾಖೆಯ ಅಧ್ಯಕ್ಷ ಎಸ್.ಎಸ್. ನಾಯಕ್, ಪದಾಧಿಕಾರಿಗಳು, ಗ್ರಾಹಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.