ADVERTISEMENT

ದಕ್ಷಿಣ ಕನ್ನಡ: ಜಿಲ್ಲೆಯಲ್ಲಿ 17.24 ಲಕ್ಷ ಮತದಾರರು

ಅಂತಿಮ ಮತದಾರರ ಪಟ್ಟಿ ಪ್ರಕಟ: ಸಿಂಧೂ ಬಿ.ರೂಪೇಶ್‌

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 9:03 IST
Last Updated 14 ಫೆಬ್ರುವರಿ 2020, 9:03 IST
ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಿದರು.
ಅಂತಿಮ ಮತದಾರರ ಪಟ್ಟಿಯನ್ನು ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌, ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಿದರು.   

ಮಂಗಳೂರು: ಚುನಾವಣಾ ಆಯೋಗದ ನಿರ್ದೇಶನದಂತೆ ರಾಷ್ಟ್ರೀಯ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಪೂರ್ಣಗೊಂಡಿದ್ದು, ಅಂತಿಮ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರ ಪಟ್ಟಿ ಸೇರ್ಪಡೆ ಮತ್ತೆ ಮುಂದುವರಿಯಲಿದೆ ಎಂದರು.

ಅಂತಿಮ ಮತದಾರರ ಪಟ್ಟಿ ಪ್ರಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 17,23,960 ಮತದಾರರಿದ್ದಾರೆ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲಿ 17,07,652 ಮತದಾರರಿದ್ದು, ಇದೀಗ 16,308 ಮತದಾರರು ಹೆಚ್ಚಳವಾಗಿದ್ದಾರೆ. ಲಿಂಗಾನುಪಾತದಲ್ಲೂ ಏರಿಕೆಯಾಗಿದ್ದು, ಕಳೆದ ಬಾರಿ 1,037 ಇದ್ದರೆ, ಈ ಬಾರಿ 1,040ಕ್ಕೆ ತಲುಪಿದೆ. ತೃತೀಯ ಲಿಂಗಳು ಕಳೆದ ಬಾರಿ 86 ಆಗಿದ್ದರೆ, ಈ ಬಾರಿ 72 ಮಾತ್ರ ಆಗಿದೆ ಎಂದು ಮಾಹಿತಿ ನೀಡಿದರು.

ADVERTISEMENT

ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ: ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಮಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಗರಿಷ್ಠ 2,40,033 ಮತದಾರರಿದ್ದು, ಇದೇ ಕ್ಷೇತ್ರದಲ್ಲಿ ಗರಿಷ್ಠ ಪ್ರಮಾಣದ 1,25,221 ಮಹಿಳಾ ಮತದಾರರಿದ್ದಾರೆ. ಬೆಳ್ತಂಗಡಿಯಲ್ಲಿ 2,17,146, ಮೂಲ್ಕಿ–ಮೂಡುಬಿದಿರೆಯಲ್ಲಿ 2,02,113, ಮಂಗಳೂರು ಉತ್ತರದಲ್ಲಿ 2,39,368, ಮಂಗಳೂರು ಕ್ಷೇತ್ರದಲ್ಲಿ 1,97,531, ಬಂಟ್ವಾಳದಲ್ಲಿ 2,21,837, ಪುತ್ತೂರಿನಲ್ಲಿ 2,05,170 ಹಾಗೂ ಸುಳ್ಯದಲ್ಲಿ 2,00,762 ಮತದಾರರಿದ್ದಾರೆ ಎಂದು ವಿವರಿಸಿದರು.

ಮತದಾರರ ಮತಗಟ್ಟೆಗೆ ಸಂಬಂಧಿಸಿ ಮಾಹಿತಿಯನ್ನು ದೂರವಾಣಿ ಮೂಲಕ ಪಡೆಯಬಹುದು. ಜಿಲ್ಲೆಯ ಎಲ್ಲ ಮತದಾರರ ನೋಂದಣಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿ ಕಚೇರಿಯಲ್ಲಿ ಕೂಡ ಪರಿಶೀಲಿಸಬಹುದು ಎಂದು ತಿಳಿಸಿದರು.

ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾದ ಬಗ್ಗೆ ಹಾಗೂ ಹೆಚ್ಚುವರಿ ಮಾಹಿತಿಯನ್ನು ceokarnataka.kar.nic.in ವೆಬ್‌ಸೈಟ್‌ನಲ್ಲಿ ನೋಡಬಹುದು. ಮತದಾರರ ಪಟ್ಟಿಗೆ ಸೇರ್ಪಡೆಯಾದವರಿಗೆ ಮತದಾರರ ಗುರುತಿನ ಚೀಟಿ ನೀಡಲಾಗುವುದು ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಇದ್ದರು.

28,479 ಯುವ ಮತದಾರರು
ಜಿಲ್ಲೆಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಒಟ್ಟು 28,479 ಯುವ ಮತದಾರರ ಸೇರ್ಪಡೆಯಾಗಿದೆ. ಮತಗಟ್ಟೆ ಮೂಲಕ 16,834 ಹಾಗೂ ವಿಶೇಷ ಅಭಿಯಾನ ವೇಳೆ 11,645 ಮಂದಿ ನೋಂದಣಿಯಾಗಿದ್ದಾರೆ ಎಂದು ಸಿಂಧೂ ಬಿ.ರೂಪೇಶ್‌ ತಿಳಿಸಿದರು.

ಜನವರಿಯಲ್ಲಿ ಜಿಲ್ಲೆಯ ಎಲ್ಲ ಮತಗಟ್ಟೆಗಳು ಮತ್ತು ಕಾಲೇಜುಗಳಲ್ಲಿ ಹಮ್ಮಿಕೊಂಡ ಮಿಂಚಿನ ನೋಂದಣಿ ಪರಿಣಾಮ ಒಟ್ಟು 18,728 ಮತದಾರರ ನೋಂದಣಿಯಾಗಿದೆ. ಫಾರಂ 6 ಅಡಿಯಲ್ಲಿ 9,992, ಫಾರಂ 7ನಲ್ಲಿ 4,332, ಫಾರಂ 8ನಲ್ಲಿ 4,172 ಹಾಗೂ ಫಾರಂ 8ಎ ಅಡಿಯಲ್ಲಿ 232 ಮತದಾರರ ನೋಂದಣಿಯಾಗಿದೆ. ವಿಶೇಷ ಪರಿಷ್ಕರಣೆಯಲ್ಲಿ ಒಟ್ಟು 59,792 ಮಂದಿ ಸೇರ್ಪಡೆಯಾಗಿದ್ದರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.