ADVERTISEMENT

ವಕ್ಫ್ ಪ್ರತಿಭಟನಾ ಸಭೆ: ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸುಗಮ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2025, 9:08 IST
Last Updated 18 ಏಪ್ರಿಲ್ 2025, 9:08 IST
<div class="paragraphs"><p>ಪ್ರತಿಭಟನಾ ಸಭೆಗೆ ಸಜ್ಜಾಗಿರುವ ವೇದಿಕೆ</p></div>

ಪ್ರತಿಭಟನಾ ಸಭೆಗೆ ಸಜ್ಜಾಗಿರುವ ವೇದಿಕೆ

   

ಮಂಗಳೂರು: ವಕ್ಫ್‌ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರ ಹೊರವಲಯದ ಕಣ್ಣೂರು ಅಡ್ಯಾರ್‌ನ ಅಡ್ಯಾರ್‌ ಶಾ ಮೈದಾನದಲ್ಲಿ ಶುಕ್ರವಾರ ಸಂಜೆ ಪ್ರತಿಭಟನಾ ಸಭೆ ನಡೆಯಲಿದೆ. ಕಾರ್ಯಕ್ರಮ ನಡೆಯಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಧ್ಯಾಹ್ನದವರೆಗೂ ವಾಹನ ಸಂಚಾರ ನಿಸಂಚಾರ ಸುಗಮವಾಗಿದೆ.

ವಕ್ಫ್‌ ತಿದ್ದುಪಡಿ ಕಾಯ್ದೆ ವಿಷಯ ಸುಪ್ರಿಂ ಕೋರ್ಟ್‌ನಲ್ಲಿದೆ. ಪ್ರತಿಭಟನೆಗೆ ಅವಕಾಶ ನೀಡುವ ಮೊದಲು ರಾಜ್ಯ ಸರ್ಕಾರ ಈ ಅಂಶವನ್ನು ಗಮನದಲ್ಲಿ ಇರಿಸಿಕೊಳ್ಳಬೇಕು, ಪ್ರತಿಭಟನೆಗಾಗಿ ಹೆದ್ದಾರಿ ಬಂದ್ ಮಾಡಲು ಅವಕಾಶ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ ಗುರುವಾರ ಅಭಿಪ್ರಾಯಪಟ್ಟಿತ್ತು.

ADVERTISEMENT

ಬಿಸಿ ರೋಡ್ ಮತ್ತು ಮಂಗಳೂರು ನಡುವೆ ಸಂಚರಿಸುವ ವಾಹನಗಳು ಪ್ರತಿಭಟನೆಯ ಕಾರಣ ಬದಲಿ ಮಾರ್ಗದ ಮೂಲಕ ಸಂಚರಿಸಬೇಕು ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಬುಧವಾರ ಸಂಜೆ ಆದೇಶ ಹೊರಡಿಸಿದ್ದರು. ರಾಷ್ಟ್ರೀಯ ಹೆದ್ದಾರಿಯನ್ನು ಬಂದ್ ಮಾಡಿದ್ದಕ್ಕೆ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಸೇರಿದಂತೆ ಹಲವರಿಂದ ವಿರೋಧ ವ್ಯಕ್ತವಾಗಿತ್ತು. ಫರಂಗಿಪೇಟೆಯ ರಾಜೇಶ್ ಅರ್ಕುಳ ಅವರು ಸಲ್ಲಿಸಿದ್ದ ರಿಟ್ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಬುಧವಾರ ಸಂಜೆ ಆದೇಶ ನೀಡಿತ್ತು.

ಶುಕ್ರವಾರ ಬೆಳಿಗ್ಗೆಯಿಂದ ಮಂಗಳೂರು–ಬಿಸಿ ರೋಡ್ ರಸ್ತೆಯಲ್ಲಿ ವಾಹನಗಳು ಸಂಚರಿಸುತ್ತಿವೆ. ಆದರೆ ವಾಹನಗಳ ಸಂಖ್ಯೆ ವಿರಳವಾಗಿದೆ.

‘ರಸ್ತೆ ಬಂದ್ ಮಾಡುವಂತಿಲ್ಲ ಎಂದು ನ್ಯಾಯಾಲಯ ಸೂಚಿಸಿದೆ. ಅದನ್ನು ಪಾಲನೆ ಮಾಡಲೇಬೇಕು. ಅದನ್ನು ಹೇಗೆ ಜಾರಿ ಮಾಡಬೇಕು ಎಂಬುದರ ಬಗ್ಗೆ ಚರ್ಚಿಸುತ್ತಿದ್ದೇವೆ’ ಎಂದು ಸಂಚಾರ ವಿಭಾಗದ ಡಿಸಿಪಿ ರವಿಶಂಕರ್ ತಿಳಿಸಿದರು.

‘ಸುಗಮ ಸಂಚಾರ ಮತ್ತು ವಾಹನ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. 350 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇವರ ಪೈಕಿ ಮೂವರು ಎಸಿಪಿ, 10 ಮಂದಿ ಇನ್‌ಸ್ಪೆಕ್ಟರ್‌ಗಳು, 15 ಸಬ್‌ ಇನ್‌ಸ್ಪೆಕ್ಟರ್‌, 50 ಎಎಸ್ಐಗಳು ಇದ್ದಾರೆ’ ಎಂದು ರವಿಶಂಕರ್ ವಿವರಿಸಿದರು.

‘ಭದ್ರತೆಗಾಗಿ 2000 ಪೊಲೀಸರನ್ನು ನಿಯೋಜಿಸಲಾಗಿದೆ’ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಸಿದ್ಧಾರ್ಥ್ ಗೋಯಲ್ ತಿಳಿಸಿದರು.

ಮಂಗಳೂರು ನಗರ, ಪ್ರತಿಭಟನಾ ಸಭೆ ನಡೆಯಲಿರುವ ಅಡ್ಯಾರ್‌ ಷಾ ಮೈದಾನ ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರ ಸರ್ಪಗಾವಲು ಏರ್ಪಡಿಸಲಾಗಿದೆ. ವಾಹನಗಳ ತಪಾಸಣೆಯೂ ನಡೆಯುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.