ADVERTISEMENT

ತಿಂಗಳಾಂತ್ಯದಲ್ಲಿ ವಾರ್ಡ್ ಸಮಿತಿ ಸದಸ್ಯರ ಪಟ್ಟಿ

ವೆಬಿನಾರ್‌ನಲ್ಲಿ ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 16:53 IST
Last Updated 12 ಫೆಬ್ರುವರಿ 2021, 16:53 IST
ಮಂಗಳೂರಿನ ವಾರ್ಡ್ ಸಮಿತಿಗೆ ಸಂಬಂಧಿಸಿದಂತೆ ಶುಕ್ರವಾರ ಜನಾಗ್ರಹದ ‘9 ನೇ ಸಿಟಿ ಪಾಲಿಟಿಕ್ಸ್ - ನಗರ ರಾಜಕೀಯ’ದ ವೆಬಿನಾರ್‌ ನಡೆಯಿತು.
ಮಂಗಳೂರಿನ ವಾರ್ಡ್ ಸಮಿತಿಗೆ ಸಂಬಂಧಿಸಿದಂತೆ ಶುಕ್ರವಾರ ಜನಾಗ್ರಹದ ‘9 ನೇ ಸಿಟಿ ಪಾಲಿಟಿಕ್ಸ್ - ನಗರ ರಾಜಕೀಯ’ದ ವೆಬಿನಾರ್‌ ನಡೆಯಿತು.   

ಮಂಗಳೂರು: ಮಹಾನಗರ ಪಾಲಿಕೆಯು ಫೆಭ್ರುವರಿ ಅಂತ್ಯದೊಳಗೆ ವಾರ್ಡ್ ಸಮಿತಿ ಸದಸ್ಯರ ಮಾಹಿತಿಯನ್ನು ಬಿಡುಗಡೆ ಮಾಡಲಾಗುವುದು. ಇದಾದ ನಂತರ ಸಾರ್ವಜನಿಕರ ಆಕ್ಷೇಪಣೆ ಇದ್ದಲ್ಲಿ, ಅದನ್ನು ಸ್ವೀಕರಿಸಲಾಗುವುದು ಎಂದು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ ಶ್ರೀಧರ್‌ ಭರವಸೆ ನೀಡಿದರು.

‘ಮಂಗಳೂರಿನ ವಾರ್ಡ್ ಸಮಿತಿಗೆ ನಾಗರಿಕರ ಮತ್ತು ರಾಜಕಾರಣಿಗಳ ಸಹಯೋಗ’ ಶೀರ್ಷಿಕೆಯಡಿ ಶುಕ್ರವಾರ ಆಯೋಜಿಸಿದ್ದ ಜನಾಗ್ರಹದ ‘9 ನೇ ಸಿಟಿ ಪಾಲಿಟಿಕ್ಸ್ - ನಗರ ರಾಜಕೀಯ’ದ ವೆಬಿನಾರ್‌ನಲ್ಲಿ ಅವರು ಮಾತನಾಡಿದರು.

ಸ್ಥಳೀಯ ಅಧಿಕಾರಿಗಳಿಂದ ವಾರ್ಡ್‌ಗಳ ತನಿಖೆಯು ಮುಕ್ತಾಯಗೊಂಡಿದ್ದು, ಇದರ ಫಲಿತಾಂಶವನ್ನು ಒಂದೆರೆಡು ದಿನಗಳ ಒಳಗಡೆ ಬಿಡುಗಡೆ ಮಾಡಲಾಗುವುದು. ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರ ವಾರ್ಡ್ ಸಮಿತಿ ಸದಸ್ಯರ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು. ಇದರ ನಂತರ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ, ಅದನ್ನು ಗಣನೆಗೆ ತೆಗೆದುಕೊಂಡು ನಂತರ ವಾರ್ಡ್ ಸಮಿತಿ ಸದಸ್ಯರ ಹೆಸರನ್ನು ಅಂತಿಮಗೊಳಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ತಪ್ಪಾಗಿರುವ ಮಾಹಿತಿ ಅಥವಾ ಸುಳ್ಳು ಮಾಹಿತಿ ಹೊಂದಿರುವ ಅರ್ಜಿಗಳನ್ನು ತಿರಸ್ಕರಿಸಬಹುದು. ಆದರೆ, ಬೇರೆ ಬೇರೆ ಅರ್ಹತೆಯಿರುವ ನಾಗರಿಕರನ್ನು ಆಯ್ಕೆ ಮಾಡುವುದು ನೋಡಲ್ ಅಧಿಕಾರಿಗಳಿಗೂ ಕಷ್ಟಕರವಾಗುತ್ತದೆ. ಯಾರನ್ನು ಆಯ್ಕೆ ಮಾಡಬೇಕು ಎಂಬುದರ ಮೇಲೆ ಯಾವುದೇ ಕಟ್ಟುನಿಟ್ಟಾದ ನಿಯಮವಿಲ್ಲ. ಅದಕ್ಕಾಗಿ ಸಾರ್ವಜನಿಕರು ವಾರ್ಡ್ ಸಮಿತಿ ಸದಸ್ಯರಲ್ಲಿ ಯಾರಿಗೆ ಹೆಚ್ಚು ಅರ್ಹತೆಯಿದೆ ಅಥವಾ ಯಾರು ಆ ಸ್ಥಾನಕ್ಕೆ ಅರ್ಹರಲ್ಲ ಎಂಬುದನ್ನು ತಿಳಿಸಬಹುದು’ ಎಂದು ಹೇಳಿದರು.

ವಾರ್ಡ್ ಸಮಿತಿಗಳು ಮಾರ್ಚ್‌ನಿಂದ ಕೆಲಸ ಆರಂಭಿಸಲಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್ ಶ್ರೀಧರ್‌, ‘ಇದಕ್ಕೆ ಅನೇಕ ವಿಷಯಗಳನ್ನು ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ತಿಳಿಸಿದರು.

‘ಬೆಂಗಳೂರನ್ನು ಹೊರತುಪಡಿಸಿ, ರಾಜ್ಯದ ಬೇರೆಲ್ಲೂ ವಾರ್ಡ್ ಸಮಿತಿಗಳು ಇಲ್ಲ. ನನ್ನ ಪ್ರಕಾರ, ಈ ಪ್ರಕ್ರಿಯೆಯು ನಿಧಾನವಾಗಿ ನಡೆದಲ್ಲಿ, ಹೆಚ್ಚು ಪರಿಣಾಮಕಾರಿಯಾಗಿ ಇರಲಿದೆ. ಮೊದಲನೆಯದಾಗಿ, ಕಾರ್ಪೊರೇಟರ್‌ಗಳು, ನಾಗರಿಕರು ಮತ್ತು ಅಧಿಕಾರಿಗಳು ವಾರ್ಡ್ ಸಮಿತಿಗೆ ಹೊಂದಿಕೊಳ್ಳಬೇಕು. ಹಲವಾರು ಪ್ರಕ್ರಿಯೆಗಳ ಬಗ್ಗೆ ತಿಳಿದುಕೊಳ್ಳುವುದು ಹಾಗೂ ವಿವಿಧ ಹಂತಗಳಲ್ಲಿ ತರಬೇತಿಯನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಪುಸ್ತಕದಲ್ಲಿ ನೋಡುವುದಕ್ಕೂ, ನಿಜ ಜೀವನದಲ್ಲಿ ಅಳವಡಿಸುವುದಕ್ಕೂ ವ್ಯತ್ಯಾಸವಿದೆ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.