ADVERTISEMENT

ಒಂದಡೆ ಪ್ರವಾಹದಿಂದ ತತ್ತರ– ಕೆಲವೆಡೆ ನೀರಿಗೂ ತತ್ವಾರ

ಪಾಲಿಕೆ ಸದಸ್ಯರ ಪ್ರಶ್ನೆಗಳಿಗೆ ಅಧಿಕಾರಿಗಳು ನಿರುತ್ತರ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2022, 7:48 IST
Last Updated 7 ಆಗಸ್ಟ್ 2022, 7:48 IST
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಸಂಶುದ್ದೀನ್‌ ಹಾಗೂ ಝೀನತ್‌ ಅವರು ಫಲಕ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಉಪಮೇಯರ್‌ ಸುಮಂಗಳಾ, ಮೇಯರ್‌ ಪ್ರೇಮಾನಂದ ಶೆಟ್ಟಿ, ಆಯುಕ್ತ ಅಕ್ಷಯ್‌ ಶ್ರೀಧರ್‌ ಹಾಗೂ ಇತರ ಸದಸ್ಯರು ಇದ್ದಾರೆ
ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಸಂಶುದ್ದೀನ್‌ ಹಾಗೂ ಝೀನತ್‌ ಅವರು ಫಲಕ ಹಿಡಿದು ಮೌನ ಪ್ರತಿಭಟನೆ ನಡೆಸಿದರು. ಉಪಮೇಯರ್‌ ಸುಮಂಗಳಾ, ಮೇಯರ್‌ ಪ್ರೇಮಾನಂದ ಶೆಟ್ಟಿ, ಆಯುಕ್ತ ಅಕ್ಷಯ್‌ ಶ್ರೀಧರ್‌ ಹಾಗೂ ಇತರ ಸದಸ್ಯರು ಇದ್ದಾರೆ   

ಮಂಗಳೂರು: ನಗರದಲ್ಲಿ ಧಾರಾಕಾರ ಮಳೆಗೆ ತೊಯ್ದು ತೊಪ್ಪೆಯಾಗುವ ಸ್ಥಿತಿ ಒಂದೆಡೆಯಾದರೆ, ಇನ್ನು ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿಗೂ ತತ್ವಾರ. ನಗರದ ಜನತೆ ಎದುರಿಸುತ್ತಿರುವ ಈ ವಿರೋಧಾಭಾಸದ ಸ್ಥಿತಿಗೆ ಮಂಗಳೂರು ಮಹಾನಗರ ಪಾಲಿಕೆಯ ಸಾಮಾನ್ಯ ಸಭೆ ಕನ್ನಡಿ ಹಿಡಿಯಿತು.

ಮೇಯರ್‌ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಭೆಯಲ್ಲಿ ಕುದ್ರೋಳಿ ವಾರ್ಡ್‌ ಸದಸ್ಯ ಸಂಶುದ್ದೀನ್‌ ಹಾಗೂ ಬಂದರು ವಾರ್ಡ್‌ನ ಸದಸ್ಯೆ ಝೀನತ್‌ ಸಂಶುದ್ದೀನ್‌ ನೀರು ಪೂರೈಕೆ ತಾರತಮ್ಯ ನಿವಾರಿಸಬೇಕು ಎಂದು ಒತ್ತಾಯಿಸಿ ಭಿತ್ತಿಫಲಕ ಹಿಡಿದು ಮೌನ ಧರಣಿ ನಡೆಸಿದರು. ಸಮಸ್ಯೆ ನೀಗಿಸುವುದಾಗಿ ಮೇಯರ್‌ ಭರವಸೆ ನೀಡಿದ ಬಳಿಕ ಆಸನಗಳತ್ತ ಮರಳಿದರು.

ಸಂಶುದ್ದೀನ್‌, ‘ಕುದ್ರೋಳಿ ಹಾಗೂ ಬಂದರು ವಾರ್ಡ್‌ಗಳ ನೀರಿನ ಸಮಸ್ಯೆ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ತಿಂಗಳಿನಲ್ಲಿ ಸಾಲು ಸಾಲು ಹಬ್ಬಗಳಿದ್ದರೂ ಸಮಸ್ಯೆ ನೀಗಿಸಲು ಕ್ರಮಕೈಗೊಂಡಿಲ್ಲ’ ಎಂದರು. ಇದಕ್ಕೆ ದನಿಗೂಡಿಸಿದ ಆಡಳಿತ ಪಕ್ಷದ ಸುಧೀರ್‌ ಶೆಟ್ಟಿ ಮತ್ತು ಜಗದೀಶ್‌ ಶೆಟ್ಟಿ, ‘ವಿವೇಕನಗರ ಹಾಗೂ ಬೋಳೂರಿನಲ್ಲೂ ನೀರು ಪೂರೈಕೆ ಸಮಸ್ಯೆ ಇದೆ’ ಎಂದು ಗಮನ ಸೆಳೆದರು.

ADVERTISEMENT

ಎಂಜಿನಿಯರ್‌ ಚೇತನ್‌, ‘ತುಂಬೆ ಕಿಂಡಿ ಅಣೆಕಟ್ಟು ಕೇಂದ್ರದಲ್ಲಿ ಅಥವಾ ಪಂಪಿಂಗ್‌ ಕೇಂದ್ರಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡರೆ ದುರಸ್ತಿಗೆ ನಾಲ್ಕೈದು ದಿನಗಳೇ ಬೇಕು. ಮುಖ್ಯಕೊಳವೆ ಹಾನಿಗೊಂಡು ನೀರು ಸೋರಿಕೆಯಾಗುತ್ತಿದ್ದು, ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ‘ನೀರು ಪೂರೈಕೆಯ ಗಂಭೀರ ಸಮಸ್ಯೆ ಇರುವ ವಾರ್ಡ್‌ಗಳಲ್ಲಿ ವಾಲ್ವ್‌ಮನ್‌ಗಳ ಸಭೆ ಕರೆದು ಸಮಸ್ಯೆ ನೀಗಿಸಬೇಕು’ ಎಂದು ಸೂಚನೆ ನೀಡಿದರು.

ಕಾಂಗ್ರೆಸ್‌ನ ನವೀನ್‌ ಡಿಸೋಜ ಅವರ ಪ್ರಶ್ನೆಗೆ ಉತ್ತರಿಸಿದ ಮೇಯರ್‌, ‘ಕುಡಿಯುವ ನೀರಿನ ಶುಲ್ಕ ಇಳಿಕೆ 2023 ಆ.1ರವರೆಗೆ ಜಾರಿಯಲ್ಲಿರಲಿದೆ. ಆ ಬಳಿಕ ಪಾಲಿಕೆಯಲ್ಲಿ ನಿರ್ಣಯ ಕೈಗೊಂಡು ಇದನ್ನು ವಿಸ್ತರಿಸಬಹುದು’ ಎಂದರು.

‘ಹೆಚ್ಚಳವಾಗಿದ್ದ ನೀರಿನ ದರವನ್ನು ಚುನಾವಣೆ ಸಲುವಾಗಿ ಇಳಿಕೆ ಮಾಡಲಾಗಿದೆ’ ಎಂದು ಕಾಂಗ್ರೆಸ್‌ ಸದಸ್ಯರು ಆರೋಪಿಸಿದರು.

‘ರಾಜ್ಯದಲ್ಲಿ ಸದ್ಯ ಕುಡಿಯುವ ನೀರಿನ ದರ ಅತ್ಯಂತ ಕಡಿಮೆ ಇರುವುದು ಮಂಗಳೂರಿನಲ್ಲಿ’ ಎಂದು ಸುಧೀರ್‌ ಶೆಟ್ಟಿ ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಶಶಿಧ‌ರ ಹೆಗ್ಡೆ,‘ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಕೇವಲ ₹ 64ಕ್ಕೆ 24 ಸಾವಿ‌ರ ಲೀಟರ್‌ ನೀರನ್ನು ಪೂರೈಸಲಾಗುತ್ತಿತ್ತು’ ಎಂದರು.

ಹೆದ್ದಾರಿ ಸಮಸ್ಯೆ – ಪರಿವೀಕ್ಷಣೆ ಆ.8ರಂದು

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಡೀಲ್‌, ಕಣ್ಣೂರಿನ ಬಳಿ ಮಳೆನೀರು ನಿಲ್ಲುವುದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಮೋರಿಯೇ ಇದಕ್ಕೆ ಕಾರಣ ಎಂದು ಸದಸ್ಯರಾದ ಚಂದ್ರಾವತಿ ಹಾಗೂ ಸುಧೀರ್‌ ಶೆಟ್ಟಿ ಆರೋಪಿಸಿದರು.

ಕೊಟ್ಟಾರಚೌಕಿಯಲ್ಲಿ ಹೆದ್ದಾರಿ ಮುಳುಗಡೆಯಾಗಿರುವುದಕ್ಕೆ ಅಲ್ಲಿ ಹೆದ್ದಾರಿಯನ್ನು ಹಾದುಹೋಗುವ ರಾಜಕಾಲುವೆಯ ಅವೈಜ್ಞಾನಿಕ ವಿನ್ಯಾಸವೇ ಕಾರಣ ಎಂದು ಸದಸ್ಯ ಕಿರಣ್‌ ದೂರಿದರು. ಕೂಳೂರಿನಲ್ಲಿ ಹಾಗೂ ನಂತೂರಿನಲ್ಲಿ ಸರ್ವೀಸ್‌ ರಸ್ತೆ ಹದಗೆಟ್ಟಿರುವ ಬಗ್ಗೆಯೂ ಕೆಲವು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

‘ಲಘುವಾಹನಗಳ ಸಂಚಾರಕ್ಕೆ ಪೂರಕವಾಗಿ ವಿನ್ಯಾಸಗೊಳಿಸಲಾದ ಸರ್ವೀಸ್ ರಸ್ತೆಗಳು ಭಾರಿ ವಾಹನಗಳ ಭಾರ ತಾಳಿಕೊಳ್ಳುವುದಿಲ್ಲ. ಹದಗೆಟ್ಟ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುತ್ತೇವೆ’ ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಯೋಜನಾ ನಿರ್ದೇಶಕ ಲಿಂಗೇಗೌಡ ಭರವಸೆ ನೀಡಿದರು.

ಪಂಪ್‌ವೆಲ್‌ನಿಂದ ಎಕ್ಕೂರು ಗೋರಿಗುಡ್ಡವರೆಗಿನ ಸರ್ವೀಸ್‌ ರಸ್ತೆ ಕಾಮಗಾರಿ ಪೂರ್ಣಗೊಳಿಸುವಂತೆ ಕಾಂಗ್ರೆಸ್‌ನ ಪ್ರವೀಣಚಂದ್ರ ಆಳ್ವ ಒತ್ತಾಯಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಸಮಸ್ಯೆಗಳನ್ನು ಎನ್‌ಎಚ್‌ಎಐ ಅಧಿಕಾರಿಗಳು, ಪಾಲಿಕೆ ಎಂಜಿನಿಯರ್‌ಗಳು ಜಂಟಿಯಾಗಿ ಪರಿಶೀಲಿಸಬೇಕು, ತಟಸ್ಥ ಸಂಸ್ಥೆಯಿಂದಲೂ ಪರಿಶೀಲನಾ ವರದಿಯನ್ನು ಪಡೆದು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕು ಎಂದು ಪಾಲಿಕೆ ಆಯುಕ್ತರು ಸೂಚಿಸಿದರು. ಸೋಮವಾರವೇ ಸ್ಥಳ ಪರಿವೀಕ್ಷಣೆ ನಡೆಸುವುದಾಗಿ ಎನ್‌ಎಚ್‌ಎಐ ಯೋಜನಾ ನಿರ್ದೇಶಕರು ಭರವಸೆ ನೀಡಿದರು.

–0–

ಮತ್ತೆ ಸಾಲ:ಕಾಂಗ್ರೆಸ್‌ ಆಕ್ಷೇಪ

ಅಪೂರ್ಣ ಕಾಮಗಾರಿಗಳನ್ನು ಪೂರ್ತಿಗೊಳಿಸುವುದಕ್ಕೆ ಮತ್ತೆ ಸಾಲ ಪಡೆಯುವುದಕ್ಕೆ ಕಾಂಗ್ರೆಸ್‌ನ ಅಬ್ದುಲ್‌ ರವೂಫ್‌ ಆಕ್ಷೇಪ ವ್ಯಕ್ತಪಡಿಸಿದರು.

‘ಡಬಲ್‌ ಎಂಜಿನ್ ಸರ್ಕಾರ ಇರುವಾಗ ಶಾಸಕರು ಹೆಚ್ಚಿನ ಅನುದಾನ ತರಬೇಕೇ ಹೊರತು, ಪಾಲಿಕೆಯನ್ನು ಮತ್ತಷ್ಟು ಸಾಲದ ಶೂಲಕ್ಕೆ ತಳ್ಳುವುದು ಸರಿಯಲ್ಲ’ ಎಂದು ರವೂಫ್‌ ಟೀಕಿಸಿದರು.

‘ಈಗಾಗಲೇ ಕೈಗೊಂಡ ಕಾಮಗಾರಿಗಳ ಸಂಪೂರ್ಣ ಪ್ರಯೋಜನ ಪಡೆಯಲು ಸಾಲ ಪಡೆಯುವುದು ಅನಿವಾರ್ಯ’ ಎಂದು ಮೇಯರ್‌ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.