ಮಂಗಳೂರು: ನಗರದ ವೆನ್‌ಲಾಕ್ ಸರ್ಕಾರಿ ಜಿಲ್ಲಾ ಆಸ್ಪತ್ರೆಯು 175 ವರ್ಷ ಪೂರೈಸಿದೆ. ಈ ಸಂಭ್ರಮ ಪ್ರಯುಕ್ತ ವೆನ್‌ಲಾಕ್ ಆಸ್ಪತ್ರೆಯ ಹಳೆ ವಿದ್ಯಾರ್ಥಿ ಸಂಘವನ್ನು ಆರಂಭಿಸಲಾಗಿದ್ದು, ಲೇಡಿಗೋಶನ್ ಮತ್ತು ಕೆಎಂಸಿ ಆಸ್ಪತ್ರೆಗಳ ಸಹಯೋಗದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ಕುರಿತು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಮತ್ತು ಜಿಲ್ಲಾ ಶಸ್ತಚಿಕಿತ್ಸಕ ಡಾ.ಶಿವಪ್ರಕಾಶ್ ಡಿ.ಎಸ್. ‘1848ರಲ್ಲಿ ಈ ಆಸ್ಪತ್ರೆ ಆರಂಭವಾಗಿದೆ. ಸೆ. 14ರಂದು ನಗರದ ಟಿಎಂಎ ಪೈ ಕೆನ್ವೆನ್ಶನ್ ಸೆಂಟರ್‌ಲ್ಲಿ ಆಸ್ಪತ್ರೆಯ 175ರ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಿದ್ದೇವೆ. ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ ಆಸ್ಪತ್ರೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ಈ ಸಡಗರವನ್ನು ಆಚರಿಸಲು ಕ್ರಮವಹಿಸಿದ್ದೇವೆ. ಸಂಭ್ರಮಾಚರಣೆಯ ಅಂಗವಾಗಿ ಆಸ್ಪತ್ರೆ ಹೆಸರಿನಲ್ಲಿ ನಾಣ್ಯ ಹಾಗೂ ಅಂಚೆಚೀಟಿ ಹಾಗೂ ಮ್ಯಾಗಜಿನ್ ಬಿಡುಗಡೆ ಮಾಡಲಾಗುವುದು’ ಎಂದು ಅವರು ತಿಳಿಸಿದರು
ಬಡರೋಗಿಗಳಿಗೆ ‘ಕರುಣೆಯ ತೊಟ್ಟಿಲು': ಆಸ್ಪತ್ರೆಗೆ ಬರುವ ನಿರ್ಗತಿಕರು, ಅಂಗವಿಕಲರು ಅಥವಾ ಬಡ ರೋಗಿಗಳಿಗೆ ಬಟ್ಟೆಗಳನ್ನುಉಚಿತವಾಗಿ ಒದಗಿಸಲು ಆಸ್ಪತ್ರೆಯ ತುರ್ತು ನಿಗಾ ಘಟಕ, ಮಕ್ಕಳ ಆಸ್ಪತ್ರೆ ಹಾಗೂ ಹೊರರೋಗಿಗಳ ವಿಭಾಗಗಳಲ್ಲಿ`ಕರುಣೆಯ ತೊಟ್ಟಿಲು' ಎಂಬ ಕಪಾಟುಗಳನ್ನು ಇಡುತ್ತೇವೆ. ಅದರಲ್ಲಿ ಸಂಗ್ರಹವಾಗುವ ಸುಸ್ಥಿತಿಯ ಬಟ್ಟೆಗಳನ್ನು ಅಗತ್ಯವಿರುವವರಿಗೆ ನೀಡುತ್ತೇವೆ. ಈ ಕಾರ್ಯದ ಮೂಲಕ 175 ವರ್ಷಗಳ ಸಂಭ್ರಮಾಚರಣೆಗೆ ಚಾಲನೆ ನಡೆಯಲಿದೆ’ ಎಂದು ಅವರು ತಿಳಿಸಿದರು.
ಲೇಡಿಗೋಶನ್ ಆಸ್ಪತ್ರೆಯ ಅಧೀಕ್ಷಕ ಡಾ.ದುರ್ಗಾ ಪ್ರಸಾದ್, ‘ಜಿಲ್ಲೆಯ ತಾಯಿ ಮತ್ತು ಮಕ್ಕಳ ಮೊದಲ ಸರ್ಕಾರಿ ಆಸ್ಪತ್ರೆಯಾದ ಲೇಡಿಗೋಶನ್ ಆಸ್ಪತ್ರೆಯೂ ಈ ಸಡಗರದಲ್ಲಿ ಭಾಗಿಯಾಗುತ್ತಿದೆ.ಈ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡುವವರಲ್ಲಿ ಜಿಲ್ಲೆಯ ರೋಗಿಗಳ ಪ್ರಮಾಣ ಶೇ 58 ರಟ್ಟಿದೆ. ಹೊರ ರಾಜ್ಯಗಳಿಂದ ಶೇ 22ರಷ್ಟು ಹಾಗೂ ಹೊರ ಜಿಲ್ಲೆಗಳಿಂದ ಶೇ 20ರಷ್ಟು ರೋಗಿಗಳು ಇಲ್ಲಿಗೆ ದಾಖಲಾಗುತ್ತಿದ್ದಾರೆ. ಕೆಎಂಸಿ ಆಸ್ಪತ್ರೆ ವೈದ್ಯರು ಹಾಗೂ ವೈದ್ಯಕೀಯ ಸಹಕಾರದಿಂದಾಗಿ ಈ ಎರಡು ಆಸ್ಪತ್ರೆಗಳನ್ನು ಚೆನ್ನಾಗಿ ನಿರ್ವಹಣೆ ಮಾಡಲು ಸಾಧ್ಯವಾಗಿದೆ’ ಎಂದರು.
ಲೇಡಿಗೋಶನ್ ಆಸ್ಪತ್ರೆಯಲ್ಲಿ 2018-19ರಲ್ಲಿ 22 ಬಾಣಂತಿಯರ ಸಾವು ಸಂಭವಿಸಿತ್ತು. ಅಪಾಯಕರ ಹೆರಿಗೆ ನಿರ್ವಹಣೆಗ ವಿಶೇಷ ವ್ಯವಸ್ಥೆ ರೂಪಿಸಿದ ಬಳಿಕ ಬಾಣಂತಿಯರ ಮರಣ ಪ್ರಮಾಣ ಶೂನ್ಯಕ್ಕೆ ಇಳಿದಿದೆ. ಹೆರಿಗೆಯ ಸಂದರ್ಭದ ಶಿಶು ಮರಣ ಪ್ರಮಾಣವನ್ನೂ ಶೂನ್ಯಕ್ಕೆ ಇಳಿಸಲು ಪ್ರಯತ್ನಿಸುತ್ತಿದ್ದೇವೆ’ ಎಂದು ತಿಳಿಸಿದರು.
ಕೊಯಿಕ್ಕೋಡ್‌ನಿಂದ ಮಂಗಳೂರಿನವರೆಗಿನ ಮಾರ್ಗದಲ್ಲಿ ಐದು ಮೆಡಿಕಲ್ ಕಾಲೇಜುಗಳಿವೆ. ಆದರೂ ಇಂದಿಗೂ ಅಲ್ಲಿನವರು ರೈಲು ಹತ್ತಿ ಚಿಕಿತ್ಸೆಗಾಗಿ ವೆನ್ಲಾಕ್ ಮತ್ತು ಲೇಡಿಗೋಶನ್ ಆಸ್ಪತ್ರೆಗಳಿಗೆ ಬರುತ್ತಾರೆ. ಈ ಆಸ್ಪತ್ರೆಗಳ ಜನಪ್ರಿಯತೆಗೆ ಹಾಗೂ ಜನ ನಂಬಿಕೆ ಇಟ್ಟಿದ್ದಕ್ಕೆ ಇದು ಸಾಕ್ಷಿ. ರಾಜ್ಯದ ಮೊದಲ ತೆರೆದ ಹೃದಯದ ಶಸ್ತ್ರಕಿಚಿತ್ಸೆ, ಮೊದಲ ಮಂಡಿ ಚಿಪ್ಪು ಬದಲಾವಣೆ ಶಸ್ತ್ರಚಿಕಿತ್ಸೆ ನಡೆದದ್ದು ವೆನ್ಲಾಕ್ ಆಸ್ಪತ್ರೆಯಲ್ಲಿ. ಮಲೇರಿಯಾ ಸಂಶೋಧನೆಗಾಗಿ ನೋಬೆಲ್ ಬಹುಮಾನ ಪಡೆದ ವಿಜ್ಞಾನಿ ಸರ್ ರೊನಾಲ್ಡ್ ರಾಸ್ ಹಾಗೂ ಕಾಲಾ ಅಜಾರ ಖಾಯಿಲೆಯ ಸಂಶೋಧನೆ ನಡೆಸಿದ್ದ ವಿಜ್ಞಾನಿ ಡಾ.ಚಾರ್ಲ್ಸ್ ಡೋನೊವಾನ್ ಸೇವೆ ಸಲ್ಲಿಸಿದ್ದ ಆಸ್ಪತ್ರೆ ಇದು ಎಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಡಾ. ಶಾಂತಾರಾಮ ಶೆಟ್ಟಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಂಸಿ ಡೀನ್ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಡಾ.ಉಣ್ಣಿಕೃಷ್ಣನ್, ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಕೆ.ಆರ್. ಕಾಮತ್, ಖಜಾಂಚಿ ಡಾ.ಎಂ. ಅಣ್ಣಯ್ಯ ಕುಲಾಲ್, ವೆನ್ಲಾಕ್ ಆಸ್ಪತ್ರೆಯ ನಿವಾಸಿ ವೈದ್ಯಾಧಿಕಾರಿ ಡಾ.ಸುಧಾಕರ್ ಟಿ., ಡಾ.ಸುರೇಶ್ ಶೆಟ್ಟಿ, ಡಾ.ಜೂಲಿಯಾನ ಎ.ಎಫ್. ಸಲ್ಡಾನ ಭಾಗವಹಿಸಿದ್ದರು.
ಅತ್ಯುತ್ತಮ ಲಾಂಛನಕ್ಕೆ ಬಹುಮಾನ
175 ವರ್ಷಗಳ ಸವಿನೆನಪಿಗಾಗಿ ಲೇಡಿಗೋಶನ್ ವೆನ್‌ಲಾಕ್ ಹಾಗೂ ಕೆಎಂಸಿ ಆಸ್ಪತ್ರೆಗಳನ್ನು ಒಳಗೊಂಡ ಲಾಂಛನವನ್ನು ಸಾರ್ವಜನಿಕರು ರೂಪಿಸಿ 15 ದಿನಗಳೊಳಗೆ ಆಸ್ಪತ್ರೆಯ ಇಮೇಲ್‌ಗೆ (wlkdk175@gmail.com) ಕಳುಹಿಸಬಹುದು. ಅತ್ಯುತ್ತಮ ಲಾಂಛನಕ್ಕೆ ಬಹುಮಾನವಿದೆ ಎಂದು ಡಾ.ಶಿವಪ್ರಕಾಶ್ ತಿಳಿಸಿದರು.
'ಮುಂಚೂಣಿ ಆಸ್ಪತ್ರೆಗಳಲ್ಲಿ ಒಂದಾಗಲಿದೆ ವೆನ್ಲಾಕ್’ ವೆನ್ಲಾಕ್ ಆಸ್ಪತ್ರೆಯು 12.5 ಎಕರೆ ಜಾಗದಲ್ಲಿ ವ್ಯಾಪಿಸಿದ್ದು ಇಲ್ಲಿ ಸರ್ಜಿಕಲ್ ವಿಭಾಗ ಮೆಡಿಕಲ್ ಹಾಗೂ ಪ್ರಾದೇಶಿಕ ಅತ್ಯಾಧುನಿಕ ಮಕ್ಕಳ ಚಿಕಿತ್ಸೆ ಮತ್ತು ಆರೈಕೆ ಕೇಂದ್ರಗಳು (ಆರ್‌ಎಪಿಸಿಸಿ) ಹೊಸ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ. ಆಡಳಿತ ಮತ್ತು ಹೊರರೋಗಿಗಳ ವಿಭಾಗಗಳು ಹಳೆಯ ಕಟ್ಟಡದಲ್ಲಿದ್ದು ಅವುಗಳ ದುರಸ್ತಿ ನಡೆಯುತ್ತಿದೆ. ಆಡಳಿತ ಬ್ಲಾಕ್ ಅನ್ನು ‘ಪಾರಂಪರಿಕ’ ಬ್ಲಾಕ್ ಆಗಿ ಪರಿವರ್ತಿಸಲಾಗುತ್ತದೆ. ಒಪಿಡಿ ಬ್ಲಾಕ್ ಅನ್ನು ₹ 70 ಕೋಟಿಯಲ್ಲಿ ಹಂತ ಹಂತವಾಗಿ ಮೇಲ್ದರ್ಜೆಗೇರಿಸಲಾಗುತ್ತದೆ. ಕ್ರಿಟಿಕಲ್ ಕೇರ್ ಬ್ಲಾಕ್ ಕೂಡಾ ನಿರ್ಮಾಣವಾಗಲಿದೆ. ಹೊಸ ಒಪಿಡಿ ಬ್ಲಾಕ್ ನಿರ್ಮಾಣವಾದ ಬಳಿಕ ದೇಶದ ಮುಂಚೂಣಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದಾಗಿ ವೆನ್ಲಾಕ್ ಗುರುತಿಸಿಕೊಳ್ಳಲಿದೆ. ಅಡ್ಮಿನ್ ಬ್ಲಾಕನ್ನು ನವೀಕರಣಗೊಳಿಸಿ ಅಲ್ಲಿರುವ 100 ವರ್ಷಗಳಿಗೂ ಹಳೆಯ ಪೀಠೋಪಕರಣಗಳಿಗೆ ಹೊಸ ರೂಪ ನೀಡಲಾಗುತ್ತದೆ. ಹಳೆಯ ವೈದ್ಯಕೀಯ ಉಪಕರಣಗಳ ಬದಲಿಗೆ ಅತ್ಯಾಧುನಿಕ ಉಪಕರಣಗಳನ್ನು ಬಳಸುವ ಉದ್ದೇಶವಿದೆ ಎಂದು ಡಾ.ಶಿವಪ್ರಕಾಶ್ ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.