ADVERTISEMENT

‘ಪಶ್ಚಿಮ ಘಟ್ಟ: ಪರ್ಯಾಯ ಮರೆತು ಅಭಿವೃದ್ಧಿ ಕಾರ್ಯ’

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2025, 6:46 IST
Last Updated 19 ಅಕ್ಟೋಬರ್ 2025, 6:46 IST
ವೈಲ್ಡ್ ಲೈಫ್ ಫಸ್ಟ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಭಾರ್ಗವ್ ಉಪನ್ಯಾಸ ನೀಡಿದರು
ವೈಲ್ಡ್ ಲೈಫ್ ಫಸ್ಟ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಭಾರ್ಗವ್ ಉಪನ್ಯಾಸ ನೀಡಿದರು   

ಮಂಗಳೂರು: ಅಭಿವೃದ್ಧಿ ಕಾಮಗಾರಿಗಳಿಂದಾಗಿ ವನ್ಯಜೀವಿಗಳ ಆವಾಸದ ಮೇಲೆ ತೀವ್ರ ದುಷ್ಪರಿಣಾಮ ಆಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತಿದ್ದು ಕೆಲವು ಅಭಿವೃದ್ಧಿ ಯೋಜನೆಗಳನ್ನು ಕೈಬಿಡುವ ಸಾಧ್ಯತೆಯನ್ನು ಪರಿಗಣಿಸದ್ದರಿಂದ ಸಮಸ್ಯೆ ಆಗಿದೆ ಎಂದು ವೈಲ್ಡ್ ಲೈಫ್ ಫಸ್ಟ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಭಾರ್ಗವ್ ಅಭಿಪ್ರಾಯಪಟ್ಟರು. 

‘ಮನುಷ್ಯ ಪ್ರಬಲವಾಗಿರುವ ಪ್ರದೇಶದಲ್ಲಿ ವನ್ಯಜೀವಿ ಸಂರಕ್ಷಣೆ’ ಎಂಬ ವಿಷಯದಲ್ಲಿ ಇಂಡಿಯನ್ ನ್ಯಾಷನಲ್ ಟ್ರಸ್ಟ್‌ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್‌ (ಇಂಟ್ಯಾಕ್‌) ಮಂಗಳೂರು ಶಾಖೆ ನಗರದಲ್ಲಿ ಈಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.   

ಕಾನೂನು ರೂಪಿಸುವುದಕ್ಕಿಂತ ಅರಣ್ಯ ಪ್ರದೇಶಗಳನ್ನು ಒಡೆಯುವ ಪ್ರವೃತ್ತಿ ನಿಲ್ಲಿಸುವುದು ದೊಡ್ಡ ಸವಾಲಾಗಿ ಮಾರ್ಪಟ್ಟಿದೆ. ಇದರಿಂದಾಗಿ ಸಸ್ಯ ಮತ್ತು ಪ್ರಾಣಿ ಸಂಪತ್ತನ್ನು ಉಳಿಸುವುದು ಕಷ್ಟಸಾಧ್ಯವಾಗುತ್ತಿದೆ. ಪಶ್ಚಿಮ ಘಟ್ಟದ ಅರಣ್ಯ ಭಾಗಗಳಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಂದಾಗಿ ವನ್ಯಜೀವಿಗಳು ದಿಕ್ಕೆಟ್ಟಿವೆ. ಈಗಿರುವ ಸಂಪನ್ಮೂಲವನ್ನೇ ಬಳಸಿಕೊಂಡು ಈ ಯೋಜನೆಗಳ ಪೈಕಿ ಹೆಚ್ಚಿನವುಗಳನ್ನು ಕೈಬಿಡಬಹುದಾಗಿತ್ತು. ಇದರಿಂದ ಆರ್ಥಿಕತೆ ಮತ್ತು ಅರಣ್ಯ ಸಂರಕ್ಷಣೆಗೆ ಅನುಕೂಲ ಆಗುತ್ತಿತ್ತು ಎಂದು ಅವರು ಹೇಳಿದರು. 

ADVERTISEMENT

‘ಭಾರತದ ಒಟ್ಟು ಭೂಪ್ರದೇಶದ ಪೈಕಿ 4 ಲಕ್ಷ ಚದರ ಕಿಲೊಮೀಟರ್ ಅಥವಾ ಶೇಕಡ 12ರಷ್ಟು ಭಾಗದಲ್ಲಿ ದಟ್ಟ ಅಥವಾ ಮಧ್ಯಮ ಪ್ರಮಾಣದ ಅರಣ್ಯ ಇದೆ. ಇದರ ಪೈಕಿ 1.67 ಲಕ್ಷ ಚದರ ಕಿಲೊಮೀಟರ್ ಪ್ರದೇಶ ಮಾತ್ರ ವನ್ಯಜೀವಿಗಳಿಗಾಗಿ ಮೀಸಲಾಗಿದೆ. ಭಾರತದಲ್ಲಿ ಈಗ 2,500ರಿಂದ 2,900ರಷ್ಟು ಹುಲಿಗಳು, 3,000ದಿಂದ 4,000ದಷ್ಟು ಸಿಂಗಲೀಕಗಳು, 300ರಿಂದ 400ರಷ್ಟು ಏಷ್ಯನ್ ಆನೆಗಳು ಮತ್ತು 25,000ದಿಂದ 27,000 ಆನೆಗಳು ಇವೆ ಎಂದು ಅರಣ್ಯ ಸಂರಕ್ಷಣೆ ಕಾಯ್ದೆಯಲ್ಲಿ ಹೆಸರು ಮಾಡಿರುವ ಪ್ರವೀಣ್‌ ಹೇಳಿದರು.

ಇಂಟ್ಯಾಕ್‌ ಮಂಗಳೂರು ಘಟಕದ ಸಹ ಸಂಚಾಲಕ ನಿರೇನ್ ಜೈನ್‌ ಮತ್ತು ಸಂಚಾಲಕ ಸುಭಾಷ್ ಬಸು ಪಾಲ್ಗೊಂಡಿದ್ದರು. 

ವೈಲ್ಡ್ ಲೈಫ್ ಫಸ್ಟ್‌ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಪ್ರವೀಣ್ ಭಾರ್ಗವ್ ಉಪನ್ಯಾಸ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.