ADVERTISEMENT

ಪುತ್ತೂರು: ಜೀವಹಾನಿಯಾದ ಪ್ರದೇಶದಲ್ಲೇ ಕಾಡಾನೆ ಓಡಾಟ

​ಪ್ರಜಾವಾಣಿ ವಾರ್ತೆ
Published 23 ಮೇ 2025, 13:46 IST
Last Updated 23 ಮೇ 2025, 13:46 IST
ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಅತ್ರ್ಯಡ್ಕದ ಪ್ರಸನ್ನ ಭಟ್ ಅವರ ತೋಟಕ್ಕೆ ಕಾಡಾನೆ ನುಗ್ಗಿ ಕೃಷಿ ನಾಶ ಮಾಡಿದ್ದು, ಶರತ್‌ಕುಮಾರ್‌ ಮಾಡಾವು, ನಮಿತಾ ಎ.ಕೆ., ಸುರೇಂದ್ರ ರೈ ಇಳಂತಾಜೆ, ಸತ್ಯನ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಪುತ್ತೂರು ತಾಲ್ಲೂಕಿನ ಕೆಯ್ಯೂರು ಗ್ರಾಮದ ಅತ್ರ್ಯಡ್ಕದ ಪ್ರಸನ್ನ ಭಟ್ ಅವರ ತೋಟಕ್ಕೆ ಕಾಡಾನೆ ನುಗ್ಗಿ ಕೃಷಿ ನಾಶ ಮಾಡಿದ್ದು, ಶರತ್‌ಕುಮಾರ್‌ ಮಾಡಾವು, ನಮಿತಾ ಎ.ಕೆ., ಸುರೇಂದ್ರ ರೈ ಇಳಂತಾಜೆ, ಸತ್ಯನ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಪುತ್ತೂರು: ತಾಲ್ಲೂಕಿನ ಕೆಯ್ಯೂರು ಗ್ರಾಮದ ಅಂಬುಲ ಪರಿಸರಕ್ಕೆ ಕಳೆದ ಮಂಗಳವಾರ ಬಂದು ಮೂವರು ಕೃಷಿಕರ ತೋಟಗಳಲ್ಲಿ ಬೆಳೆ ಹಾನಿ ಮಾಡಿದ್ದ ಒಂಟಿ ಕಾಡಾನೆ ಗುರುವಾರ ರಾತ್ರಿ ಅತ್ರ್ಯಡ್ಕದಲ್ಲಿ ದಾಂದಲೆ ಮಾಡಿದೆ.

ಪ್ರಸನ್ನ ಭಟ್ ಎಂಬುವರ ತೋಟಕ್ಕೆ ದಾಳಿ ಮಾಡಿ ಬಾಳೆಗಿಡ ಹಾಗೂ ಹಲವು ಅಡಿಕೆ ಮರಗಳನ್ನು ಬುಡಸಮೇತ ಮರಿದು ಹಾಕಿದೆ. ದೊಡ್ಡ ತೆಂಗಿನ ಮರವೊಂದನ್ನು ಕೆಡವಿ ಹಾಕಿದೆ. ಬಳಿಕ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಕಡೆಗೆ ಕಾಡಾನೆ ಹೋಗಿದೆ ಎಂದು ಆ ಸ್ಥಳೀಯರು ಮಾಹಿತಿ ನೀಡಿದ್ದಾರೆ.

ಏ.29ರಂದು ಕೊಳ್ತಿಗೆ ಗ್ರಾಮ ವ್ಯಾಪ್ತಿಗೆ ಸೇರಿದ ಅತ್ರ್ಯಡ್ಕದ ಕೆಎಫ್‌ಡಿಸಿ ರಬ್ಬರ್ ತೋಟದಲ್ಲಿ ಸೆಲ್ಲಮ್ಮ ಎಂಬುವರನ್ನು ಆನೆ ಕೊಂದು ಹಾಕಿತ್ತು. ಮತ್ತೆ ಕಾಡಾನೆ ಬಂದಿರುವುದರಿಂದ ರಬ್ಬರ್ ತೋಟದಲ್ಲಿ ಕೆಲಸ ಮಾಡುವವರು ಭಯಗೊಂಡಿದ್ದಾರೆ.

ADVERTISEMENT

ಕೆಯ್ಯೂರು ಗ್ರಾಮದ ಅಂಬುಲ ಪರಿಸರಕ್ಕೆ ಮಂಗಳವಾರ ಬಂದಿದ್ದ ಕಾಡಾನೆ ವಿಶ್ವನಾಥ ಗೌಡ, ಕೂಸಪ್ಪ ಗೌಡ, ಸುಲೈಮಾನ್ ಅವರ ಬೆಲೆ ಹಾನಿ ಮಾಡಿತ್ತು. ಹಗಲಲ್ಲಿ ಕೊಳ್ತಿಗೆ ಭಾಗದ ಕಣಿಯಾರು ಮಲೆ ರಕ್ಷಿತಾರಣ್ಯ ಸೇರಿ ರಾತ್ರಿ ವೇಳೆ ಕೃಷಿ ಪ್ರದೇಶಕ್ಕೆ ಬರುತ್ತಿರುವುದರಿಂದ ‌ಕೃಷಿಕರಲ್ಲಿ ಆತಂಕ ಉಂಟಾಗಿದೆ.

ಹಾನಿಗೀಡಾದ ತೋಟಕ್ಕೆ ಕೆಯ್ಯೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಶರತ್‌ಕುಮಾರ್ ಮಾಡಾವು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ., ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ, ಅರಣ್ಯ ಇಲಾಖೆ ಅಧಿಕಾರಿ ಸತ್ಯನ್ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ವ್ಯರ್ಥವಾದ ಕಾರ್ಯಾಚರಣೆ:

ಚಿಕ್ಕಮಗಳೂರಿನ ಎಲಿಫೆಂಟ್ ಟಾಸ್ಕ್‌ಫೋರ್ಸ್‌ (ಇಟಿಎಫ್) ತಂಡದಿಂದ ಕಾಡಾನೆಯನ್ನು ಆನೆಗುಂಡಿ ಪ್ರದೇಶಕ್ಕೆ ಓಡಿಸುವ ಕಾರ್ಯಾಚರಣೆ ನಡೆದಿತ್ತು. ನಾಲ್ಕೈದು ದಿನಗಳ ಕಾರ್ಯಾಚರಣೆ ಮೂಲಕ ಕಾಡಾನೆಯನ್ನು ಆನೆಗುಂಡಿ ಅರಣ್ಯ ಪ್ರದೇಶಕ್ಕೆ ಬೆನ್ನಟ್ಟಲಾಗಿತ್ತು. ಕಾಡಾನೆ ಆನೆಗುಂಡಿ ರಕ್ಷಿತಾರಣ್ಯ ಪ್ರದೇಶಕ್ಕೆ ಹೋಗಿದೆ ಎಂದು ಇಟಿಎಫ್‌ ತಂಡದವರು ಖಾತ್ರಿಪಡಿಸಿದ್ದರೂ ಆನೆ ಮತ್ತೆ ಬಂದಿದೆ. ಈ ಆನೆಯನ್ನು ಶಾಶ್ವತವಾಗಿ ಸ್ಥಳಾಂತರಿಸುವ ಮೂಲಕ ಕಾಡಾನೆ ಹಾವಳಿ ತಡೆಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.