
ಸುಳ್ಯ: ಎರಡು ದಶಕಗಳಿಂದ ಮಂಡೆಕೋಲು ಗ್ರಾಮಸ್ಥರನ್ನು ಕಾಡುತ್ತಿರುವ ಕಾಡಾನೆ ಹಾಗೂ ಇತರ ವನ್ಯಮೃಗಗಳ ಹಾವಳಿ ವಿರುದ್ಧ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿ ಸೋಮವಾರ ಮಂಡೆಕೋಲಿನಲ್ಲಿ ಪ್ರತಿಭಟನೆ ನಡೆಯಿತು.
ಗ್ರಾಮದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಸಿದ ಗ್ರಾಮಸ್ಥರು ಸೂಕ್ತ ಕ್ರಮಕ್ಕೆ ಆಗ್ರಹಿಸಿ ಘೋಷಣೆ ಕೂಗಿದರು.
ಪ್ರತಿಭಟನಾ ಸ್ಥಳಕ್ಕೆ ಬಂದ ಸುಳ್ಯ ಶಾಸಕಿ ಭಾಗೀರಥಿ ಮುರಳ್ಯ ಮಾತನಾಡಿ, ಮಂಡೆಕೋಲು ಗ್ರಾಮಸ್ಥರು ಕಾಡುಪ್ರಾಣಿಗಳ ಉಪಟಳದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಗ್ರಾಮಸ್ಥರು ನನ್ನ ಬಳಿಗೂ ದೂರು ತಂದಿದ್ದಾರೆ. ಅಧಿವೇಶನದಲ್ಲೂ ಈ ಸಂಬಂಧ ಸರ್ಕಾರಕ್ಕೆ ಪ್ರಶ್ನೆ ಕೇಳಿ ಕಾಡು ಪ್ರಾಣಿಗಳ ಉಪಟಳಕ್ಕೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದೆ. ಇದೀಗ ಮಂಡೆಕೋಲು ಗ್ರಾಮಸ್ಥರ ಮನವಿ ಮೇರೆಗೆ ಮುಂದಿನ ಬೆಳಗಾವಿ ಅಧಿವೇಶನದಲ್ಲೂ ಈ ಬಗ್ಗೆ ಪ್ರಸ್ತಾಪಿಸಿ ಗ್ರಾಮಸ್ಥರ ಬೇಡಿಕೆ ಈಡೇರಿಸಲು ಒತ್ತಾಯಿಸುತ್ತೇನೆ ಎಂದು ಭರವಸೆ ನೀಡಿದರು.
ಆನೆ ಹಾವಳಿ ತಡೆಗೆ ಸರ್ಕಾರದಿಂದ ಅರಣ್ಯ ಇಲಾಖೆ ಮೂಲಕ ಸೋಲಾರ್ ಬೇಲಿ ಅಳವಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಆದರೆ, ಸೂಕ್ತ ಅನುದಾನವೇ ಬರುತ್ತಿಲ್ಲ. ವೈಯಕ್ತಿಕವಾಗಿಯೂ ಸೋಲಾರ್ ಬೇಲಿ ಅಳವಡಿಸಲು ಅವಕಾಶ ಇದ್ದು, ಅದಕ್ಕೆ ಸರ್ಕಾರ ಶೇ 50 ಸಹಾಯಧನ ನೀಡುತ್ತಿದೆ. ಆದರೆ, ಬಡವರೇ ಹೆಚ್ಚಾಗಿರುವ ಗ್ರಾಮದಲ್ಲಿ ಶೇ 50ರಷ್ಟು ಸಹಾಯಧನ ಪಡೆದು ಸೋಲಾರ್ ಬೇಲಿ ಅಳವಡಿಸಲು ಶಕ್ತಿ ಇಲ್ಲ. ಈ ಸಂಬಂಧ ಸರ್ಕಾರವೇ ಕೃಷಿ ಬೆಳೆ ರಕ್ಷಣೆಗಾಗಿ ಸಂಪೂರ್ಣ ಉಚಿತವಾಗಿ ಸೋಲಾರ್ ಬೇಲಿ ಅಳವಡಿಸಬೇಕು ಎಂದು ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು.
ಅರಣ್ಯ ಇಲಾಖೆ ಸುಳ್ಯ ವಲಯದ ಎಸಿಎಫ್ ಮಂಜುನಾಥ್ ಮಾತನಾಡಿ, ಗ್ರಾಮಸ್ಥರ ಬೇಡಿಕೆ ಸಕಾಲಿಕವಾಗಿದೆ. ನಮ್ಮ ಇಲಾಖೆ ವತಿಯಿಂದಲೂ ನಾವು ಆಗಾಗ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುತ್ತಲೇ ಇದ್ದೇವೆ. ಒಂದು ಕಿ.ಮೀ ಉದ್ದ ಸೋಲಾರ್ ಬೇಲಿ ಅಳವಡಿಸಲು ಸುಮಾರು ₹6.5 ಲಕ್ಷ ವೆಚ್ಚವಾಗುತ್ತಿದ್ದು, ಅನುದಾನ ಬಂದಂತೆ ಆದ್ಯತೆ ಮೇರೆಗೆ ಸೋಲಾರ್ ಬೇಲಿ ಅಳವಡಿಕೆ ಮಾಡುತ್ತಿದ್ದೇವೆ. ದಕ್ಷಿಣ ಕನ್ನಡ ಜಿಲ್ಲೆಗೆ ಆನೆ ಕಾರ್ಯಪಡೆ ಘೋಷಣೆ ಆಗಿದ್ದು, ಹಣಕಾಸು ಇಲಾಖೆ ಒಪ್ಪಿಗೆ ಸಿಕ್ಕ ತಕ್ಷಣ ಕಾರ್ಯಪಡೆ ಜಿಲ್ಲೆಗೆ ಬರಲಿದೆ. ಮುಂದೆ ಕಾರ್ಯಪಡೆ ಮೂಲಕ ಆನೆ ಹಾವಳಿ ತಡೆಯುವ ಪ್ರಯತ್ನ ಮಾಡಲಿದ್ದೇವೆ ಎಂದರು.
ಗ್ರಾಮಸ್ಥರ ಪರವಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಮಾತನಾಡಿದರು.
ಮಂಡೆಕೋಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಕುಶಲ ಉದ್ದಂತಡ್ಕ, ಪ್ರಮುಖರಾದ ಶಿವಪ್ರಸಾದ್ ಉಗ್ರಾಣಿಮನೆ, ಜಯರಾಜ್ ಕುಕ್ಕೇಟಿ, ಬಾಲಚಂದ್ರ ದೇವರಗುಂಡ, ಡಾ.ಅನಂತಪದ್ಮನಾಭ ಭಟ್ ಎರ್ಕಲ್ಪಾಡಿ, ವಿನುತಾ ಪಾತಿಕಲ್ಲು, ಕೃಷ್ಣಪ್ರಸಾದ್ ಭಟ್, ಉದಯ ಆಚಾರ್, ಕೇಶವಮೂರ್ತಿ ಹೆಬ್ಬಾರ್, ಶೇಖರ ಮಣಿಯಾಣಿ ಕಣೆಮರಡ್ಕ, ರಾಜಶೇಖರ ಭಟ್ ಎರ್ಕಲ್ಪಾಡಿ, ಅನಂತಕೃಷ್ಣ ಚಾಕೋಟೆ, ಸಂತೋಷ್ ಚಾಕೋಟೆ, ಶುಭಕರ ಬೊಳುಗಲ್ಲು, ಜನಾರ್ದನ ಬೊಳುಗಲ್ಲು, ಗುರು ಹೆಬ್ಬಾರ್, ಕೃಷ್ಣ ಮಣಿಯಾಣಿ ಅಕ್ಕಪ್ಪಾಡಿ, ದಾಮೋದರ ಕಲ್ಲಡ್ಕ, ಸುನಿಲ್ ಪಾತಿಕಲ್ಲು, ಪದ್ಮನಾಭ ಪಾತಿಕಲ್ಲು, ಸುಬ್ರಹ್ಮಣ್ಯ ಮಾಸ್ತರ್, ರತ್ನಾಕರ ನಾಯಕ್, ಮುಕುಂದ ದೇವರಗುಂಡ, ಪುರುಷೋತ್ತಮ ಕಾಡುಸೊರಂಜ, ಧನಂಜಯ ಪಡ್ಪು, ದಿನಕರ ಪಡ್ಪು, ರಾಮಚಂದ್ರ ಗೌಡ ಹೊಸೊಕ್ಲು, ದಾಸಪ್ಪ ಗೌಡ ಹೊಸೊಕ್ಲು, ವಸಂತಿ ಉಗ್ರಾಣಿಮನೆ, ಮೋಹಿನಿ ಮಂಡೆಕೋಲು, ಸುದರ್ಶನ ಪಾತಿಕಲ್ಲು, ಲಕ್ಷ್ಮಣ ಉಗ್ರಾಣಿಮನೆ, ಪದ್ಮಾವತಿ ಪೆರಾಜೆ, ರಾಮಕೃಷ್ಣ ರೈ ಪೇರಾಲುಗುತ್ತು, ಜಲಜಾ ದೇವರಗುಂಡ, ವೀಣಾ ದೇವರಗುಂಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.