ಉಪ್ಪಿನಂಗಡಿ: ಎರಡು ದಿನಗಳಿಂದ ನೆಕ್ಕಿಲಾಡಿ, ಬಿಳಿಯೂರು ಪರಿಸರದಲ್ಲಿ ಕಾಣಿಸಿಕೊಂಡಿದ್ದ ಜೋಡಿ ಕಾಡಾನೆ ಭಾನುವಾರ ಮುಂಜಾನೆ ಉಪ್ಪಿನಂಗಡಿ ಕೂಟೇಲು ಸೇತುವೆ ಬಳಿ ನೇತ್ರಾವತಿ ನದಿ ಮಧ್ಯದಲ್ಲಿ ಕಾಣಿಸಿಕೊಂಡಿದ್ದವು. ಅವುಗಳನ್ನು ನೋಡಲು ನದಿ ದಡದಲ್ಲಿ ಜನ ಸೇರಿದ್ದರಿಂದ ಅವುಗಳು ನದಿಯಲ್ಲೇ ಕಾಲ ಕಳೆದವು.
ಇಳಂತಿಲ ಗ್ರಾಮದ ಅಂಡೆತಡ್ಕದಿಂದ ಶನಿವಾರ ರಾತ್ರಿ ಆನೆಗಳು ನದಿಗಿಳಿದಿದ್ದವು. ಹೆಚ್ಚಿನ ಸಂಖ್ಯೆಯಲ್ಲಿದ್ದ ಜನರನ್ನು ಕಂಡು ಗಲಿಬಿಲಿಗೊಂಡ ಆನೆಗಳು ದಡದತ್ತ ಹೋಗಲು ಸಾಧ್ಯವಾಗದೆ ನದಿ ಮಧ್ಯದ ದಿಣ್ಣೆಯಲ್ಲೇ ನಿಂತಿದ್ದವು.
ಗೃಹರಕ್ಷಕ ದಳದ ಪ್ರವಾಹ ರಕ್ಷಣಾ ತಂಡದ ಬೋಟ್ ಬಳಸಿ ನದಿಗಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಗಾಳಿಯಲ್ಲಿ ಗುಂಡು ಹಾರಿಸಿ ಆನೆಗಳು ಜನವಸತಿಯತ್ತ ಬರುವುದನ್ನು ತಡೆಯಲು ಯತ್ನಿಸಿದರು. ಅವು ಓಡಾಡಲು ಆರಂಭಿಸುತ್ತಿದ್ದಂತೆ ದಡದಲ್ಲಿ ಸ್ಫೋಟಕ ಸಿಡಿಸಿ ಬೆದರಿಸಿದರು. ಬೆಳಿಗ್ಗೆಯಿಂದ ಸಂಜೆ ವರೆಗೂ ಸ್ಫೋಟಕ ಸಿಡಿಸಿ ಆನೆಗಳು ಪೇಟೆಯತ್ತ ಬರುವುದನ್ನು ತಡೆಯಲು ಅರಣ್ಯ, ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.
ಸ್ಥಳದಲ್ಲಿ ಮಂಗಳೂರು ಉಪ ವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಶಿಕಾಂತ್ ವಿಭೂತೆ, ಎಸಿಎಫ್ ಸುಬ್ಬಯ್ಯ ನಾಯ್ಕ್, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್, ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ರಾಘವೇಂದ್ರ, ಪೊಲೀಸ್ ಅಧಿಕಾರಿಗಳು, ಗೃಹರಕ್ಷಕ ದಳದ ಸುಖಿತಾ ಶೆಟ್ಟಿ, ದಿನೇಶ್ ನೇತೃತ್ವದ ಗೃಹರಕ್ಷಕ ದಳ ಇದ್ದು ಆನೆಗಳ ಚಲನವಲನದ ನಿಗಾ ಇರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.