ಮಂಗಳೂರು: ‘ಇಂದು ಅಸಂಖ್ಯಾತ ಪದವೀಧರರು ನಿರುದ್ಯೋಗಿಗಳಾಗಿದ್ದು, ಭವಿಷ್ಯದ ಬಗ್ಗೆ ಅತಂತ್ರರಾಗಿದ್ದಾರೆ. ಇದು ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ನನ್ನನ್ನು ಗೆಲ್ಲಿಸಿದರೆ ನಿರುದ್ಯೋಗಿ ಪದವೀಧರರ ಸಮಸ್ಯೆಗಳಿಗೆ ಧ್ವನಿಯಾಗುವೆ’ ಎಂದು ವಿಧಾನ ಪರಿಷತ್ತಿನ ನೈರುತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬಿ. ಮುಹಮ್ಮದ್ ತುಂಬೆ ಹೇಳಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ನಿರುದ್ಯೋಗಿ ಪದವೀಧರರ ಆತಂಕ ದೂರ ಮಾಡಲು ಸರ್ಕಾರಗಳು ಯಾವುದೇ ಯೋಜನೆಗಳನ್ನು ರೂಪಿಸುವಂತೆ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಶಿಕ್ಷಕನಾಗಿ ಸಾವಿರಾರು ವಿದ್ಯಾರ್ಥಿಗಳನ್ನು ದೇಶದ ಪ್ರಜ್ಞಾವಂತ ಪ್ರಜೆಗಳನ್ನಾಗಿ ರೂಪಿಸಲು ಪ್ರಯತ್ನಿಸಿದ್ದೇನೆ. ಜಾತಿ ಮತ, ಧರ್ಮ, ಪಕ್ಷವನ್ನು ಮೀರಿ, ಮಾನವೀಯತೆ, ಸಮಾನತೆ, ಸಹೋದರತೆ, ಜಾತ್ಯತೀತ ಮನೋಭಾವ ಹೊಂದಿರುವ ಮನುಜ ಜಾತಿ ಒಂದೇ ಎಂದು ನಂಬಿದ್ದೇನೆ. ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯ ಶಿಕ್ಷಕರ ಸಂಘದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲೆಯ ಸ್ಕೌಟ್ ಆಯುಕ್ತನಾಗಿದ್ದೇನೆ’ ಎಂದು ಅವರು ತಿಳಿಸಿದರು.
‘ನಿರುದ್ಯೋಗಿ ಪದವೀಧರರಿಗೆ ಸ್ವ-ಉದ್ಯೋಗ ತರಬೇತಿ ಸಂಸ್ಥೆ ಸ್ಥಾಪನೆ, ಪದವಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಸಕಾಲಕ್ಕೆ ಸಿಗುವಂತೆ ಮಾಡುವುದು, ಸರ್ಕಾರಿ ಹುದ್ದೆಗಳ ನೇಮಕಾತಿಗೆ ವಯೋಮಿತಿ ಸಡಿಲಿಕೆ, ಎನ್‌ಇಪಿ– ಎಸ್‌ಇಪಿ ಗೊಂದಲ ನಿವಾರಣೆಗೆ ಶ್ರಮಿಸುವುದು ನನ್ನ ಆದ್ಯತೆ’ ಎಂದರು.
ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ವಸಂತರಾವ್, ಝುನೈದ್, ಪಿ.ರಾಮಕೃಷ್ಣ ರಾವ್, ನಿವೃತ್ತ ಮುಖ್ಯೋಪಾಧ್ಯಾಯ ಅಹ್ಮದ್ ತ್ವಾಹ ತನ್ವೀರ್, ಗುತ್ತಿಗೆದಾರ ಶರೀಫ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.