ADVERTISEMENT

ಅಮ್ಟಾಡಿ: ತೊರೆಗಳಿಗೆ ಒಡ್ಡು ನಿರ್ಮಿಸುವ ಕಾರ್ಯ ಆರಂಭ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 4:24 IST
Last Updated 11 ಡಿಸೆಂಬರ್ 2025, 4:24 IST
ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದಲ್ಲಿ ತೊರೆಗಳಿಗೆ ಒಡ್ಡು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ 
ಬಂಟ್ವಾಳ ತಾಲ್ಲೂಕಿನ ಅಮ್ಟಾಡಿ ಗ್ರಾಮದಲ್ಲಿ ತೊರೆಗಳಿಗೆ ಒಡ್ಡು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ    

ಬಂಟ್ವಾಳ: ಇಲ್ಲಿನ ಅಮ್ಟಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವ್ಯರ್ಥವಾಗಿ ಹರಿದು ಹೋಗುವ ತೊರೆಗಳಿಗೆ ಒಡ್ಡು ನಿರ್ಮಿಸುವ ಕಾರ್ಯ ಆರಂಭಗೊಂಡಿದೆ.

ಕಳೆದ ಮೂರು ವರ್ಷಗಳಿಂದ ಈ ಪ್ರಯತ್ನ ನಡೆಯುತ್ತಿದ್ದು, ಒಟ್ಟು 10 ಕಡೆ ಒಡ್ಡು ನಿರ್ಮಿಸಲು ಯೋಜನೆ ರೂಪಿಸಲಾಗಿದ್ದು, ಈಗಾಗಲೇ ಎರಡು ಕಡೆ ಒಡ್ಡು ನಿರ್ಮಿಸಲಾಗಿದ್ದು, ನೀರು ಸಂಗ್ರಹಗೊಂಡಿದೆ.

ಕಟ್ಟಕ್ಕೆ ಶತಮಾನದ ಇತಿಹಾಸ:

ADVERTISEMENT

ಇಲ್ಲಿನ ಅಮ್ಟಾಡಿ ಗ್ರಾಮದಲ್ಲಿ ಕೃಷಿ ಮತ್ತಿತರ ಚಟುವಟಿಕೆಗಾಗಿ ತೋಡುಗಳಿಗೆ ಕಟ್ಟ ಕಟ್ಟಿ ನೀರು ಸಂಗ್ರಹಿಸುವ ಪದ್ಧತಿ ಕಳೆದ ನೂರು ವರ್ಷಗಳಿಂದ ನಡೆಯುತ್ತಿದೆ ಎನ್ನುತ್ತಾರೆ ಇಲ್ಲಿನ ಹಿರಿಯರು.

ಹರಿದು ಪೋಲಾಗುತ್ತಿರುವ ತೋಡಿನ ನೀರು ಸಂಗ್ರಹಿಸಲು ತೋಡಿನ ಮಧ್ಯೆ ಅಡ್ಡವಾಗಿ ಹಸಿ ಸೊಪ್ಪು ಮತ್ತು ಮಣ್ಣು ಹಂತ ಹಂತವಾಗಿ ಅಳವಡಿಸಿ ಕಟ್ಟ ರಚನೆ ಮಾಡುವ ಪದ್ಧತಿ ಕೃಷಿಕರಲ್ಲಿದೆ. ಇದರಿಂದ ತೋಡಿನ ಸುತ್ತಲೂ ಅಡಿಕೆ ಮತ್ತು ಗದ್ದೆಗೆ ಸರಾಗವಾಗಿ ನೀರು ಹರಿಸಲು ಸುಲಭವಾಗುವುದರ ಜತೆಗೆ ಕೆರೆ ಬಾವಿಗಳಲ್ಲಿ ನೀರಿನ ಒರತೆ ಹೆಚ್ಚಳವಾಗಿದೆ ಎನ್ನುತ್ತಾರೆ ಸ್ಥಳೀಯ ಕೃಷಿಕ ಅವಿಲ್ ಮಿನೇಜಸ್.

ಇದೀಗ ಕಳೆದ ಮೂರು ವರ್ಷಗಳಿಂದ ಮತ್ತೆ ಈ ಗ್ರಾಮದ ತೋಡುಗಳ ಪ್ರಮುಖ ಸ್ಥಳಗಳಲ್ಲಿ ಒಡ್ಡು ನಿರ್ಮಿಸುವ ಕಾರ್ಯ ನಡೆಯುತ್ತಿದೆ. ಕೇದಗೆ ಕಟ್ಟ, ಬನ್ನಿಮಾರ್ ಕಟ್ಟ ಎಂಬಲ್ಲಿ ಒಡ್ಡು ನಿಮಾಣ ಕಾರ್ಯ ಪೂರ್ಣಗೊಂಡಿದ್ದು, ನೀರು ಸಂಗ್ರಹ ಆರಂಭಗೊಂಡಿದೆ.

ಅಮ್ಟಾಡಿ ಕೃಷಿ ಪ್ರಧಾನ ಗ್ರಾಮವಾಗಿದ್ದು, ಅಡಿಕೆ, ತೆಂಗು, ಬಾಳೆ, ಕಾಳು ಮೆಣಸು, ರಬ್ಬರ್ ಜೊತೆಗೆ ಭತ್ತದ ಬೇಸಾಯ ಇಲ್ಲಿ ಗಮನಾರ್ಹವಾಗಿದೆ. 

ಒಡ್ಡು ನಿರ್ಮಾಣ ಸಮಿತಿ ರಚನೆ:

ಪ್ರತಿ ವರ್ಷ ಮಳೆಗಾಲದ ಮುಗಿದ ಬಳಿಕ ಒಡ್ಡುಗಳನ್ನು ನಿರ್ಮಿಸಲು ಗ್ರಾಮದ ಕೃಷಿಕರು ಒಟ್ಟು ಸೇರಿಕೊಂಡು ನೀರು ಉಳಿಸಿ ಸಮಿತಿ ರಚಿಸಿಕೊಂಡಿದ್ದಾರೆ. ಮೊಡಂಕಾಪು ಚರ್ಚಿನ ಧರ್ಮಗುರು ವಿಕ್ಟರ್ ಡಿಸೋಜ ಗೌರವಾಧ್ಯಕ್ಷತೆಯಲ್ಲಿ ಅಧ್ಯಕ್ಷರಾಗಿ ಅರುಣ್ ಪಿಂಟೊ, ಉಪಾಧ್ಯಕ್ಷರಾಗಿ ಗ್ರೇಸಿ ಮೊಂತೆರೂ, ಕಾರ್ಯದರ್ಶಿಯಾಗಿ ಜೀವನ್ ಲೋಬೋ, ಕೋಶಾಧಿಕಾರಿಯಾಗಿ ಲೋಕೇಶ್ ಸುವರ್ಣ ಕಿನ್ನಿಬೆಟ್ಟು ಸೇರಿದಂತೆ ಒಟ್ಟು 30 ಮಂದಿ ಸದಸ್ಯರ ಸಮಿತಿ ರಚಿಸಲಾಗಿದೆ.

ಇವರು ಶ್ರಮದಾನ ಮತ್ತು ಪರಸ್ಪರ ಆರ್ಥಿಕ ಸಹಕಾರದ ಮೂಲಕ ಒಡ್ಡು ನಿರ್ಮಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.