ADVERTISEMENT

2025ಕ್ಕೆ ಭಾರತ ಕ್ಷಯಮುಕ್ತ: ಮೇಯರ್ ಪ್ರೇಮಾನಂದ ಶೆಟ್ಟಿ

ವಿಶ್ವ ಕ್ಷಯರೋಗ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 3:21 IST
Last Updated 25 ಮಾರ್ಚ್ 2022, 3:21 IST
ಮಂಗಳೂರಿನ ಕೋಡಿಕಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಕ್ಷಯರೋಗ ದಿನಾಚರಣೆಯಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿದರು
ಮಂಗಳೂರಿನ ಕೋಡಿಕಲ್‌ನಲ್ಲಿ ಗುರುವಾರ ಆಯೋಜಿಸಿದ್ದ ಕ್ಷಯರೋಗ ದಿನಾಚರಣೆಯಲ್ಲಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮಾತನಾಡಿದರು   

ಮಂಗಳೂರು: 2025ರ ವೇಳೆಗೆ ದೇಶ ಕ್ಷಯ ಮುಕ್ತವನ್ನಾಗಿಸಲು ವೈದ್ಯರು ಹಾಗೂ ಸಂಬಂಧಿಸಿದ ಇಲಾಖೆಗಳು ಶ್ರಮಿಸಬೇಕು ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.

ಗುರುವಾರ ನಗರದ ಕೋಡಿಕಲ್‌ನ ಕುದ್ಮಲ್ ರಂಗರಾವ್ ಕೊರಗ ಸಮುದಾಯ ಭವನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ಕೊರಗ ಅಭಿವೃದ್ಧಿ ನಿಗಮ ಹಾಗೂ ದೇರಳಕಟ್ಟೆಯ ಯೇನೆಪೋಯ ನರ್ಸಿಂಗ್‌ ಕಾಲೇಜಿನ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶ್ವ ಕ್ಷಯ ರೋಗ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಕ್ಷಯ ಸಾಂಕ್ರಾಮಿಕ ರೋಗವಾಗಿದ್ದು, ಅದನ್ನು 2025ರ ಹೊತ್ತಿಗೆ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಸಂಕಲ್ಪವನ್ನು ಪ್ರಧಾನಮಂತ್ರಿ ತೊಟ್ಟಿದ್ದಾರೆ. ಅದನ್ನು ಸಾಕಾರ ಮಾಡಲು ಕಾರ್ಯಕ್ರಮಗಳು ಅಥವಾ ಆಂದೋಲನಗಳನ್ನು ಮಾಡಿದರೆ ಸಾಲುವುದಿಲ್ಲ. ಬದಲಾಗಿ ನಾಗರಿಕರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕು. ಪ್ರಜ್ಞಾವಂತರು, ಇತರರಿಗೂ ಕ್ಷಯ ರೋಗದ ಮಾಹಿತಿ ನೀಡಬೇಕು. ಪರಸ್ಪರ ಒಗ್ಗಟ್ಟು ಮತ್ತು ಅರಿವಿನಿಂದ ಮಾತ್ರ ರೋಗ ನಿರ್ಮೂಲನೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ADVERTISEMENT

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ಮಾತನಾಡಿ, ಕ್ಷಯರೋಗವು ಶತಮಾನಗಳ ಹಿಂದೆಯೇ ನಾಗರಿಕ ಸಮಾಜವನ್ನು ಆಕ್ರಮಿಸಿಕೊಂಡಿದೆ. ಈ ರೋಗಕ್ಕೆ ಸೂಕ್ತ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖರಾಗುತ್ತಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಷಯರೋಗಿಗಳಿಗೆ ಅಗತ್ಯವಿರುವ ಎಲ್ಲ ಸವಲತ್ತುಗಳೂ ಉಚಿತವಾಗಿ ದೊರೆಯುತ್ತಿದೆ ಎಂದು ತಿಳಿಸಿದೆ.

ಚಿಕಿತ್ಸೆಗೆಂದು ವಿಶೇಷ ಘಟಕಗಳನ್ನು ತೆರೆಯಲಾಗಿದೆ. ಪ್ರಧಾನಮಂತ್ರಿ ಸಂಕಲ್ಪ ಈಡೇರಲು ನಾಗರಿಕರು ರೋಗದ ಲಕ್ಷಣ, ಚಿಕಿತ್ಸಾ ವಿಧಾನ ಮತ್ತು ನಿರ್ಮೂಲನಾ ಕ್ರಮಗಳನ್ನು ಅರಿತುಕೊಂಡು, ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಆದಷ್ಟು ಬೇಗ ದೇಶ ಹಾಗೂ ರಾಜ್ಯ ಕ್ಷಯ ಮುಕ್ತವಾಗಲಿದೆ ಎಂದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದರುದ್ದೀನ್, ಯೇನೆಪೋಯ ನರ್ಸಿಂಗ್‌ ಕಾಲೇಜಿನ ಪ್ರಾಂಶುಪಾಲೆ ಡಾ.ಲೀನಾ ಕೆ.ಸಿ., ಕಾಲೇಜಿನ ಶಸ್ತ್ರಚಿಕಿತ್ಸಾ ವಿಭಾಗಮುಖ್ಯಸ್ಥ ಡಾ. ಶಶಿಕುಮಾರ್, ವೆನ್‍ಲಾಕ್ ಆಸ್ಪತ್ರೆಯ ಶ್ವಾಸಕೋಶ ತಜ್ಞ ಡಾ. ಕಿಶೋರ್ ಬಾಬು, ಐಎಂಎ ಕಾರ್ಯದರ್ಶಿ ಸದಾನಂದ ಪೂಜಾರಿ, ಕೊರಗ ಅಭಿವೃದ್ಧಿ ಸಂಘ ನಗರದ ವಲಯದ ಅಧ್ಯಕ್ಷ ರಾಜ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಜಯ್ ಭಂಡಾರಿ, ಕೊರಗ ಅಭಿವೃದ್ಧಿ ಸಂಘದ ಅಧ್ಯಕ್ಷೆ ಬೇಬಿ ಪಡೀಲ್, ದೇರಳಕಟ್ಟೆ ಯೇನೆಪೋಯ ನರ್ಸಿಂಗ್‌ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಬಳಿಕ ಡಾ.ಶರತ್ ಕುಮಾರ್, ಕ್ಷಯ ರೋಗದ ಬಗ್ಗೆ ಉಪನ್ಯಾಸ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.