ADVERTISEMENT

ನಾಲ್ಕು ಜಿಲ್ಲೆಗಳ 90 ಶಾಲೆಗಳಲ್ಲಿ ಯಕ್ಷ ಶಿಕ್ಷಣ: ಸತೀಶ್ ಶೆಟ್ಟಿ ಪಟ್ಲ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 5:42 IST
Last Updated 3 ಆಗಸ್ಟ್ 2025, 5:42 IST
ಸುದ್ದಿಗೋಷ್ಠಿಯಲ್ಲಿ ಸತೀಶ್ ಶೆಟ್ಟಿ ಪಟ್ಲ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಸತೀಶ್ ಶೆಟ್ಟಿ ಪಟ್ಲ ಮಾತನಾಡಿದರು   

ಮಂಗಳೂರು: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಯಕ್ಷಧ್ರುವ ಯಕ್ಷಶಿಕ್ಷಣ ಯೋಜನೆಯು ಮೂರನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದು, ನಾಲ್ಕು ಜಿಲ್ಲೆಗಳ 90 ಶಾಲೆಗಳಲ್ಲಿ ಒಟ್ಟು 6,000 ವಿದ್ಯಾರ್ಥಿಗಳು ಉಚಿತವಾಗಿ ಯಕ್ಷಗಾನ ನಾಟ್ಯ ಶಿಕ್ಷಣ ಪಡೆಯುತ್ತಿದ್ದಾರೆ ಎಂದು ಟ್ರಸ್ಟ್ ಸ್ಥಾಪಕಾಧ್ಯಕ್ಷ ಸತೀಶ್ ಶೆಟ್ಟಿ ಪಟ್ಲ ಹೇಳಿದರು.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಯಕ್ಷಗಾನ ಕಲೆಯನ್ನು‌ ಶೈಕ್ಷಣಿಕ ಆಯಾಮದೊಂದಿಗೆ ಪರಿಚಯಿಸಬೇಕೆಂಬ ಉದ್ದೇಶದಿಂದ 2023ರಲ್ಲಿ ಕಾರ್ಯರೂಪಕ್ಕೆ ಬಂದ ಈ ಯೋಜನೆ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 38 ಶಾಲೆಗಳಲ್ಲಿ ಪ್ರಾರಂಭವಾಯಿತು. ಕಳೆದ ಶೈಕ್ಷಣಿಕ ವರ್ಷದಲ್ಲಿ ನಾಲ್ಕು ಜಿಲ್ಲೆಗಳ 87 ಶಾಲೆಗಳು ಸೇರಿಕೊಂಡಿದ್ದವು. ಈ ಬಾರಿ ದ.ಕ. ಜಿಲ್ಲೆಯಲ್ಲಿ 58, ಉಡುಪಿಯಲ್ಲಿ 14, ಶಿವಮೊಗ್ಗದಲ್ಲಿ 16, ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ಶಾಲೆಗಳಲ್ಲಿ ಯಕ್ಷ ಶಿಕ್ಷಣ ನಡೆಯುತ್ತಿದೆ ಎಂದರು.

ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಶಾಲಾ ಅವಧಿಯಲ್ಲಿ ನಡೆಯುವ ಈ ಯಕ್ಷಗಾನ ತರಗತಿಯು 6ನೇ ತರಗತಿಯಿಂದ 10ನೇ ತರಗತಿಯೊಳಗಿನ ವಿದ್ಯಾರ್ಥಿಗಳಿಗೆ ಮೀಸಲಾದ ಯೋಜನೆ. ಯಕ್ಷಗಾನದ ಜೊತೆಗೆ ಸಂಸ್ಕೃತಿ, ಜೀವನ ಮೌಲ್ಯ, ಕನ್ನಡ ಭಾಷಾ ಶುದ್ಧತೆಗೂ ಇದು ಪೂರಕವಾಗಿದೆ. 49 ಶಿಕ್ಷಕರು ತರಗತಿ ನಡೆಸುತ್ತಿದ್ದು, 19 ಶಾಲೆಗಳಲ್ಲಿ ಬಡಗುತಿಟ್ಟು, 71 ಶಾಲೆಗಳಲ್ಲಿ ತೆಂಕುತಿಟ್ಟು ಯಕ್ಷಗಾನ ತರಗತಿಗಳು ನಡೆಯುತ್ತಿವೆ. ಜೂನ್‌ನಿಂದ ಡಿಸೆಂಬರ್ ಕೊನೆಯವರೆಗೆ, ಶೈಕ್ಷಣಿಕ ವರ್ಷದಲ್ಲಿ ಕನಿಷ್ಠ 34, ಗರಿಷ್ಠ 64 ತರಗತಿಗಳನ್ನು ಮಾಡಲಾಗುತ್ತದೆ ಎಂದು ಯೋಜನೆಗೆ ನೆರವು ನೀಡುವ ವಾಸುದೇವ ಐತಾಳ್ ತಿಳಿಸಿದರು.

ADVERTISEMENT

ಯಕ್ಷಗಾನ ನಾಟ್ಯ ಕಲಿತ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದಲ್ಲಿ ವೇದಿಕೆ ಒದಗಿಸುವ ಜೊತೆಗೆ, ಪ್ರಾದೇಶಿಕ ಘಟಕ ವ್ಯಾಪ್ತಿಯ ಕೇಂದ್ರಸ್ಥಾನದಲ್ಲಿ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ ನಡೆಸಿ ಅವಕಾಶ ನೀಡಲಾಗುತ್ತದೆ. ಯಕ್ಷಗಾನಾಸಕ್ತ ವಿದ್ಯಾರ್ಥಿಗಳ ಯಕ್ಷಗಾನೀಯ ಚಟುವಟಿಕೆ ಅಭಿವೃದ್ಧಿಗೆ ಪೂರಕವಾಗಿದೆ. ಸುಸಂಸ್ಕೃತ ಪ್ರೇಕ್ಷಕರನ್ನು ಸೃಜಿಸುವಲ್ಲಿಯೂ ಇದು ಸಹಕಾರಿಯಾಗಲಿದೆ. ಮಕ್ಕಳಲ್ಲಿ ಪಠ್ಯ ಕಲಿಕಾ ಸಾಮರ್ಥ್ಯ ವೃದ್ಧಿಯಾಗಿದೆ. ಉತ್ತಮ ಅಂಕ ಪಡೆದವರಿಗೆ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸುದೇಶ್ ರೈ, ಪ್ರದೀಪ್ ಆಳ್ವ, ಕದ್ರಿ ನವನೀತ್ ಶೆಟ್ಟಿ ಉಪಸ್ಥಿತರಿದ್ದರು.

ಪಟ್ಲ ಸತೀಶ್ ಶಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.