ADVERTISEMENT

ದಕ್ಷಿಣ ಕನ್ನಡ: ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ನಿಧನ

​ಪ್ರಜಾವಾಣಿ ವಾರ್ತೆ
Published 7 ಜುಲೈ 2022, 5:27 IST
Last Updated 7 ಜುಲೈ 2022, 5:27 IST
ಬೆಳ್ಳಾರೆ ವಿಶ್ವನಾಥ ರೈ
ಬೆಳ್ಳಾರೆ ವಿಶ್ವನಾಥ ರೈ   

ಸುಳ್ಯ (ದಕ್ಷಿಣ ಕನ್ನಡ): ಯಕ್ಷಗಾನ ಕಲಾವಿದ ಬೆಳ್ಳಾರೆ ವಿಶ್ವನಾಥ ರೈ ಅಲ್ಪ ಕಾಲದ ಅಸೌಖ್ಯದಿಂದ ನಿಧನರಾದರು.

ಕನ್ನಡ ಮತ್ತು ತುಳು ಪ್ರಸಂಗಗಳಲ್ಲಿ ಮನೋಜ್ಞ ಅಭಿನಯದಿಂದ ಗಮನ ಸೆಳೆದಿದ್ದ ಬೆಳ್ಳಾರೆ ವಿಶ್ವನಾಥ ರೈ ಅವರು ಕರ್ನಾಟಕ ಮೇಳದಲ್ಲಿ ಮಂಡೆಚ್ಚ, ಅಳಿಕೆ, ಬೋಳಾರ, ಸಾಮಗ, ಮಿಜಾರು, ಪುಳಿಂಚ ಮೊದಲಾದ ಮಹಾನ್ ಚೇತನಗಳ ಒಡನಾಡಿಯಾಗಿದ್ದರು. ಅಳಿಕೆ ಯಕ್ಷನಿಧಿ, ಬೋಳಾರ ಪ್ರಶಸ್ತಿ ಮೊದಲಾದ ಪ್ರಶಸ್ತಿಗಳನ್ನು ಪಡೆದಿದ್ದರು. ಇತ್ತೀಚೆಗಷ್ಟೇ ಕಲ್ಲಡ್ಕದಲ್ಲಿ ಪುಳಿಂಚ ರಾಮಯ್ಯ ಶೆಟ್ಟಿ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.

1949ರಲ್ಲಿ ಬೆಳ್ಳಾರೆಯಲ್ಲಿ ಜನಿಸಿದ ವಿಶ್ವನಾಥ ರೈ ಅವರು 2 ನೇ ತರಗತಿವರೆಗೆ ಶಿಕ್ಷಣ ಪಡೆದಿದ್ದರು. ಅಚ್ಚುತ ಮಣಿಯಾಣಿ ಅವರಲ್ಲಿ ಯಕ್ಷ ನಾಟ್ಯಾಭ್ಯಾಸ ಮಾಡಿ 9ನೇ ವರ್ಷದಲ್ಲಿ ರಂಗಪ್ರವೇಶ ಮಾಡಿದರು. ರಾಜನ್ ಅಯ್ಯರ್ ಮತ್ತು ಕೇಶವ ಮಾಸ್ತರ್ ಅವರಲ್ಲಿ ಭರತನಾಟ್ಯ ಅಭ್ಯಾಸ ಮಾಡಿದರು. ಬಾಲಕನಿದ್ದಾಗಲೇ ತನ್ನ ಅಭಿನಯಕ್ಕೆ ಮಾಸ್ಟರ್ ಹಿರಣ್ಣಯ್ಯರಿಂದ ಚಿನ್ನದ ಉಂಗುರದ ಸನ್ಮಾನ ಸ್ವೀಕರಿಸಿದ್ದವರು ವಿಶ್ವನಾಥ ರೈ.

ADVERTISEMENT

ಕರ್ನಾಟಕ ಮೇಳ ಒಂದರಲ್ಲೇ 35 ವರ್ಷ ತಿರುಗಾಟ ಮಾಡಿದ್ದ ವಿಶ್ವನಾಥ ರೈ, ಮಧೂರು ಮೇಳದಲ್ಲಿ ಒಂದು ವರ್ಷ, ಸುರತ್ಕಲ್ ಮೇಳದಲ್ಲಿ ಐದು ವರ್ಷ, ಕದ್ರಿ ಮೇಳದಲ್ಲಿ ಎರಡು ವರ್ಷ, ಬಪ್ಪನಾಡು ಒಂದು ವರ್ಷ, ಕುಂಟಾರು ಮೇಳದಲ್ಲಿ ಎರಡು ವರ್ಷ, ಎಡನೀರು ಮೇಳದಲ್ಲಿ ಒಂದು ವರ್ಷ, ಕಟೀಲು ಮೇಳದಲ್ಲಿ ಮೂರು ವರ್ಷ ತಿರುಗಾಟ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.