ADVERTISEMENT

ಕರಾವಳಿಯಲ್ಲಿನ್ನು ಚೆಂಡೆ, ಮದ್ದಲೆ ನಾದ: ಹೊಸ ಪ್ರಸಂಗಗಳೊಂದಿಗೆ ತಿರುಗಾಟ

ಹೊಸ ಪ್ರಸಂಗಗಳೊಂದಿಗೆ ತಿರುಗಾಟಕ್ಕೆ ಸಜ್ಜಾದ ಯಕ್ಷಗಾನ ಬಯಲಾಟ ಮೇಳಗಳು

ಸಂಧ್ಯಾ ಹೆಗಡೆ
Published 3 ನವೆಂಬರ್ 2025, 7:53 IST
Last Updated 3 ನವೆಂಬರ್ 2025, 7:53 IST
ಕಟೀಲು ಮೇಳದ ತಿರುಗಾಟಕ್ಕೆ ಪೂರ್ವಭಾವಿಯಾಗಿ ಯಕ್ಷ ವೇಷಗಳ ಬಟ್ಟೆಯನ್ನು ಅಣಿಗೊಳಿಸುತ್ತಿರುವುದು
ಪ್ರಜಾವಾಣಿ ಚಿತ್ರ:  ನರೇಂದ್ರ ಕೆರೆಕಾಡು
ಕಟೀಲು ಮೇಳದ ತಿರುಗಾಟಕ್ಕೆ ಪೂರ್ವಭಾವಿಯಾಗಿ ಯಕ್ಷ ವೇಷಗಳ ಬಟ್ಟೆಯನ್ನು ಅಣಿಗೊಳಿಸುತ್ತಿರುವುದು ಪ್ರಜಾವಾಣಿ ಚಿತ್ರ:  ನರೇಂದ್ರ ಕೆರೆಕಾಡು   

ಮಂಗಳೂರು/ಉಡುಪಿ: ತುಡರ ಪರ್ಬ ಮುಗಿಯಿತೆಂದರೆ ಕರಾವಳಿಯಲ್ಲಿ ತಡ್ಪೆಕಿರೀಟ, ಭುಜಕೀರ್ತಿ, ಸೊಂಟಪಟ್ಟಿ, ಗೆಜ್ಜೆ, ತಾಳ, ಚೆಂಡೆ, ಮದ್ದಳೆಗಳು ಮತ್ತೆ ಹೊಳಪು ಪಡೆದುಕೊಳ್ಳುತ್ತವೆ. ಯಕ್ಷಗಾನ ಬಯಲಾಟ ಮೇಳಗಳು ಬಣ್ಣದ ಪೆಟ್ಟಿಗೆ ಕಟ್ಟಿ ತಿರುಗಾಟಕ್ಕೆ ಸಜ್ಜಾಗುತ್ತವೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಏಳನೇ ಮೇಳ ಈ ವರ್ಷದ ತಿರುಗಾಟಕ್ಕೆ ಹೊಸದಾಗಿ ಸೇರ್ಪಡೆಗೊಂಡಿವೆ. ಹೊಸ ಕಲಾವಿದರು, ಒಂದು ಮೇಳದಿಂದ ಇನ್ನೊಂದು ಮೇಳಕ್ಕೆ ಸೇರಿದ ಕಲಾವಿದರು, ಹೊಸ ಪ್ರಸಂಗಗಳ ಬಗ್ಗೆ ಯಕ್ಷ ಪ್ರೇಕ್ಷಕರ ಕೌತುಕ ಹೆಚ್ಚಿದೆ. ಕೆಲವು ಮೇಳಗಳು ಹೊಸ ಪ್ರಸಂಗಗಳು ಹಾಗೂ ತಿರುಗಾಟದ ದಿನಾಂಕ ಘೋಷಿಸಿದ್ದು, ಹೊಸ ಪ್ರಸಂಗಗಳ ಕಥಾನಕಗಳ ಬಗ್ಗೆಯೂ ಯಕ್ಷಪ್ರೇಮಿಗಳು ಕುತೂಹಲಿಗಳಾಗಿದ್ದಾರೆ.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ, ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಮಂಡಳಿ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಗೆಜ್ಜೆಗಿರಿ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಮಂಡಳಿ, ಸಸಿಹಿತ್ಲು ಭಗವತಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಮೇಳಗಳು ಪ್ರದರ್ಶನಕ್ಕೆ ಅಣಿಯಾಗಿವೆ.

ADVERTISEMENT

ಕಟೀಲಿನ ಆರು ಮೇಳಗಳ ಜೊತೆಗೆ ಈ ಬಾರಿ ಏಳನೇ ಮೇಳ ಸೇರ್ಪಡೆಯಾಗಿದೆ. ನ.15ಕ್ಕೆ ಮೇಳಗಳ ದೇವರ ಮೆರವಣಿಗೆ, ನ.16 ಏಳನೇ ಮೇಳದ ಪಾದಾರ್ಪಣೆ, ಏಳೂ ಮೇಳಗಳ ಪ್ರಾರಂಭೋತ್ಸವ ನಿಗದಿಯಾಗಿದೆ. ಕಟೀಲು ಮೇಳಗಳ ಸೇವೆಯಾಟದಲ್ಲಿ ಪೌರಾಣಿಕ ಪ್ರಸಂಗಗಳು ಮಾತ್ರ ಇರುತ್ತವೆ.

‘ವರ್ಣ ಪಲ್ಲಟ ಎಂಬ ನೂತನ ಪೌರಾಣಿಕ ಪ್ರಸಂಗದೊಂದಿಗೆ ಈ ವರ್ಷದ ತಿರುಗಾಟ ನ.25ಕ್ಕೆ ಪ್ರಾರಂಭವಾಗಲಿದೆ. ಮೇಳದ ಬಣ್ಣದ ವೇಷಧಾರಿ ಸದಾಶಿವ ಶೆಟ್ಟಿ ಇಹಲೋಕ ತ್ಯಜಿಸಿದ್ದಾರೆ. ಹೊಸ ಕಲಾವಿದರಾಗಿ ವಿದ್ಯಾಭೂಷಣ ಪಂಜಾಜೆ ಮೇಳಕ್ಕೆ ಸೇರಿಕೊಂಡಿದ್ದಾರೆ. ಇನ್ನುಳಿದಂತೆ ಹಿಂದಿನ ವರ್ಷದ ಎಲ್ಲ ಕಲಾವಿದರೂ ಮೇಳದಲ್ಲಿ ಮುಂದುವರಿದಿದ್ದಾರೆ. 150ಕ್ಕೂ ಹೆಚ್ಚು ಆಟಗಳು ಮುಂಗಡ ಬುಕ್ಕಿಂಗ್ ಆಗಿವೆ’ ಎಂದು ಹನುಮಗಿರಿ ಮೇಳದ ಪ್ರಬಂಧಕ ಹರೀಶ್ ಬಳಂತಿಮುಗರು ಪ್ರತಿಕ್ರಿಯಿಸಿದರು.

‘ನ.5ಕ್ಕೆ ಧರ್ಮಸ್ಥಳ ಮೇಳದ ಆಟ ಶುರು. 22ರವರೆಗೆ ಕ್ಷೇತ್ರದಲ್ಲಿ ಸೇವಾಕರ್ತರ ಯಕ್ಷಗಾನ ಹರಕೆಯಾಟಗಳು ಪ್ರದರ್ಶನಗೊಳ್ಳುತ್ತವೆ. ನ.23ರಿಂದ ತಿರುಗಾಟ ಪ್ರಾರಂಭವಾಗಿ ಮೇ 24ಕ್ಕೆ ಮುಕ್ತಾಯಗೊಳ್ಳುತ್ತದೆ. ‘ಗಾಂಧಾರಿ’ ಮತ್ತು ‘ದನುರ್ಧರ ಧನಂಜಯ’ ಇವೆರಡು ಈ ಬಾರಿಯ ಹೊಸ ಪ್ರಸಂಗಗಳು. 180 ಆಟಗಳಲ್ಲಿ 120ಕ್ಕೂ ಹೆಚ್ಚು ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಪ್ರಸಂಗಗಳೇ ಇರುತ್ತವೆ. ಹೊಸ ಪ್ರಸಂಗಗಳನ್ನು ಜನರು ಅಷ್ಟಾಗಿ ಬಯಸುವುದಿಲ್ಲ. ಹಿಮ್ಮೇಳದಲ್ಲಿ ಅಡೂರು ಲಕ್ಷ್ಮಿನಾರಾಯಣ ರಾವ್ ಮೇಳಕ್ಕೆ ಬಂದಿದ್ದಾರೆ. ಉಳಿದಂತೆ ಹಿಂದಿನ ಕಲಾವಿದರೇ ಮುಂದುವರಿಯುತ್ತಾರೆ’ ಎನ್ನುತ್ತಾರೆ ಧರ್ಮಸ್ಥಳ ಮೇಳದ ಮ್ಯಾನೇಜರ್ ಗಿರೀಶ್ ಹೆಗ್ಡೆ.

35 ವರ್ಷಗಳ ನಂತರ ಕುಕ್ಕೆ ಕ್ಷೇತ್ರದ ಮೇಳ ಮತ್ತೆ ತಿರುಗಾಟ ನಡೆಸಲಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಹೆಸರಿನಲ್ಲಿ ಹೊರಡಲಿರುವ ಮೇಳವು ‘ಶ್ರೀ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ’, ‘ಸರ್ಪ ಸಂಪತ್ತ್’, ‘ಕಾರ್ಣಿಕದ ಕಾಲ ಭೈರವ’ ಮೂರು ಹೊಸ ಪ್ರಸಂಗಗಳೊಂದಿಗೆ ರಂಗಕ್ಕೆ ಬರಲು ಸಿದ್ಧವಾಗಿದೆ.

ಉಡುಪಿಯಲ್ಲೂ ಮೇಳಗಳು ಸಜ್ಜು

ಜಿಲ್ಲೆಯ ಪ್ರಮುಖ ಯಕ್ಷಗಾನ ಮೇಳಗಳಾದ ಮಂದಾರ್ತಿ, ಮಾರಣಕಟ್ಟೆ ಮೇಳಗಳು ಈ ವರ್ಷದ ತಿರುಗಾಟಕ್ಕೆ ಸಕಲ ಸಿದ್ಧತೆ ನಡೆಸಿವೆ. ಜೊತೆಗೆ ಇತರ ಮೇಳಗಳಾದ ಮೆಕ್ಕೆಕಟ್ಟು, ಮಡಾಮಕ್ಕಿ, ಕಮಲಶಿಲೆ, ಅಮೃತೇಶ್ವರಿ, ನೀಲಾವರ, ಸೌಕೂರು, ಹಾಲಾಡಿ, ಹಟ್ಟಿಯಂಗಡಿ, ಗೋಳಿಗರಡಿ ಮೇಳಗಳು ಕೂಡ ಬಯಲಾಟಕ್ಕೆ ಸಜ್ಜಾಗಿವೆ. ಮಂದಾರ್ತಿಯ ಐದು ಮೇಳಗಳ ಪ್ರಥಮ ಸೇವೆಯಾಟ ನ.16ಕ್ಕೆ, ಮಾರಣಕಟ್ಟೆ ಕ್ಷೇತ್ರದ ಮೂರು ಮೇಳಗಳ ಪ್ರಥಮ ಸೇವೆಯಾಟ ನ.17ಕ್ಕೆ ನಿಗದಿಯಾಗಿದೆ. 

ಮಂದಾರ್ತಿ ಮೇಳದ ಮಳೆಗಾಲದ ತಿರುಗಾಟದ ಕೊನೆಯ ಆಟ ಇದೇ 6ರಂದು ನಡೆಯಲಿದ್ದು, ಇದೇ 16ರಿಂದ 2025–26ನೇ ಸಾಲಿನ ತಿರುಗಾಟ ಆರಂಭವಾಗಲಿದೆ. ಜಿಲ್ಲೆಯ ಎಲ್ಲಾ ಮೇಳಗಳೂ ನವೆಂಬರ್‌ ತಿಂಗಳಿನಿಂದಲೇ ತಿರುಗಾಟ ಆರಂಭಿಸುತ್ತವೆ.

ಮಳೆಗಾಲದಲ್ಲಿ ಮಂದಾರ್ತಿ ಮೇಳದ ವತಿಯಿಂದ 25 ಮಂದಿ ವಿದ್ಯಾರ್ಥಿಗಳಿಗೆ ನಾಲ್ಕೂವರೆ ತಿಂಗಳ ಉಚಿತ ವಸತಿ ಸಹಿತ ತರಬೇತಿ ನೀಡಲಾಗಿದೆ. ಭಾಗವತಿಕೆ, ಚೆಂಡೆ ಮದ್ದಲೆ ವಾದನ, ನಾಟ್ಯದ ಕುರಿತು ಅವರಿಗೆ ತರಬೇತಿ ನೀಡಲಾಗಿದೆ. ತರಬೇತಿ ಅವಧಿಯಲ್ಲಿ ವಿದ್ಯಾರ್ಥಿ ವೇತನವನ್ನೂ ನೀಡಲಾಗಿದೆ ಎಂದು ಮಂದಾರ್ತಿ ಮೇಳದ ಮೂಲಗಳು ತಿಳಿಸಿವೆ.

ಡೇರೆ ಮೇಳವಾದ ಗುರುಪ್ರಸಾದಿತ ಯಕ್ಷಗಾನ ಮಂಡಳಿ ಸಾಲಿಗ್ರಾಮ ಮೇಳವು ‘ಷಣ್ಮುಖಪ್ರಿಯ’, ‘ಸ್ವಪ್ನ ಮಂಟಪ’ ಇವೆರಡು ನೂತನ ಪ್ರಸಂಗಗಳೊಂದಿಗೆ ತೆಂಕು ಹಾಗೂ ಬಡಗುತಿಟ್ಟಿನಲ್ಲಿ ತಿರುಗಾಟಕ್ಕೆ ಹೊರಟಿವೆ.

ಮಂದಾರ್ತಿಯಲ್ಲಿ ಐದು ಮೇಳಗಳು ಹಾಗೂ ಮಾರಣ ಕಟ್ಟೆಯಲ್ಲಿ ಮೂರು ಮೇಳಗಳಿವೆ. ಮಾರಣ ಕಟ್ಟೆ ಮೇಳ ಕುಂದಾಪುರ ವ್ಯಾಪ್ತಿಯಲ್ಲೇ ಬಯಲಾಟ ಪ್ರದರ್ಶಿಸಿದರೆ, ಮಂದಾರ್ತಿ ಮೇಳವು ಉಡುಪಿ ಮಾತ್ರವಲ್ಲದೆ ಶಿವಮೊಗ್ಗ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲೂ ಬಯಲಾಟ ಪ್ರದರ್ಶನ ನೀಡುತ್ತದೆ.

ಕಟೀಲು ಮೇಳದ ತಿರುಗಾಟಕ್ಕೆ ಪೂರ್ವಭಾವಿಯಾಗಿ ಯಕ್ಷ ವೇಷಗಳ ಬಟ್ಟೆಯನ್ನು ಅಣಿಗೊಳಿಸುತ್ತಿರುವುದು ಪ್ರಜಾವಾಣಿ ಚಿತ್ರ:  ನರೇಂದ್ರ ಕೆರೆಕಾಡು
ಕಟೀಲಿನಲ್ಲಿ ಪ್ರಥಮ ಸೇವೆಯಾಟ ಪ್ರದರ್ಶನಕ್ಕೆ ವೇದಿಕೆ ನಿರ್ಮಿಸಲು ಜಾಗವನ್ನು ಸಜ್ಜುಗೊಳಿಸಲಾಗುತ್ತಿದೆ

ಗೆಜ್ಜೆಗಿರಿ ಮೇಳ

ಐದು ಹೊಸ ಪ್ರಸಂಗ ‘ಗೆಜ್ಜೆಗಿರಿ ಮೇಳದ ತಿರುಗಾಟ ನ.23ಕ್ಕೆ ಪ್ರಾರಂಭವಾಗಲಿದೆ. ‘ಶ್ರೀ ಶಬರಿಮಲೆ ಕ್ಷೇತ್ರ ಮಹಾತ್ಮೆ’ ‘ವಲ್ಮೈಕಾಮೃತ್ತಿಕಾ’ (ಶ್ರೀ ಆದಿಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಮಹಾತ್ಮೆ) ತುಳು ಭಾಷೆಯ ‘ಗಗ್ಗರ’ ‘ಮಾಯಾಶಕ್ತಿ ಮಂತ್ರದೇವತೆ’ ‘ನಾಗರತಿ’ ಈ ಬಾರಿಯ ನೂತನ ಪೌರಾಣಿಕ ಪ್ರಸಂಗಗಳು. ಸೇವಾಕರ್ತರಿಂದ ಬೇಡಿಕೆ ಬಂದಲ್ಲಿ ಉಳಿದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸಲು ಸಿದ್ಧರಿದ್ದೇವೆ. ‘ಶಬರಿಮಲೆ ಕ್ಷೇತ್ರ ಮಹಾತ್ಮೆ’ ಪ್ರಸಂಗದ ಬಿಡುಗಡೆ ಸಮಾರಂಭವು ನ.8ಕ್ಕೆ ಮೂಡುಬಿದಿರೆ ಕನ್ನಡ ಭವನದಲ್ಲಿ ನಡೆಯಲಿದೆ. ಹೊಸ ಕಲಾವಿದರಾಗಿ ಕೊಳ್ತಿಗೆ ನಾರಾಯಣ ಗೌಡ ಉದಯ ಅಡ್ಯನಡ್ಕ ನಾಗಪ್ಪ ಪಡುಮಲೆ ಸುರೇಶ್ ಬಾಯಾರು ಅಭಿಜಿತ್ ಜೈನ್ ಕುತ್ಲೂರು ಸೇರ್ಪಡೆಗೊಂಡಿದ್ದಾರೆ ಎಂದು ಗೆಜ್ಜೆಗಿರಿ ಮೇಳದ ಪ್ರಬಂಧಕ ನಿತಿನ್‌ ಕುಮಾರ್ ತೆಂಕಕಾರಂದೂರು ತಿಳಿಸಿದರು.

47ನೇ ಸಾಲಿನವರೆಗೆ ಬುಕ್ಕಿಂಗ್‌ ಮಂದಾರ್ತಿ ಮೇಳದ ಹರಕೆ ಆಟ 2046–47ನೇ ಸಾಲಿನವರೆಗೆ ಬುಕ್ಕಿಂಗ್‌ ಆಗಿದೆ ಎಂದು ಮೇಳದ ಮೂಲಗಳು ತಿಳಿಸಿವೆ. ಕೆಲವೊಮ್ಮೆ ಅನಿವಾರ್ಯ ಕಾರಣಗಳಿಂದ ಆಟ ರದ್ದಾದರೆ ಆ ದಿನದಂದು ಇತರರಿಗೆ ಅವಕಾಶ ಸಿಗುತ್ತದೆ. ಒಮ್ಮೆ ಆಟ ರದ್ದಾದರೆ ಅವರು ಮತ್ತೆ ಮೊದಲಿನಿಂದಲೇ ಬುಕ್ಕಿಂಗ್‌ ಮಾಡಬೇಕಾಗಿದೆ ಎಂದೂ ಹೇಳಿವೆ.

‘ಹರಕೆ ಕಟ್ಟುಕಟ್ಟಳೆ ಆಟ’

‘ಅಮೃತೇಶ್ವರಿ ಮತ್ತು ಸೌಕೂರು ಮೇಳಗಳು ಶೇ 75 ರಷ್ಟು ಹರಕೆ ಆಟಗಳನ್ನು ಹಾಗೂ ಶೇ 25ರಷ್ಟು ಕಟ್ಟುಕಟ್ಟಳೆ ಆಟವನ್ನು ಆಡುತ್ತವೆ. ಉಡುಪಿ ಜಿಲ್ಲೆಯ ಗೋಳಿಗರಡಿ ಮತ್ತು ಮೆಕ್ಕಿಕಟ್ಟೆ ಮೇಳಗಳು ದೈವಗಳ ಕ್ಷೇತ್ರಗಳಿಂದ ಹೊರಡುವ ಮೇಳಗಳಾಗಿವೆ. ಗೋಳಿಗರಡಿ ಮೇಳವು ಪುರಾತನ ಮೇಳವಾಗಿದ್ದು ಇದಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ’ ಎಂದು ಯಕ್ಷಗಾನ ವಿಮರ್ಶಕ ಮಣಿಪಾಲದ ಪ್ರೊ.ಎಸ್‌.ವಿ. ಉದಯ್‌ಕುಮಾರ್‌ ಶೆಟ್ಟಿ ತಿಳಿಸಿದರು. ‘ಮಂದಾರ್ತಿ ಅಮೃತೇಶ್ವರಿ ಕಮಲಶಿಲೆ ನೀಲಾವರ ಸೌಕೂರು ಮೇಳಗಳು ದುರ್ಗಾಪರಮೇಶ್ವರಿ ಕ್ಷೇತ್ರಗಳಿಂದ ಹೊರಡುವ ಮೇಳಗಳಾಗಿವೆ. ಈ ಮೇಳಗಳಲ್ಲಿ ಕ್ಷೇತ್ರ ಮಹಾತ್ಮೆ ‘ದೇವಿ ಮಹಾತ್ಮೆ’ ಪ್ರಸಂಗಗಳನ್ನೇ ಹೆಚ್ಚಾಗಿ ಆಡಲಾಗುತ್ತದೆ. ಜೊತೆಗೆ ಪೌರಾಣಿಕ ಪ್ರಸಂಗಗಳನ್ನೂ ಪ್ರದರ್ಶಿಸಲಾಗುತ್ತದೆ. ಟೆಂಟ್‌ ಮೇಳಗಳಲ್ಲಿ ಪ್ರತಿವರ್ಷ ಪ್ರಸಂಗ ಬದಲಾಗುತ್ತದೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.