ADVERTISEMENT

ಯಕ್ಷಗಾನ ಕವಿಗಳ ನಿರ್ಲಕ್ಷ್ಯ ಸಲ್ಲದು: ಎಂ.ಎಲ್ ಸಾಮಗ

ಮಂಗಳೂರು ವಿವಿ ಯಕ್ಷಗಾನ ಕೇಂದ್ರದಿಂದ ರಾಷ್ಟ್ರೀಯ ವಿಚಾರ ಸಂಕಿರಣ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2025, 13:50 IST
Last Updated 3 ಫೆಬ್ರುವರಿ 2025, 13:50 IST
‘ಯಕ್ಷಗಾನ ಪ್ರಸಂಗ: ಸ್ವರೂಪ ಮತ್ತು ಅನನ್ಯತೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್ ಸಾಮಗ ಉದ್ಘಾಟಿಸಿದರು
‘ಯಕ್ಷಗಾನ ಪ್ರಸಂಗ: ಸ್ವರೂಪ ಮತ್ತು ಅನನ್ಯತೆ’ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್ ಸಾಮಗ ಉದ್ಘಾಟಿಸಿದರು   

ಉಳ್ಳಾಲ: ‘ಯಕ್ಷಗಾನದ ಹುಟ್ಟು ಅಸ್ಪಷ್ಟ. ಆದರೆ, ಬೆಳವಣಿಗೆಯ ಸಂದರ್ಭದಲ್ಲಿ ಪಾರ್ತಿಸುಬ್ಬ ದೇವಿದಾಸರಿಂದ ತೊಡಗಿ ಅಗರಿ, ಬಲಿಪ, ಅಮೃತ ಸೋಮೇಶ್ವರ, ಪುರುಷೋತ್ತಮ ಪೂಂಜ ಹೀಗೆ ಅನೇಕ ಕವಿಗಳು ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಯಕ್ಷಗಾನ ಪ್ರಸಂಗಗಳನ್ನು ವಿಮರ್ಶಕರು‌ ಕಾವ್ಯ ಪ್ರಕಾರವೆಂದು ಪರಿಗಣಿಸುತ್ತಿಲ್ಲ. ಯಕ್ಷಗಾನ ಪ್ರದರ್ಶನ ಸಂದರ್ಭದಲ್ಲೂ ಕವಿಗಳ ಹೆಸರನ್ನು ಹೇಳುವುದಿಲ್ಲ. ಈ ನಿರ್ಲಕ್ಷ್ಯ ಸರಿಯಲ್ಲ’ ಎಂದು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ.ಎಲ್ ಸಾಮಗ ಹೇಳಿದರು.‌

ದೇರಾಜೆ ಸೀತಾರಾಮಯ್ಯ ಅಧ್ಯಯನ ಕೇಂದ್ರ, ಯಕ್ಷರಂಜಿನಿ ಹಾಗೂ ಐಕ್ಯೂಎಸಿಯ ಸಹಯೋಗದಲ್ಲಿ ನಡೆದ ‘ಯಕ್ಷಗಾನ ಪ್ರಸಂಗ: ಸ್ವರೂಪ ಮತ್ತು ಅನನ್ಯತೆ’ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಯಕ್ಷಗಾನ ಪ್ರಸಂಗ ಸಾಹಿತ್ಯ ಬೆಳೆದು ಬಂದ ಬಗೆಯ ಕುರಿತು ಪಾದೇಕಲ್ಲು ವಿಷ್ಣು ಭಟ್ ಮಾತನಾಡಿ, ‘ಯಕ್ಷಗಾನ ಕವಿಗಳು ಹಳೆಗನ್ನಡ ಕಾವ್ಯವನ್ನು ಹೆಚ್ಚು ಓದಿಲ್ಲ. ನಡುಗನ್ನಡ ಕಾಲದ ಕಾವ್ಯಗಳೇ ಅವರಿಗೆ ಮಾರ್ಗದರ್ಶಿ’ ಎಂದರು.

ADVERTISEMENT

ಅರ್ಥ ವಿಸ್ತರಣೆ ಸಾಧ್ಯತೆಯ ಕುರಿತು ಉಜಿರೆ ಅಶೋಕ ಭಟ್ ಮಾತನಾಡಿ, ‘ಕ್ಷೇತ್ರ ಮಹಾತ್ಮೆಗಳು ಕಾಲ್ಪನಿಕ. ಶ್ರದ್ಧೆ ಹೆಚ್ಚಿಸುವುದು ಈ ಪ್ರಸಂಗಗಳ ಲಕ್ಷ್ಯ. ಯಕ್ಷಗಾನದಲ್ಲಿ ದೇವರು ಬಂದರೆ ಪುರಾಣ ಎಂಬಂತಾಗಿದೆ. ಭಾಗವತರಿಗೆ ಅರ್ಥಪ್ರಜ್ಞೆ ಇರಬೇಕು.ಆಗ ಪ್ರದರ್ಶನ ಉತ್ತಮವಾಗುತ್ತದೆ. ಹಿಂದೆ ಊರೂರ ಸಂಘಗಳಲ್ಲಿ ನಡೆಯುತ್ತಿದ್ದ ತಾಳಮದ್ದಳೆಗಳಲ್ಲಿ ಅರ್ಥಧಾರಿಗಳು ತಯಾರಾಗುತ್ತಿದ್ದರು ಈಗ ಶಿಕ್ಷಣ ಸಂಸ್ಥೆಗಳು ಈ ಜವಾಬ್ದಾರಿಯನ್ನು ನಿರ್ವಹಿಸಬೇಕು’ ಎಂದರು.

ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಮಾತನಾಡಿ ‘ಕನ್ನಡ ಸಾಹಿತ್ಯಕ್ಕೆ ಯಕ್ಷಗಾನ ಪ್ರಸಂಗಗಳ ಕೊಡುಗೆಯೂ ಗಮನಾರ್ಹವಾದುದು.ಅವುಗಳ ಆಳವನ್ನು ಅಧ್ಯಯನ ಮಾಡಿಕೊಂಡು ಯಕ್ಷಗಾನವನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದು ತಿಳಿಸಿದರು.

ವಿವೇಕಾನಂದ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಪತಿ ಕಲ್ಲೂರಾಯ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಸಂಚಾಲಕ ಮುರಳಿ ಕೃಷ್ಣ ಕೆ.ಎನ್ ಇದ್ದರು.

ಕಾಲೇಜಿನ 'ಯಕ್ಷರಂಜಿನಿ'ಯ ವಿದ್ಯಾರ್ಥಿಗಳಿಂದ ವಿವಿಧ ಕವಿಗಳ ಪ್ರಸಂಗಗಳ ಆಯ್ದ ಪದ್ಯಗಳ ಯಕ್ಷಗಾನ ಗಾನ ಪ್ರಸ್ತುತಿ ನಡೆಯಿತು. ಮನಮೋಹನ ಎಂ. ಸ್ವಾಗತಿಸಿದರು. ಭವ್ಯಾ ಪಿ.ಆರ್ ನಿಡ್ಪಳ್ಳಿ ವಂದಿಸಿದರು. ಶ್ರೇಯಾ ಆಚಾರ್ಯ, ಭೂಮಿಕಾ ಜಿ ಆಚಾರ್ಯ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.