ADVERTISEMENT

ಹಿಮ್ಮೇಳದಷ್ಟೇ ವಾಚಿಕವೂ ಮುಖ್ಯ: ಎಂ.ನಾ. ಚಂಬಲ್ತಿಮಾರ್

ಆರ್ಲಪದವಿನಲ್ಲಿ ಯಕ್ಷಗಾನ ನಾಟ್ಯ, ತಾಳಮದ್ದಲೆ ತರಬೇತಿಯಲ್ಲಿ ಚಂಬಲ್ತಿಮಾರ್

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2020, 2:34 IST
Last Updated 9 ಸೆಪ್ಟೆಂಬರ್ 2020, 2:34 IST
ಪುತ್ತೂರು ತಾಲ್ಲೂಕಿನ ಆರ್ಲಪದವು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ತರಬೇತಿ ಆರಂಭವಾಯಿತು
ಪುತ್ತೂರು ತಾಲ್ಲೂಕಿನ ಆರ್ಲಪದವು ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆವರಣದಲ್ಲಿ ಯಕ್ಷಗಾನ ತರಬೇತಿ ಆರಂಭವಾಯಿತು   

ಮಂಗಳೂರು: ಯಕ್ಷಗಾನದಲ್ಲಿ ಪ್ರಸಕ್ತ ನಾಟ್ಯ ಮತ್ತು ಹಿಮ್ಮೇಳಕ್ಕಷ್ಟೇ ಅತಿ ಪ್ರಾಧಾನ್ಯತೆ ನೀಡಲಾಗುತ್ತಿದ್ದು, ವಾಚಿಕ ಮತ್ತು ಇತರ ವಿಭಾಗಗಳು ಇತ್ತೀಚಿನ ದಶಕದಲ್ಲಿ ನಿರ್ಲಕ್ಷಿತವಾಗತೊಡಗಿವೆ ಎಂದು ಲೇಖಕ ಎಂ.ನಾ. ಚಂಬಲ್ತಿಮಾರ್ ವಿಷಾದಿಸಿದರು.

ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ನೇತೃತ್ವದಲ್ಲಿ ಪುತ್ತೂರು ತಾಲ್ಲೂಕಿನ ಆರ್ಲಪದವು ಸುಬ್ರಹ್ಮಣ್ಯೇಶ್ವರ ಯಕ್ಷಗಾನ ಕಲಾಸಂಘದ 16ನೇ ವರ್ಷದ ಉಚಿತ ಯಕ್ಷಗಾನ ನಾಟ್ಯ ತರಗತಿ ಮತ್ತು ನೂತನವಾಗಿ ಆರಂಭಿಸಿದ ತಾಳಮದ್ದಳೆ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.

ಒಂದು ಕಲೆಯಲ್ಲಿ ಕಲೆ ಮತ್ತು ಕಲಾವಿದ ಯಶಸ್ವಿಯಾಗಬೇಕಿದ್ದರೆ, ಪರಿಪೂರ್ಣ ಎನಿಸಬೇಕಿದ್ದರೆ ಸರ್ವಾಂಗಗಳಲ್ಲೂ ಕನಿಷ್ಠ ಪರಿಣತಿಯ ಸಮಚಿತ್ತ ಸಾಧನೆ ಮಾಡಬೇಕು. ಕೇವಲ ಒಂದು ವಿಭಾಗದಲ್ಲಿ ಮಾತ್ರ ಮೆರೆದು, ಇತರ ವಿಭಾಗಗಳು ಊನವಾದರೆ ಅದು ಅಂಗವೈಕಲ್ಯಕ್ಕೆ ಸಮಾನ ಎಂದು ಅಭಿಪ್ರಾಯಪಟ್ಟರು.

ADVERTISEMENT

ಯಕ್ಷಗಾನಲ್ಲಿ ನಾಟ್ಯಗಾರಿಕೆಯಷ್ಟೇ ಪ್ರಾಧಾನ್ಯತೆಯನ್ನು ಭಾಷೆ ಮತ್ತು ಕಥನಕಲೆ ವಿಸ್ತರಣೆಯ ಸಂಭಾಷಣೆಗೂ ನೀಡಬೇಕು. ಪ್ರಸ್ತುತ ಯಕ್ಷಗಾನ ನಾಟ್ಯ ತರಬೇತಿಯ ಜತೆಯಲ್ಲೇ ಆಸಕ್ತರಿಗೆ ತಾಳಮದ್ದಳೆ ಅಭ್ಯಾಸ ತರಗತಿಯನ್ನೂ ಆರಂಭಿಸಿರುವುದು ಭವಿಷ್ಯದ ದೃಷ್ಟಿಯಲ್ಲಿ ಮಾದರಿ ಮತ್ತು ಶ್ಲಾಘನೀಯ ಹೆಜ್ಜೆ ಎಂದು ತಿಳಿಸಿದರು.

ಕೊರೊನೋತ್ತರ ದಿನಗಳಲ್ಲಿ ಕಲೆಯ ಭವಿಷ್ಯವೇ ಮಂಕಾಗಿದೆ. ಆದರೆ ನಾಳೆಗಳನ್ನು ನಿರ್ಮಿಸುವ, ಭವಿಷ್ಯವನ್ನು ಕಟ್ಟುವ ಎದೆಗಾರಿಕೆ ಮತ್ತು ಅಚಲ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ಹಿಂದೆ ಯಕ್ಷಗಾನವನ್ನು ಕಟ್ಟಿ ಬೆಳೆಸಿರುವುದು ಅತ್ಯಂತ ಗ್ರಾಮೀಣ ಹಿನ್ನೆಲೆಯವರೆಂಬುದೇ ನಮಗೆ ಸ್ಫೂರ್ತಿ ಆಗಬೇಕು ಎಂದು ಸಲಹೆ ನೀಡಿದರು.

ವಕೀಲ ಕೃಪಾಶಂಕರ್ ಪಾಣಾಜೆ ಅಧ್ಯಕ್ಷತೆ ವಹಿಸಿದರು. ಉದ್ಯಮಿ ಉಪೇಂದ್ರ ಬಲ್ಯಾಯ, ವಿಟ್ಲ ಜೇಸಿಸ್ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ಜಯರಾಮ ರೈ ದಂಬೆಕಾನ, ಅಧ್ಯಾಪಕ ಚಂದ್ರಹಾಸ ಕಟುಕುಕ್ಕೆ, ಕಾಟುಕುಕ್ಕೆ ಗಣೇಶೋತ್ಸವ ಸಮಿತಿ ಅಧ್ಯಕ್ಷ ಬಾಬು ರೈ ಕೋಟೆ, ಪಾಣಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯ ರವೀಂದ್ರ ಭಂಡಾರಿ, ದೇವಿಪ್ರಸಾದ ಬಯಿಲಾಡಿ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಸಂಘದ ಉಪಾಧ್ಯಕ್ಷ ಸತ್ಯನಾರಾಯಣ ಅಡಿಗ ಸ್ವಾಗತಿಸಿದರು. ನಾಟ್ಯಗುರು ಬಾಲಕೃಷ್ಣ ಪೂಜಾರಿ ಉಡ್ಡಂಗಳ ವಂದಿಸಿದರು. ಪ್ರಾಧ್ಯಾಪಕ ಸುರೇಶ್ ಕುಮಾರ್ ಕಡಂದೇಲು ನಿರೂಪಿಸಿದರು.

35 ನೂತನ ವಿದ್ಯಾರ್ಥಿಗಳು ನಾಟ್ಯ ಶಿಕ್ಷಣ ತರಗತಿಗೆ ಸೇರ್ಪಡೆಗೊಂಡಿದ್ದು, ಸಂಘದ ಸದಸ್ಯರು ಸೇರಿದಂತೆ ಆಸಕ್ತರು ತಾಳಮದ್ದಳೆ ಅಭ್ಯಾಸ ತರಗತಿಯಲ್ಲಿ ಪಾಲ್ಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.