
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ‘ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರದ 2025-26ನೇ ಸಾಲಿನ ಯಕ್ಷಮಂಗಳ ಪ್ರಶಸ್ತಿಗೆ ಯಕ್ಷಗಾನ ರಂಗದ ಹಿರಿಯ ಕಲಾವಿದ ಕಪ್ಪೆಕೆರೆ ಸುಬ್ರಾಯ ಭಾಗವತ, ಯಕ್ಷಗಾನ ಗುರುಗಳಾದ ಮಾಂಬಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ಯಕ್ಷಗಾನ ಅರ್ಥಧಾರಿ ಜಬ್ಬಾರ್ ಸಮೊ ಅವರು ಆಯ್ಕೆಯಾಗಿದ್ದಾರೆ. ಯಕ್ಷಮಂಗಳ ಕೃತಿ ಪ್ರಶಸ್ತಿಗೆ ಕೃಷ್ಣ ಪ್ರಕಾಶ್ ಉಳಿತ್ತಾಯ ಅವರ 'ಬಲಿಪ ಮಾರ್ಗ’ ಹಾಗೂ ‘ಅಗರಿ ಮಾರ್ಗ' ಕೃತಿಗಳು ಆಯ್ಕೆಯಾಗಿವೆ.
ಯಕ್ಷಮಂಗಳ ಪ್ರಶಸ್ತಿಯು₹ 25 ಸಾವಿರ ನಗದು, ಯಕ್ಷಮಂಗಳ ಕೃತಿ ಪ್ರಶಸ್ತಿಯು ₹10 ಸಾವಿರ ನಗದನ್ನು ಒಳಗೊಂಡಿದೆ.
ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಹಡಿನಬಾಳದಲ್ಲಿ 1947 ರಲ್ಲಿ ಜನಿಸಿದ ಕಪ್ಪೆಕೆರೆ ಸುಬ್ರಾಯ ಭಾಗವತರು 16ನೇ ವರ್ಷದಲ್ಲೇ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದ್ದರು. ಸರ್ವಾಂಗೀಣ ಕಲಾವಿದರಾಗಿ, ಶ್ರೇಷ್ಠ ಭಾಗವತರಾಗಿ ಗುರುತಿಸಿದ್ದಾರೆ. ಗುಂಡುಬಾಳ, ಇಡಗುಂಜಿ, ಅಮೃತೇಶ್ವರಿ, ಕಮಲಶಿಲೆ, ಸಾಲಿಗ್ರಾಮ, ಬಚ್ಚಗಾರು, ಪಂಚಲಿಂಗ ಮೇಳಗಳಲ್ಲಿ ಐದು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ.
ಮಾಂಬಾಡಿ ನಾರಾಯಣ ಭಾಗವತರ ಮಗನಾದ ಮಾಂಬಾಡಿ ಸುಬ್ರಹ್ಮಣ್ಯ ಭಾಗವತರು ಹಿಮ್ಮೇಳ ವಾದಕರಾಗಿ ಹಾಗೂ ಯಕ್ಷಗಾನ ಗುರುಗಳಾಗಿ ಗುರುಗಳಾಗಿ ಗುರುತಿಸಿಕೊಂಡಿದ್ದಾರೆ. ಕಟೀಲು, ಕರ್ನಾಟಕ, ಕದ್ರಿ ಮೇಳಗಳಲ್ಲಿ ತಿರುಗಾಟ ನಡೆಸಿದ್ದಾರೆ. ಇವರ ಅನೇಕ ಶಿಷ್ಯರು ವೃತ್ತಿಪರ ಕಲಾವಿದರಾಗಿ, ಹವ್ಯಾಸಿ ಕಲಾವಿದರಾಗಿದ್ದಾರೆ.
ಸಂಪಾಜೆಯಲ್ಲಿ 1963ರಲ್ಲಿ ಜನಿಸಿದ ಜಬ್ಬಾರ್ ಸಮೊ ತಾಳಮದ್ದಳೆಯ ಅರ್ಥಧಾರಿ. ಅವರ ಮೊದಲ ಗುರು ವಳಕುಂಜ ಕುಮಾರ ಸುಬ್ರಹ್ಮಣ್ಯ ಭಟ್. ಆರಂಭದಲ್ಲಿ ಯಕ್ಷಗಾನ ಪಾತ್ರಗಳನ್ನು ನಿರ್ವಹಿಸಿರುವ ಅವರು 1990ರ ಬಳಿಕ ತಾಳಮದ್ದಳೆಯಲ್ಲಿ ಭಾಗವಹಿಸಲು ಆರಂಭಿಸಿದರು. ವಾಲಿ, ಮಾಗಧ, ಕರ್ಣ, ಅರ್ಜುನ, ಶಲ್ಯ, ಸುಗ್ರೀವ, ಭೀಷ್ಮ, ಕೌರವ, ಶುಂಭ, ರಕ್ತಬೀಜ, ಧರ್ಮಾಂಗದ, ಭರತ, ಶತ್ರುಘ್ನ, ಹನುಮಂತ, ವೀರಮಣಿ, ಈಶ್ವರ, ಬಲರಾಮ, ರುಕ್ಮ, ಭೀಷ್ಮ, ಜಾಂಬವಂತ, ಶತ್ರುಪ್ರಸೂದನ, ಬಲಿ, ಶುಕ್ರಾಚಾರ್ಯ ಪಾತ್ರಗಳ ಮನೋಜ್ಞ ನಿರ್ವಹಣೆ ಅವರಿಗೆ ಖ್ಯಾತಿ ತಂದುಕೊಟ್ಟವು. ಪಾಂಡಿತ್ಯಪೂರ್ಣ ಸಂಭಾಷಣೆ, ಆಕರ್ಷಕ ಪದಪ್ರಯೋಗ ಮತ್ತು ಭಾವಪೂರ್ಣ ನಟನೆಯಿಂದಾಗಿ ಭಾರಿ ಅಭಿಮಾನಿಗಳನ್ನು ಗಳಿಸಿದ್ದಾರೆ.
ಹಿಮ್ಮೇಳ ಕಲಾವಿದ ಕೃಷ್ಣ ಪ್ರಕಾಶ ಉಳಿತ್ತಾಯರು ಅವರ 'ಬಲಿಪ ಮಾರ್ಗ' ಹಾಗೂ 'ಅಗರಿ ಮಾರ್ಗ' ಕೃತಿಗಳ ಹಿರಿಯ ಬಲಿಪ ನಾರಾಯಣ ಭಾಗವತರು ಹಾಗೂ ಕಿರಿಯ ಬಲಿಪ ನಾರಾಯಣ ಭಾಗವತರ ಬದುಕು, ಗಾನ ಮಾರ್ಗಗಳನ್ನು ಅರ್ಥಪೂರ್ಣವಾಗಿ ನಿರೂಪಿಸಿದೆ.
ಅಗರಿ ಮಾರ್ಗ ಕೃತಿಯು ಅಗರಿ ಮಾರ್ಗ’ ಕೃತಿಯು ಅಗರಿ ಶ್ರೀನಿವಾಸ ಭಾಗವತರ ಬದುಕು, ಹಾಡುವ ಕ್ರಮ, ರಚನೆ, ಸಾಹಿತ್ಯ ವೈಶಿಷ್ಟ್ಯತೆಯನ್ನು ವಿವರಿಸುತ್ತದೆ.
ಜಾನಪದ ವಿದ್ವಾಂಸರಾದ ಕೆ.ಚಿನ್ನಪ್ಪ ಗೌಡ, ಪ್ರೊ.ಪಾದೆಕಲ್ಲು ವಿಷ್ಣುಭಟ್, ಮುರಲೀ ಕಡೇಕಾರ್ ಹಾಗೂ ಕೇಂದ್ರದ ನಿರ್ದೆಶಕರಾದ ಧನಂಜಯ ಕುಂಬ್ಳೆ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಈ ಕಲಾವಿದರನ್ನು ಆಯ್ಕೆ ಮಾಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿಎಲ್.ಧರ್ಮ ಅಧ್ಯಕ್ಷತೆಯಲ್ಲಿ ಮಾರ್ಚ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಗಣೇಶ್ ಸಂಜೀವ್ ಹಾಗೂ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೆಶಕ ಧನಂಜಯ ಕುಂಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.