ADVERTISEMENT

ಯಕ್ಷಗಾನಕ್ಕೆ ಬೈಪಡಿತ್ತಾಯ ದಂಪತಿ ಕೊಡುಗೆ ಚಿರಸ್ಮರಣೀಯ: ಕುಡುಪು ನರಸಿಂಹ ತಂತ್ರಿ

ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್‌ಗೆ ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2023, 15:47 IST
Last Updated 19 ನವೆಂಬರ್ 2023, 15:47 IST
ಡಿಜಿ ಯಕ್ಷಗಾನ ಫೌಂಡೇಶನ್‌ ಇಲ್ಲಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಯೋಜಿಸಿದ್ದ 3ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಕಾರ್ಯಕ್ರಮದಲ್ಲಿ ಹಿರಿಯ ಮದ್ದಳೆಗಾರ ಮಿಜಾರು ಮೋಹನ್‌ ಶೆಟ್ಟಿಗಾರ್‌ ಅವರಿಗೆ ಶ್ರೀಹರಿಲೀಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು– ಪ್ರಜಾವಾಣಿ ಚಿತ್ರ
ಡಿಜಿ ಯಕ್ಷಗಾನ ಫೌಂಡೇಶನ್‌ ಇಲ್ಲಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಯೋಜಿಸಿದ್ದ 3ನೇ ವರ್ಷದ ಶ್ರೀಹರಿಲೀಲಾ ಯಕ್ಷನಾದ ಕಾರ್ಯಕ್ರಮದಲ್ಲಿ ಹಿರಿಯ ಮದ್ದಳೆಗಾರ ಮಿಜಾರು ಮೋಹನ್‌ ಶೆಟ್ಟಿಗಾರ್‌ ಅವರಿಗೆ ಶ್ರೀಹರಿಲೀಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು– ಪ್ರಜಾವಾಣಿ ಚಿತ್ರ   

ಮಂಗಳೂರು: ‘ಯಕ್ಷಗಾನ ಕ್ಷೇತ್ರದಲ್ಲಿ ಅಪೂರ್ವ ಸೇವೆ ಸಲ್ಲಿಸುತ್ತಿರುವ ಹರಿನಾರಾಯಣ, ಲೀಲಾವತಿ ಬೈಪಾಡಿತ್ತಾಯ ದಂಪತಿ ಅದೆಷ್ಟೋ ಶಿಷ್ಯರನ್ನು ರೂಪಿಸಿದ್ದಾರೆ. ಅವರಿಂದ ವಿದ್ಯೆ ಕಲಿತವರು ಪ್ರಸಿದ್ಧಿ ಪಡೆಯುತ್ತಿದ್ದಾರೆ’ ಎಂದು ಕುಡುಪು ನರಸಿಂಹ ತಂತ್ರಿ ಹೇಳಿದರು.

ಡಿ.ಜಿ ಯಕ್ಷಗಾನ ಫೌಂಡೇಶನ್‌, ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಸಮಿತಿ ವತಿಯಿಂದ ಇಲ್ಲಿನ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಆಯೋಜಿಸಿದ್ದ ‘ಶ್ರೀಹರಿಲೀಲಾ’ ಯಕ್ಷನಾದ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಉಡುಪಿ ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೇಕಾರ್‌ ಮಾತನಾಡಿ, ಯಕ್ಷಗಾನ ಚರಿತ್ರೆಯಲ್ಲಿ ಬೈಪಾಡಿತ್ತಾಯ ದಂಪತಿ ಕೊಡುಗೆ ಅಪಾರವಾದುದು. ಅವರು ಕಲಾವಿದರನ್ನು ಕುಣಿಸಿದ್ದು ಮಾತ್ರವಲ್ಲ, ಹಿಮ್ಮೇಳ ಕಲಾವಿದರನ್ನು ಸೃಷ್ಟಿಸಿದ್ದಾರೆ. ಈ  ದಂಪತಿ ವೃತ್ತಿ ಕಲಾವಿದರಾಗಿ ಹಲವು ವರ್ಷಗಳಿಂದ ನಿರಂತರವಾಗಿ ರಾತ್ರಿಯಿಡೀ ನಡೆಯುವ ಆಟಗಳಲ್ಲಿ ಭಾಗವತಿಕೆ ನಡೆಸುತ್ತಾ, ಕಲಾಸೇವೆ ಮಾಡುತ್ತಿದ್ದಾರೆ’ ಎಂದರು.

ADVERTISEMENT

ಉದ್ಯಮಿ ಹರಿಕೃಷ್ಣ ಪುನರೂರು ಮಾತನಾಡಿ, ‘ಬೈಪಾಡಿತ್ತಾಯ ದಂಪತಿಗೆ ಕೇಂದ್ರ ಸರ್ಕಾರ ಪ್ರಶಸ್ತಿ ನೀಡಿ ಗುರುತಿಸಬೇಕು’ ಎಂದು ಆಗ್ರಹಿಸಿದರು.

ಮದ್ದಳೆಗಾರ ಮಿಜಾರು ಮೋಹನ ಶೆಟ್ಟಿಗಾರ್‌ ಅವರಿಗೆ ‍ಶ್ರೀಹರಿಲೀಲಾ ಯಕ್ಷನಾದ ಪ್ರಶಸ್ತಿ ಪ್ರದಾನ ಮಾಡಲಾಯಿತು. ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ, ಕಲಾವಿದ ಎಂ.ಎಲ್‌. ಸಾಮಗ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ಪ್ರದಾನ ಸಮಿತಿ ಕೋಶಾಧಿಕಾರಿ ಅವಿನಾಶ್‌ ಬೈಪಾಡಿತ್ತಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಿಮ್ಮೇಳ ಕಲಾವಿದ ಚಂದ್ರಶೇಖರ್‌ ಭಟ್‌ ಕೊಂಕಣಾಜೆ ಅಭಿನಂದನಾ ಭಾಷಣ ಮಾಡಿದರು. ಆನಂದ ಗುಡಿಗಾರ್‌ ಪ್ರಶಸ್ತಿಪತ್ರ ವಾಚಿಸಿದರು.

ಪಂಚಮೇಳಗಳ ಯಜಮಾನ ಪಳ್ಳಿ ಕಿಶನ್‌ ಹೆಗ್ಡೆ, ಹರಿನಾರಾಯಣ ಬೈಪಾಡಿತ್ತಾಯ, ಲೀಲಾವತಿ ಬೈಪಾಡಿತ್ತಾಯ ಇದ್ದರು. ಜಿಲ್ಲೆಯ ಪ್ರಸಿದ್ಧ ಯಕ್ಷಗಾನ ಕಲಾವಿದರು, ಬೈಪಾಡಿತ್ತಾಯ ಶಿಷ್ಯರು ಯಕ್ಷನಾದೋತ್ಸವ, ಅಬ್ಬರ ತಾಳ ನಾದೋತ್ಸವ, ತಾಳಮದ್ದಳೆ ಪ್ರಸ್ತುತಪಡಿಸಿದರು. ಸಾಯಿಸುಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.