
ಮಂಗಳೂರು: ಭಯೋತ್ಪಾದನಾ ಕೃತ್ಯಕ್ಕೆ ಸಂಚು ರೂಪಿಸಿದ ಪ್ರಕರಣದ ಆರೋಪಿ, ನಿಷೇಧಿತ ಇಂಡಿಯನ್ ಮುಜಾಹೀದ್ದೀನ್ ಸಂಘಟನೆಯ ಸದಸ್ಯ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮಗದುಮ್ ಕಾಲೊನಿಯ ಯಾಸೀನ್ ಭಟ್ಕಳ ಇಲ್ಲಿನ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಗುರುವಾರ ವಿಡಿಯೊ ಕಾನ್ಫೆರೆನ್ಸ್ ಮೂಲಕ ವಿಚಾರಣೆ ಎದುರಿಸಿದ್ದಾನೆ. ಮುಂದಿನ ವಿಚಾರಣೆ ಆ.20ರಂದು ನಿಗದಿಯಾಗಿದೆ.
ದೇಶದ ವಿವಿಧ ಕಡೆಗಳಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗಲು ಉಳ್ಳಾಲ ಠಾಣೆ ವ್ಯಾಪ್ತಿಯ ಮುಕ್ಕಚ್ಚೇರಿ ಮತ್ತು ಚೆಂಬುಗುಡ್ಡೆ ಎಂಬಲ್ಲಿ ಸಂಚು ರೂಪಿಸಿದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಅಪರಾಧ ಪತ್ತೆ ದಳದ (ಡಿಸಿಐಬಿ) ಅಧಿಕಾರಿಗಳು ಮತ್ತು ಸಿಬ್ಬಂದಿ ಯಾಸೀರ್ ಭಟ್ಕಳನನ್ನು 2008ರ ಅ.4ರಂದು ಬಂಧಿಸಿದ್ದರು. ಸ್ಪೋಟಕಗಳನ್ನು ಹಾಗೂ ಸ್ಪೋಟಕ ತಯಾರಿಸುವ ಸಾಮಗ್ರಿಗಳನ್ನು ಆತನಿಂದ ವಶಕ್ಕೆ ಪಡೆದಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ನಿಷೇಧಿತ ಇಂಡಿಯನ್ ಮುಜಾಹೀದ್ದೀನ್ ಸಂಘಟನೆಯ ಇತರ 7 ಮಂದಿ ಸದಸ್ಯರನ್ನು ಈ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಇನ್ನುಳಿದ 6 ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದರು.
ಸಯ್ಯದ್ ಮೊಹಮ್ಮದ್ ನೌಶಾದ್, ಅಹಮ್ಮದ್ ಬಾವ ಅಬೂಬಕ್ಕರ್ ಫಕೀರ್ ಅಹಮ್ಮದ್ ಅಲಿಯಾಸ್ ಫಕೀರ್ ಎಂಬವರಿಗೆ ಈ ಪ್ರಕರಣದಲ್ಲಿ ಈಗಾಗಲೇ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಆರೋಪಿಗಳಾದ ಮೊಹಮ್ಮದ್ ಆಲಿ, ಜಾವೇದ್ ಆಲಿ, ಮೊಹಮ್ಮದ್ ರಫೀಕ್ ಮತ್ತು ಶಬ್ಬೀರ್ ಭಟ್ಕಳ್ ಎಂಬವರನ್ನು ನ್ಯಾಯಾಲಯವು 2017ರ ಏ. 12ರಂದು ಖುಲಾಸೆಗೊಳಿಸಿದೆ. ಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗ ಯಾಸೀನ್ ಭಟ್ಕಳ ತಲೆಮರೆಸಿಕೊಂಡಿದ್ದ. ಹಾಗಾಗಿ ಆತನ ವಿಚಾರಣೆ ಬಾಕಿ ಇತ್ತು. ಬಳಿಕ ಮತ್ತೆ ಬಂಧನಕ್ಕೊಳಗಾದ ಆತ ಹೈದರಾಬಾದ್‌ನಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ, ದೆಹಲಿಯ ತಿಹಾರ್ ಜೈಲಿನಲ್ಲಿದ್ದ. ನ್ಯಾಯಾಲಯದಲ್ಲಿ ಹಲವಾರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆದಿರಲಿಲ್ಲ. ಈಗ ಈ ಪ್ರಕರಣದ ವಿಚಾರಣೆ ಪುನಾರಂಭಗೊಂಡಿದೆ.
ಆರೋಪಿ ಯಾಸಿನ್ ಭಟ್ಕಳ ವಿಚಾರಣೆ ಕುರಿತಾಗಿ ದೆಹಲಿಯ ತಿಹಾರ್ ಕೇಂದ್ರ ಕಾರಾಗೃಹದ ಅಧಿಕಾರಿಗಳೊಂದಿಗೆ ಉಳ್ಳಾಲ ಠಾಣಾಧಿಕಾರಿ ಮತ್ತು ಸಿಬ್ಬಂದಿ ಸಮನ್ವಯ ಸಾಧಿಸಿದ್ದರು.
ಉಳ್ಳಾಲ ಠಾಣೆ ವ್ಯಾಪ್ತಿಯ ಚೆಂಬುಗುಡ್ಡೆಯಲ್ಲಿ 2008ರ ಅ.4ರಂದು ಬಂಧನ ವಿಚಾರಣೆ ವೇಳೆ ತಲೆಮರೆಸಿಕೊಂಡಿದ್ದ ಯಾಸೀನ್ ಭಟ್ಕಳ್ ಪ್ರಕರಣದಲ್ಲಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ, ನಾಲ್ವರು ಖುಲಾಸೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.