ADVERTISEMENT

ಆನ್‌ಲೈನ್‌ ಮೂಲಕ ತರಿಸಿದ್ದ ಖಾದ್ಯ ಸೇವನೆ: ಯುವತಿ ಸಾವು

​ಪ್ರಜಾವಾಣಿ ವಾರ್ತೆ
Published 7 ಜನವರಿ 2023, 20:58 IST
Last Updated 7 ಜನವರಿ 2023, 20:58 IST
ಅಂಜುಶ್ರೀ ಪಾರ್ವತಿ
ಅಂಜುಶ್ರೀ ಪಾರ್ವತಿ   

ಕಾಸರಗೋಡು: ಹೋಟೆಲ್‌ನಿಂದ ಆನ್‌ಲೈನ್‌ ಮೂಲಕ ತರಿಸಿದ್ದ 'ಕುಳಿಮಂದಿ’ (ಕೋಳಿ ಮಾಂಸದಿಂದ ತಯಾರಿಸಲಾದ ಖಾದ್ಯ) ಸೇವಿಸಿ, ಅಸ್ವಸ್ಥಗೊಂಡಿದ್ದ 20 ವರ್ಷದ ಯುವತಿ ಮೃತಪಟ್ಟಿದ್ದಾರೆ.

ಜಿಲ್ಲೆಯ ಪೆರುಂಬಳ ಬೇನೂರಿನ ದಿ. ಕುಮಾರನ್- ಅಂಬಿಕಾ ದಂಪತಿಯ ಪುತ್ರಿ ಅಂಜುಶ್ರೀ ಪಾರ್ವತಿ ಮೃತರು. ಇವರು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜಿನ ಬಿ.ಕಾಂ ವಿದ್ಯಾರ್ಥಿನಿ.

ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ತನಿಖೆಗೆ ಆದೇಶಿಸಿದ್ದು, ಪೊಲೀಸರು ಹೋಟೆಲ್ ಮಾಲೀಕ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ADVERTISEMENT

ಅಡ್ಕತ್ತಬೈಲಿನ ಅಲ್ ರೊಮಾನ್ಸಿಯಾ ಎಂಬ ಹೆಸರಿನ ಹೋಟೆಲ್‌ನಿಂದ ಜ.1ರಂದು ಆನ್‌ಲೈನ್ ಮೂಲಕ ‘ಕುಳಿಮಂದಿ’ ಖಾದ್ಯವನ್ನು ಅಂಜುಶ್ರೀ ತರಿಸಿದ್ದರು. ಅದನ್ನು ಸೇವಿಸಿದ ನಂತರ ಅಸ್ವಸ್ಥಗೊಂಡ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.

ತನಿಖೆಗೆ ಆದೇಶ: ಘಟನೆಗೆ ಸಂಬಂಧಿಸಿದಂತೆ ತುರ್ತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆಹಾರ ಸುರಕ್ಷೆ ಇಲಾಖೆಯ ಆಯುಕ್ತರಿಗೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿಗೆ ಕೇರಳ ಆರೋಗ್ಯ ಸಚಿವೆ ಸೂಚಿಸಿದ್ದಾರೆ. ಹೋಟೆಲ್‌ ಪರವಾನಗಿ ರದ್ದು ಮಾಡುವಂತೆಯೂ ಆದೇಶ ನೀಡಿದ್ದಾರೆ.

ಹೋಟೆಲ್‌ಗೆ ಬೀಗ: ಹೋಟೆಲ್‌ಗೆ ಶನಿವಾರ ದಾಳಿ ನಡೆಸಿದ ಆರೋಗ್ಯ ಇಲಾಖೆ ಸಿಬ್ಬಂದಿ ತಪಾಸಣೆ ನಡೆಸಿ, ಬಾಗಿಲು ಮುಚ್ಚಿಸಿದ್ದಾರೆ. ಮೇಲ್ಪರಂಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

6 ದಿನಗಳ ಅಂತರದಲ್ಲಿ 2ನೇ ಸಾವು

ಕೇರಳದಲ್ಲಿ 6 ದಿನಗಳ ಅವಧಿಯಲ್ಲಿ ವಿಷಾಹಾರ ಸೇವಿಸಿ ಮೃತಪಟ್ಟ 2ನೇ ಪ್ರಕರಣ ಇದಾಗಿದೆ. ಕೊಟ್ಟಾಯಂ ಮೆಡಿಕಲ್ ಕಾಲೇಜಿನ ನರ್ಸಿಂಗ್ ಆಫೀಸರ್ ಆಗಿದ್ದ ರಶ್ಮಿ ರಾಜ್ ಎಂಬುವರು 6 ದಿನಗಳ ಹಿಂದೆ ವಿಷಾಂಶ ಬೆರೆತ ಆಹಾರ ಸೇವಿಸಿ ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.