ನೆಲ್ಯಾಡಿ(ಉಪ್ಪಿನಂಗಡಿ): ಕಡಬ ತಾಲ್ಲೂಕಿನ ಇಚ್ಲಂಪಾಡಿ ಗ್ರಾಮದ ಸೇತುವೆ ಬಳಿ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.
ಇಚ್ಲಂಪಾಡಿ ಗ್ರಾಮದ ಕೆಡೆಂಬೇಲು ನಿವಾಸಿ ಜಯಾನಂದ ಶೆಟ್ಟಿ ಅವರ ಪುತ್ರ ಚೇತನ್ ಶೆಟ್ಟಿ (21) ಮೃತಪಟ್ಟವರು.
ಚೇತನ್ ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈ ದಿನ ರಜೆಯ ನಿಮಿತ್ತ ಮನೆಯಲ್ಲೇ ಇದ್ದರು. ಬೆಳಿಗ್ಗೆ ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ ಸ್ನೇಹಿತರ ಜೊತೆ ಇಚ್ಲಂಪಾಡಿ ಸೇತುವೆ ಬಳಿ ಇರುವ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆಗೆ ಸ್ನಾನಕ್ಕೆ ಇಳಿದಿದ್ದಾರೆ. ಆಳ ತಿಳಿಯದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಮೃತ ಯುವಕನ ಸಂಬಂಧಿ ದುರ್ಗಾಪ್ರಸಾದ್ ಅವರು ಘಟನೆಯ ಮಾಹಿತಿಯನ್ನು ಕುಟುಂಬಕ್ಕೆ ನೀಡಿದ್ದು, ತಂದೆ ಜಯಾನಂದ ಶೆಟ್ಟಿ ಹಾಗೂ ಬಾವ ಆನಂದ ಶೆಟ್ಟಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳೀಯರಾದ ಜಾಯ್ ಎಂಬುವರು ಚೇತನನನ್ನು ನೀರಿನಿಂದ ಹೊರ ತೆಗೆದಿದ್ದಾರೆ. ಆದರೆ ಆ ವೇಳೆಗೆ ಆತ ಪ್ರಾಣ ಕಳೆದುಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.