ADVERTISEMENT

ದಕ್ಷಿಣ ಕನ್ನಡ | 'ಸಬಲೀಕರಣ: ಬಿಜೆಪಿ, ಕಾಂಗ್ರೆಸ್ ವಿಫಲ'

ಡಿವೈಎಫ್‌ಐ ಜಿಲ್ಲಾ ಸಮಿತಿ: 3 ದಿನಗಳ ಯುವಜನ ಜಾಥಾ ಸಮಾರೋಪದಲ್ಲಿ ಕೇರಳ ಶಾಸಕ ವಿಜಿನ್

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:31 IST
Last Updated 10 ಸೆಪ್ಟೆಂಬರ್ 2025, 7:31 IST
ಡಿವೈಎಫ್‌ಐ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ 3 ದಿನಗಳ ಯುವಜನ ಜಾಥಾದ ಸಮಾರೋಪ ನಡೆಯಿತು
ಡಿವೈಎಫ್‌ಐ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ 3 ದಿನಗಳ ಯುವಜನ ಜಾಥಾದ ಸಮಾರೋಪ ನಡೆಯಿತು   

ಮಂಗಳೂರು: ‘ಯುವಜನ ಸಬಲೀಕರಣದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದು ವಾಗ್ದಾನ ನೀಡಿದ್ದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರ, 2014ರಿಂದ ಇಲ್ಲಿಯವರೆಗೆ ಅಧಿಕಾರದಲ್ಲಿದ್ದರೂ ಯುವಜನರಿಗೆ ವಂಚನೆ ಎಸಗಿದೆ’ ಎಂದು ಕೇರಳ ಶಾಸಕ ಎಂ. ವಿಜಿನ್ ವಾಗ್ದಾಳಿ ನಡೆಸಿದರು.

ಅವರು ಮಂಗಳವಾರ ‘ಯುವಜನರ ನಡಿಗೆ ಉದ್ಯೋಗದ ಕಡೆಗೆ’, ‘ತುಳುನಾಡ್‌ ಅಭಿವೃದ್ಧಿಡ್ ತುಳುವಪ್ಪೆ ಜೋಕ್ಲೆಗ್ ಮಲ್ಲಪಾಲ್’ ಘೋಷಣೆಯೊಂದಿಗೆ ಡಿವೈಎಫ್‌ಐ ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ 3 ದಿನಗಳ ಯುವಜನ ಜಾಥಾದ ಸಮಾರೋಪ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿದರು.

ಆಶ್ವಾಸನೆ ನೀಡಿ ಇಲ್ಲಿನ ಜನರು, ರೈತರಿಂದ ಭೂಮಿ ಪಡೆದು ಎಂಆರ್‌ಪಿಎಲ್, ಎಂಎಸ್ಇಝಡ್, ಒಎನ್‌ಜಿಸಿ, ಬಂದರು ಸೇರಿದಂತೆ ಹಲವು ಸಂಸ್ಥೆಗಳನ್ನು ನಿರ್ಮಿಸಿದರೂ ಇಲ್ಲಿನ ಜನರಿಗೆ, ವಿದ್ಯಾವಂತ ಯುವಕರಿಗೆ ಉದ್ಯೋಗ ಕೊಡಿಸದೆ ಮೋಸ ಮಾಡಿದ್ದಾರೆ. ಸ್ಥಳೀಯರಿಗೆ ಯಾವ ಕಾರಣಕ್ಕಾಗಿ ಉದ್ಯೋಗ ನೀಡಲು ಸಾಧ್ಯವಾಗಿಲ್ಲ ಎಂದು ಬಿಜೆಪಿ, ಕಾಂಗ್ರೆಸ್ ಜನರಿಗೆ ಉತ್ತರ ನೀಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆ ನಿರುದ್ಯೋಗದ ಮೇಕ್ ಇನ್ ಆಗಿದೆ. ಮೇಕ್ ಇನ್ ಇಂಡಿಯಾ ಅಂಬಾನಿ, ಅದಾನಿಗಳಿಗಷ್ಟೇ ಸೀಮಿತವಾಗಿದೆ. ಹಾಗಾಗಿ ದೇಶ ಹಿಂದೆಂದೂ ಕಾಣದ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದೆ. ಅಲ್ಪಸಂಖ್ಯಾತರ ಮೇಲೆ ಮತೀಯ ದಾಳಿ ನಡೆಸಿ ದಮನಿಸಲಾಗುತ್ತಿದೆ. ದೇಶದ ವಿದ್ಯಾರ್ಥಿಗಳು, ಯುವಜನರು, ರೈತರು, ಕಾರ್ಮಿಕರು ಕೇಂದ್ರ ಸರಕಾರದ ನೀತಿಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರೂ ಮೋದಿ, ಅಮಿತ್ ಶಾ ನೇತೃತ್ವದ ಸರ್ಕಾರ ರಾಜಕೀಯ ಲೆಕ್ಕಾಚಾರದಲ್ಲಿ ತೊಡಗಿ ಜನರ ಸಮಸ್ಯೆಗಳನ್ನು ಕಡೆಗಣಿಸುತ್ತಿದೆ ಎಂದು ವರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಗತಿಪರ ಚಿಂತಕ ಪ್ರೊ.ಫಣಿರಾಜ್‌ ಮಾತನಾಡಿ, 2020–25ರ ಆರ್ಥಿಕ ಸಮೀಕ್ಷೆ ಪ್ರಕಾರ ಅತಿ ಹೆಚ್ಚು ತಲಾ ಆದಾಯ ಹೊಂದಿರುವ ಜಿಲ್ಲೆಗಳಲ್ಲಿ ದ.ಕ.ಜಿಲ್ಲೆ ದೇಶದಲ್ಲಿ 8ನೇ ಸ್ಥಾನದಲ್ಲಿದ್ದು, ₹6.60 ಲಕ್ಷ ತಲಾ ಆದಾಯ ಹೊಂದಿದೆ. ಆರ್ಥಿಕತೆಗೆ ಅಷ್ಟೆಲ್ಲಾ ಕೊಡುಗೆ ನೀಡಿದರೂ ಇಲ್ಲಿನ ಜನರಿಗೆ ಅದರ ಲಾಭ ದೊರೆಯುತ್ತಿಲ್ಲ. ಜನರಿಗೆ ಉದ್ಯೋಗ ಇಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು.

ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, ರಾಜ್ಯ ಸರ್ಕಾರ ಯುವಜನರು ಮೌಲ್ಯಯುತ ಜೀವನ ನಡೆಸುವ ನಿಟ್ಟಿನಲ್ಲಿ ಸ್ಪಷ್ಟ ಕಣ್ಣೋಟ, ನೀತಿಗಳನ್ನು ಇಟ್ಟುಕೊಂಡಿಲ್ಲ. ಸ್ಥಳೀಯ ಸಂಸ್ಥೆಗಳಲ್ಲಿ ಸಿ ಮತ್ತು ಡಿ ಗ್ರೂಪ್‌ ಹುದ್ದೆಗಳಲ್ಲಿ ನೂರಕ್ಕೆ ನೂರು ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ವರ್ಷಗಳಿಂದೀಚೆಗೆ ಹೋರಾಟ ನಡೆಯುತ್ತಿದ್ದರೂ ರಾಜ್ಯ ಸರ್ಕಾರ ಅವುಗಳನ್ನು ಮನ್ನಣೆಗೆ ತೆಗೆದುಕೊಳ್ಳುತ್ತಿಲ್ಲ. 1986ರಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಹಲವು ಶಿಫಾರಸುಗಳನ್ನು ನೀಡಿದ್ದು, ಕಾರ್ಯರೂಪಕ್ಕೆ ತರಲು ರಾಜ್ಯದಲ್ಲಿ ಆಳ್ವಿಕೆ ನಡೆಸಿದ ಕಾಂಗ್ರೆಸ್, ಬಿಜೆಪಿ ಸರ್ಕಾರಗಳಿಗೆ ಸಾಧ್ಯವಾಗದೆ ಇರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರ ಖಾಲಿಯಿರುವ ಹುದ್ದೆಗಳನ್ನು ಭರ್ತಿಗೊಳಿಸದಿದ್ದಲ್ಲಿ ಡಿವೈಎಫ್ಐ ರಾಜ್ಯವ್ಯಾಪಿ ಹೋರಾಟ ನಡೆಸುತ್ತದೆ ಎಂದು ಎಚ್ಚರಿಸಿದರು.

ಡಿವೈಎಫ್‌ಐ ಸ್ವಾಗತ ಸಮಿತಿ‌ ಅಧ್ಯಕ್ಷ ಬಿ.ಕೆ. ಇಮ್ತಿಯಾಜ್‌ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಪ್ರೊ.ನರೇಂದ್ರ ನಾಯಕ್, ಕಾರ್ಯಾಧ್ಯಕ್ಷೆ ಮಂಜುಳಾ ನಾಯಕ್‌, ಜಿಲ್ಲಾ ಮುಖಂಡ ಮನೋಜ್ ವಾಮಂಜೂರು, ನಿತಿನ್ ಕುತ್ತಾರ್, ನವೀನ್ ಕೊಂಚಾಡಿ, ತಯ್ಯೂಬ್ ಬೆಂಗ್ರೆ, ರಝಾಕ್‌ ಮುಡಿಪು ಭಾಗವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ನಿರೂಪಿಸಿದರು.

‘ಕೇರಳ ಮಾಡೆಲ್‌ ನೋಡಿ ಕಲಿಯಿರಿ’

ಕೇರಳದಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ಎಡಪಂಥೀಯ ಸರ್ಕಾರ ಜನರಿಗೆ ಹಲವು ಸೌಕರ್ಯಗಳನ್ನು ನೀಡಿದೆ. ಅಲ್ಲಿ ಶಿಕ್ಷಣ ಆರೋಗ್ಯ ಮುಂತಾದ ಮೂಲಸೌಕರ್ಯಗಳು ಉಚಿತವಾಗಿವೆ. ಕೇರಳದ ಜನರು ಮಂಗಳೂರಿಗೆ ಬಂದು ಇಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಅದರ ವೆಚ್ಚವನ್ನು ಸರ್ಕಾರಕ್ಕೆ ನೀಡಿದರೆ ಅವರ ಖಾತೆಗೆ ಬಿಲ್‌ ಮೊತ್ತ ಮರುಭರಿಸುವ ಯೋಜನೆಯನ್ನು ಅಲ್ಲಿ ಜಾರಿಗೊಳಿಸಲಾಗಿದೆ. ಈ ರೀತಿ ಜನಪರ ಕಾಳಜಿಯ ‘ಕೇರಳ ಮಾಡೆಲ್‌ ಸರ್ಕಾರ’ವನ್ನು ಬಿಜೆಪಿ ಹಾಗೂ ಕಾಂಗ್ರೆಸ್‌ ನೋಡಿ ಕಲಿಯಬೇಕು ಎಂದು ಕೇರಳ ಶಾಸಕ ಎಂ. ವಿಜಿನ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.