ADVERTISEMENT

ಅಂದಿನ ಪಾಠ ಅಂದೇ ಅಭ್ಯಾಸ ಯಶಸ್ಸಿನ ಗುಟ್ಟು

ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ಸಿದ್ಧಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಬಸವರಾಜ್

​ಪ್ರಜಾವಾಣಿ ವಾರ್ತೆ
Published 12 ಮೇ 2017, 3:56 IST
Last Updated 12 ಮೇ 2017, 3:56 IST
ದಾವಣಗೆರೆ: ‘ಕಾಲೇಜಿನಿಂದ ಫೋನ್‌ ಬಂದಾಗ ಹೊಲದಲ್ಲಿ ಟೊಮೊಟೊ ಹಣ್ಣು ಕೊಯ್ಯುತ್ತಿದ್ದೆ. ನಿರೀಕ್ಷೆ ಇತ್ತು, ಆದರೆ, ಇಷ್ಟು ಮಾರ್ಕ್ಸ್ ಬರುತ್ತೆ ಅಂದುಕೊಂಡಿರಲಿಲ್ಲ’ ಎಂದು ಮುಗ್ಧವಾಗಿ ಹೇಳಿದ್ದು ದ್ವಿತೀಯ ಪಿಯು ವಿಜ್ಞಾನ ವಿಭಾಗದಲ್ಲಿ ಪ್ರಾಥಮಿಕ ಮಾಹಿತಿ ಪ್ರಕಾರ ಜಿಲ್ಲೆಯಲ್ಲೇ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿ ಪಿ.ಎಚ್‌.ಬಸವರಾಜ್.
 
ನಗರದ ಸಿದ್ಧಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನ ಈ ವಿದ್ಯಾರ್ಥಿ ಗಳಿಸಿದ ಒಟ್ಟು ಅಂಕ 589 (ಶೇ 98.16). ಭೌತವಿಜ್ಞಾನ, ರಸಾಯನ ವಿಜ್ಞಾನ ಹಾಗೂ ಗಣಿತ ವಿಜ್ಞಾನ ವಿಷಯಗಳಲ್ಲಿ ತಲಾ 100 ಅಂಕಗಳು. ಕನ್ನಡ ಹಾಗೂ ಜೀವಶಾಸ್ತ್ರ ವಿಷಯಗಳಲ್ಲಿ ತಲಾ 99. ಕನ್ನಡದಲ್ಲಿ ಮಾತ್ರ 91 ಅಂಕಗಳು ಬಂದಿವೆ.
 
‘ಕೋಚಿಂಗ್‌ ಕ್ಲಾಸ್‌ಗೆ ಹೋಗಿಲ್ಲ. ರಾತ್ರಿ ಇಡೀ ಕುಳಿತು ಎಂದೂ ಓದಿಲ್ಲ. ಅಂದಿನ ಪಾಠ, ಅಂದೇ ಅಭ್ಯಾಸ ಮಾಡಿದೆ’ ಎಂದು ತನ್ನ ಓದಿನ ಗುಟ್ಟು ಬಿಟ್ಟು ಕೊಟ್ಟ ಬಸವರಾಜ್.
 
‘ಸಿದ್ಧಗಂಗಾ ಸಂಸ್ಥೆಯ ಹಾಸ್ಟೆಲ್‌ನಲ್ಲಿ ವಾಸ. ಪ್ರತಿ ದಿವಸ ಪ್ರತಿಯೊಬ್ಬರಿಗೂ ಸಂಜೆ 6ರಿಂದ ರಾತ್ರಿ 9ಗಂಟೆಯವರೆಗೆ ಅಭ್ಯಾಸದ ಅವಧಿ. ಈ ವೇಳೆಯನ್ನು ಸದ್ಬಳಕೆ ಮಾಡಿಕೊಂಡೆ. ಅಲ್ಲದೇ, ಅಧ್ಯಾಪಕರ ಜತೆ ನಡೆಸುತ್ತಿದ್ದ ಸಂವಾದ, ಚರ್ಚೆಗಳ ಮೂಲಕ ಸಂದೇಹಗಳನ್ನು ಪರಿಹರಿಸಿಕೊಳ್ಳುತ್ತಿದ್ದೆ. ಕ್ಲಾಸಿನಲ್ಲಿ 
ಆಗಾಗ್ಗೆ ನಡೆಸುತ್ತಿದ್ದ ಕಿರುಪರೀಕ್ಷೆಗಳಿಂದಾಗಿ ತುಂಬಾ ಸಹಾಯವಾಯಿತು’ ಎಂದರು.
 
‘ಎನ್‌ಸಿಆರ್‌ಟಿ ಪಠ್ಯಪುಸ್ತಕಗಳಷ್ಟೇ ಓದಿ, ಗೈಡ್‌ ಕೈ ಬಿಡಿ’ ಎಂಬುದು ಕಿರಿಯ ವಿದ್ಯಾರ್ಥಿಗಳಿಗೆ ಬಸವರಾಜ್‌ ನೀಡುವ ಸಲಹೆ.
 
‘ಮುಂದೆ ಮೆಡಿಕಲ್‌ ಓದಬೇಕು. ಡಾಕ್ಟರ್ ಆಗಬೇಕು. ಅಪ್ಪ–ಅಮ್ಮನ ಆಸೆಯೂ ಇದೇ, ನನ್ನ ಕನಸೂ ಹೌದು’ ಎನ್ನುತ್ತಾರೆ ಅವರು.
ಬಸವರಾಜ್‌ ಅವರ ಊರು ದಾವಣಗೆರೆಯಿಂದ 9 ಕಿ.ಮೀ. ದೂರದ ಐಗೂರು. ತಂದೆ ಹಾಲೇಶಪ್ಪ, ತಾಯಿ ಹನುಮಕ್ಕ. ಕೃಷಿ ಕುಟುಂಬ. ಅಣ್ಣ ಬಿ.ಕಾಂ ಓದುತ್ತಿದ್ದಾನೆ.
 
‘ಇರುವುದು ಒಂದೇ ಎಕರೆ ಹೊಲ. ಅದರಲ್ಲಿ ಹಾಕಿದ್ದ ಟೊಮೊಟೊ ಬೆಳೆಗೆ ಈಗ ಬೆಲೆ ಇಲ್ಲ. ಕಷ್ಟದಲ್ಲೇ ಸಾಗಿದೆ ಜೀವನ. ಆದರೆ, ಅವನಿಗೆ ಯಾವುದಕ್ಕೂ ತೊಂದರೆ ಆಗದಂತೆ ನೋಡಿಕೊಂಡಿದ್ದೇವೆ’ ಎನ್ನುತ್ತಾರೆ ಬಸವರಾಜ್‌ನ ಚಿಕ್ಕಪ್ಪ ಮಂಜಪ್ಪ.
 
‘ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿ ಈ ಸಾಧನೆ ಮಾಡಿದ್ದು ಖುಷಿಯಾಗುತ್ತಿದೆ. ನಮ್ಮ ಸಂಸ್ಥೆಗೆ ಇದು ಹೆಮ್ಮೆ. ತುಂಬಾ ಮೃದು ಸ್ವಭಾವದ ಹುಡುಗ. ನಮಗೆ ಅವನ ಸಾಧನೆ ಬಗ್ಗೆ ನಿರೀಕ್ಷೆ ಇತ್ತು’ ಎನ್ನುತ್ತಾರೆ ಸಿದ್ಧಗಂಗಾ ಸಂಸ್ಥೆ ಆಡಳಿತಾಧಿಕಾರಿ ಜಸ್ಟಿನ್‌ ಡಿಸೋಜಾ.
 
‘ಬಸವರಾಜ್ 1ರಿಂದ 7 ತರಗತಿ ಓದಿದ್ದು ಅವರೂರಿನ ಕನ್ನಡ ಮಾಧ್ಯಮ ಶಾಲೆಯಲ್ಲಿ; ಪ್ರಥಮ ಪಿಯುಗೆ ನಮ್ಮ ಕಾಲೇಜಿಗೆ ಸೇರಿದ್ದ. ಅಂದಿನಿಂದಲೇ ಓದು ಮತ್ತು ಗುಣದಲ್ಲಿ ಎರಡಲ್ಲೂ ಉತ್ತಮ ವಿದ್ಯಾರ್ಥಿಯಾಗಿದ್ದ’ ಎನ್ನುತ್ತಾರೆ ಪ್ರಾಂಶುಪಾಲ ಪ್ರಸಾದ್‌ ಬಂಗೇರ.
 
ಸಿದ್ಧಗಂಗಾ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಈ ಬಾರಿ ಪರೀಕ್ಷೆಗೆ ಹಾಜರಾದವರು 501 ವಿದ್ಯಾರ್ಥಿಗಳು. ಇದರಲ್ಲಿ ಅತ್ಯಧಿಕ ಶ್ರೇಣಿಯಲ್ಲಿ ಉತ್ತೀರ್ಣರಾದವರು 221. ಕಾಲೇಜಿನ ಒಟ್ಟು ಫಲಿತಾಂಶ ಶೇ 97. ವಿವಿಧ ವಿಷಯಗಳಲ್ಲಿ 100ಕ್ಕೆ 100 ಅಂಕ ಪಡೆದವರ ವಿವರ ಹೀಗಿದೆ. ಕನ್ನಡದಲ್ಲಿ 2, ಭೌತವಿಜ್ಞಾನದಲ್ಲಿ 14, ರಸಾಯನ ವಿಜ್ಞಾನದಲ್ಲಿ 6, ಗಣಿತ ವಿಜ್ಞಾನದಲ್ಲಿ 2, ಜೀವಶಾಸ್ತ್ರದಲ್ಲಿ 6 ಹಾಗೂ ಕಂಪ್ಯೂಟರ್‌ ಸೈನ್ಸ್‌ನಲ್ಲಿ 8 ವಿದ್ಯಾರ್ಥಿಗಳು ಈ ಸಾಧನೆ ಮಾಡಿದ್ದಾರೆ ಅವರು ವಿವರಣೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.