ADVERTISEMENT

ಅಡಿಕೆ ಬೆಳೆಗಾರರಿಗೆ ಮತ್ತೊಂದು ಆಘಾತ

ಅದಿತ್ಯ ಕೆ.ಎ.
Published 13 ಜನವರಿ 2012, 6:45 IST
Last Updated 13 ಜನವರಿ 2012, 6:45 IST

ದಾವಣಗೆರೆ: ಅಡಿಕೆ ಬೆಳೆಗಾರರಿಗೆ ಯಾಕೋ ಸಂಕಷ್ಟಗಳು ತಪ್ಪುತ್ತಿಲ್ಲ. ಕಳೆದ ವರ್ಷ ಅಡಿಕೆ ಬೆಲೆ ಕುಸಿತದಿಂದ ಬೆಳೆಗಾರರು ಕಂಗಾಲಾಗಿದ್ದರು. ಪ್ರಸಕ್ತ ವರ್ಷದ ಹಂಗಾಮು ಮತ್ತೊಂದು ಆತಂಕದ ಸುಳಿಗೆ ದೂಡಿದ್ದು, ಅರ್ಧದಷ್ಟು ಇಳುವರಿ ಕುಂಠಿತವಾಗಿದೆ.

ಅಡಿಕೆ ಬೆಳೆಗೆ ಹಳದಿ ಎಲೆರೋಗ, ಕೀಟಗಳ ಹಾವಳಿ ಜತೆಗೆ ವಿಚಿತ್ರ ರೋಗವೊಂದು ಕಾಣಿಸಿಕೊಂಡಿದ್ದು ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಲೆನಾಡು ಭಾಗದ ಅಡಿಕೆ ತೋಟಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿದ್ದ ಈ ರೋಗಗಳು ಜಿಲ್ಲೆಯ ಅಡಿಕೆ ತೋಟಗಳಿಗೂ ವ್ಯಾಪಿಸಿವೆ. ಡಿಸೆಂಬರ್‌ನಲ್ಲಿ ಆರಂಭವಾದ ಅಡಿಕೆ ಕೊಯ್ಲು ಬಹುತೇಕ ಪೂರ್ಣಗೊಂಡಿದ್ದು, ಇಳುವರಿ ಮಾತ್ರ ಕಡಿಮೆ ಆಗಿದೆ ಎಂಬುದು ಬೆಳೆಗಾರರ ಅಳಲು.

ಜಿಲ್ಲೆಯ ಚನ್ನಗಿರಿ, ಹರಿಹರ, ಹೊನ್ನಾಳಿ ಹಾಗೂ ದಾವಣಗೆರೆ ತಾಲ್ಲೂಕುಗಳಲ್ಲಿ ಹೆಚ್ಚು ಅಡಿಕೆ ಬೆಳೆಯಿದೆ. ಇಲ್ಲಿ 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ತೋಟಗಳು ವ್ಯಾಪಿಸಿವೆ. ನಾಲ್ಕೈದು ಫಸಲು ತೆಗೆದುಕೊಂಡಿರುವ ತೋಟಗಳು ಇಂತಹ ವಿಚಿತ್ರ ರೋಗಕ್ಕೆ ತುತ್ತಾಗಿದ್ದು, ಅಲ್ಲಲ್ಲಿ ಅಡಿಕೆ ಮರಗಳು ಸೊರಗಿ ನಿಂತಿರುವ ದೃಶ್ಯ ಸಾಮಾನ್ಯವಾಗಿದೆ.

ಫಸಲು ಚೆನ್ನಾಗಿಯೇ ಇತ್ತು. ಕೊಯ್ಲು ಸಂದರ್ಭದಲ್ಲಿ ವಿಚಿತ್ರ ರೋಗ ತಗುಲಿರುವುದು ಅರಿವಿಗೆ ಬಂದಿದೆ. ಇನ್ನು ಡಿಸೆಂಬರ್‌ನಲ್ಲಿ ಅಡಿಕೆ ಗೊನೆಗಳು ಕೆಳಗೆ ಬಿದ್ದು, ಕಳ್ಳರ ಪಾಲಾದವು ಎಂಬುದು ಬೆಳೆಗಾರರ ಅಳಲು.

`ಕಾರ್ಮಿಕರ ಸಮಸ್ಯೆಯಿಂದ ತೋಟಗಳ ನಿರ್ವಹಣೆ ಕಷ್ಟ. ಮರಗಳಿಗೆ ನೀರೊದಗಿಸುವುದು, ಔಷಧಿ ಸಿಂಪಡಣೆ, ರಸಗೊಬ್ಬರ ಎಂದೆಲ್ಲಾ ಸಾಕಷ್ಟು ಖರ್ಚಾಗುತ್ತದೆ. ಈ ಬಾರಿ ಇಳುವರಿ ಕಡಿಮೆಯಾದ ಪರಿಣಾಮ ಸಹಕಾರಿ ಸಂಸ್ಥೆ ಹಾಗೂ ಬ್ಯಾಂಕ್‌ನಲ್ಲಿ ಮಾಡಿದ ಸಾಲ ತೀರಿಸುವುದು ದುಸ್ತರವಾಗಿದೆ.

ಹಲವು ವರ್ಷ ಕಷ್ಟಪಟ್ಟು ಬೆಳೆಸಿದ ಗಿಡಗಳು ಲಾಭ ತಂದುಕೊಡುವ ಸಂದರ್ಭದಲ್ಲಿ ಇಂತಹ ವಿಚಿತ್ರ ರೋಗಕ್ಕೆ ತುತ್ತಾಗುತ್ತಿವೆ~ ಎಂದು ಅಡಿಕೆ ಬೆಳೆಗಾರ ರುದ್ರೇಶ್ `ಪ್ರಜಾವಾಣಿ~ಗೆ ನೋವು ತೋಡಿಕೊಂಡರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಧಾವಿಸಬೇಕು ಎಂದೂ ಮನವಿ ಮಾಡುತ್ತಾರೆ ಅವರು.

`ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಹೆಚ್ಚಾಗಿ ಹಳದಿ ಎಲೆರೋಗ ಕಾಣಿಸಿಕೊಳ್ಳುತ್ತದೆ. ಉಷ್ಣಾಂಶ ಹೆಚ್ಚಳಕ್ಕೆ ಕಳೆದ ವರ್ಷವೂ ಜಿಲ್ಲೆಯ ಎರಡು ಭಾಗಗಳಲ್ಲಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿದ್ದವು. ಹಸಿರೆಲೆ ಗೊಬ್ಬರ ಹಾಕುವಂತೆ ಬೆಳೆಗಾರರಿಗೆ ಮಾಹಿತಿ ನೀಡಲಾಗಿತ್ತು. ಪ್ರಸಕ್ತ ವರ್ಷವೂ ಅದೇ ರೀತಿ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು~ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕದಿರೇಗೌಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.