ADVERTISEMENT

ಅಧಿಕಾರಿಗಳ ದಾಳಿ: ಬಾಲ್ಯ ವಿವಾಹಕ್ಕೆ ತಡೆ

ಕದ್ದುಮುಚ್ಚಿ ಮದುವೆ ಮಾಡಲು ಪೋಷಕರ ಯತ್ನ!

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 8:01 IST
Last Updated 17 ಡಿಸೆಂಬರ್ 2013, 8:01 IST

ದಾವಣಗೆರೆ: ಅಪ್ರಾಪ್ತ ವಯಸ್ಸಿನ ಬಾಲಕಿಯ ವಿವಾಹ ಮಾಡಬೇಡಿ ಎಂದು ತಿಳಿಹೇಳಿ, ಅವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡಿದ್ದರೂ ಸೋಮವಾರ ಮದುವೆ ನಡೆಸಲು ಪೋಷಕರು ಮುಂದಾಗಿದ್ದರು.    ಆದರೆ, ಅಧಿಕಾರಿಗಳು ದಾಳಿ ನಡೆಸಿ, ಮದುವೆ ತಡೆದ ಘಟನೆ ದೊಡ್ಡಪೇಟೆಯ ನಾಮದೇವ ಭಜನಾ ಮಂದಿರದಲ್ಲಿ ನಡೆದಿದೆ.  

ಎಸ್‌ಪಿಎಸ್‌ ನಗರದ 15 ವರ್ಷ ವಯಸ್ಸಿನ ಬಾಲಕಿಯನ್ನು ಬೆಂಗಳೂರಿನ ವರನ ಜತೆಗೆ ವಿವಾಹ ನಡೆಸಲು ಪೋಷಕರು ಈ ಹಿಂದೆ ನಿರ್ಧರಿಸಿದ್ದರು. ವ್ಯಕ್ತಿಯೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಡಾನ್‌ಬಾಸ್ಕೋ ಮಕ್ಕಳ ಸಹಾಯವಾಣಿ, ಕ್ರೀಂ ಯೋಜನೆಯ ತಂಡ ಹಾಗೂ ಪೊಲೀಸರು ಪೋಷಕರ ಮನವೊಲಿಸಿ ಬಾಲ್ಯ ವಿವಾಹ ಮಾಡದಂತೆ ಸೂಚಿಸಿದ್ದರು.

ಬಾಲ್ಯ ವಿವಾಹದ ದುಷ್ಪರಿಣಾಮ, ಬಾಲ್ಯ ವಿವಾಹ ನಿಷೇಧ ಕಾಯ್ದೆ– 2006ರ ಬಗ್ಗೆ ಪೋಷಕರಿಗೆ ಅರಿವು ಮೂಡಿಸಲಾಗಿತ್ತು. ಬಾಲ್ಯ ವಿವಾಹಕ್ಕೆ ಕಾರಣರಾದ ₨ 1 ಲಕ್ಷ ದಂಡ, 2 ವರ್ಷ ಜೈಲು ಶಿಕ್ಷೆ ಇರುವ ಬಗ್ಗೆಯೂ ಮನವರಿಕೆ ಮಾಡಿಕೊಡಲಾಗಿತ್ತು. ಆದರೂ, ಅಧಿಕಾರಿಗಳ ಕಣ್ತಪ್ಪಿಸಿ ಮದುವೆ ಮಾಡಲು ಪೋಷಕರು ಮುಂದಾಗಿದ್ದರು. ಮತ್ತೆ ಅಧಿಕಾರಿಗಳು ಕಲ್ಯಾಣ ಮಂಟಪಕ್ಕೆ ತೆರಳಿ ಮದುವೆ ತಡೆಯಲು ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.