ADVERTISEMENT

ಅಭಿಮಾನದ ಹೊಳೆಯಲ್ಲಿ ಮಿಂದೆದ್ದ ಶಾಮನೂರು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2012, 4:45 IST
Last Updated 19 ನವೆಂಬರ್ 2012, 4:45 IST

ದಾವಣಗೆರೆ (ಹಾನಗಲ್ ಕುಮಾರಸ್ವಾಮಿ ವೇದಿಕೆ): ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಶಾಸಕ, ಕೆಪಿಸಿಸಿ ಖಜಾಂಚಿ ಶಾಮನೂರು ಶಿವಶಂಕರಪ್ಪ ಅವರಿಗೆ ಭಾನುವಾರ ಅಭಿಮಾನದ ಮಹಾಪೂರವೇ ಹರಿದುಬಂದಿತು.

ಇಲ್ಲಿನ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ ಬೃಹತ್ ವೇದಿಕೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಶಿವಶಂಕರಪ್ಪಗೆ ನಾಗರಿಕ ಸನ್ಮಾನ ನೀಡಿ ಗೌರವಿಸಲಾಯಿತು. ರೇಷ್ಮೆ ಶಾಲು, ಮೈಸೂರು ಪೇಟ, ಹೂಮಾಲೆ ಹಾಕಿ, ಬೆಳ್ಳಿಯ ಬಸವಣ್ಣನ ಮೂರ್ತಿ ನೀಡಲಾಯಿತು. ಅಭಿಮಾನಿಗಳು, ಬೆಂಬಲಿಗರು ಹಾಗೂ ಎಲ್ಲ ಸಮಾಜದವರು ಸನ್ಮಾನಿಸಿ ಅಭಿಮಾನ ತೋರಿದರು.

ಧರ್ಮಗುರು ಮೌಲಾನಾ ಇಬ್ರಾಹಿಂ ಸಖಾಫಿ ಮಾತನಾಡಿ, ಜಗತ್ತಿನಲ್ಲಿ ಮಾನವನಲ್ಲ; ಮಾನವೀಯತೆ ಶಾಶ್ವತ. ಪರಸ್ಪರ ಮಾನವನನ್ನು ಪ್ರೀತಿಸಲಾಗದವನಿಗೆ ದೇವರ ಪ್ರೀತಿ ಪಡೆಯಲು ಸಾಧ್ಯವಿಲ್ಲ ಎಂದರು.
ಮುಖ್ಯ ಅತಿಥಿಯಾಗಿದ್ದ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಶಿವರಾಜ್ ವಿ. ಪಾಟೀಲ್ ಮಾತನಾಡಿ, ಅಜಾತಶತ್ರುವಾದ ಎಸ್ಸೆಸ್‌ಗೆ ಜನರ ಪ್ರೀತಿಯೇ ದೊಡ್ಡ ಆಸ್ತಿ. ಸಮಾಜಕ್ಕೆ ಒಳಿತು ಬಯಸುವ ಅವರು ಹೆಚ್ಚು ಬಾಳಬೇಕು ಎಂದು ಹಾರೈಸಿದರು.

ಅಭಿನಂದನಾ ಭಾಷಣ ಮಾಡಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಗೊ.ರು. ಚನ್ನಬಸಪ್ಪ, ಎಸ್ಸೆಸ್ ಅಪರೂಪದ ವ್ಯಕ್ತಿ. ಅವರ ಲೆಕ್ಕಾಚಾರ ತಪ್ಪುವುದು ಅಪರೂಪ ಎಂದರು.ನೇತೃತ್ವ ವಹಿಸಿದ್ದ ಉಡುಪಿಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಶ್ರೀಪಾದರು, ವೀರಶೈವ, ಬಸವಣ್ಣ ಒಂದು ಜಾತಿಗೆ ಸೀಮಿತವಲ್ಲ. ವೀರಶೈವ ಧರ್ಮ ಹಾಗೂ ಮಧ್ವಾಚಾರ್ಯರ ಚಿಂತನೆಯಲ್ಲಿ ಕಾಯಕವೇ  ಕೈಲಾಸ ಎಂಬ ಸಾಮ್ಯತೆ ಇದೆ ಎಂದರು. ಎಲ್ಲರ ಪ್ರೀತಿಗೆ ಭಾಜನರಾಗಿರುವ ಎಸ್ಸೆಸ್ ದಾನಶೂರರು ಎಂದು ಬಣ್ಣಿಸಿದರು.

ಸಿರಿಗೆರೆ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಕಾಂಗ್ರೆಸ್ಸಿಗರಾದ ಎಸ್ಸೆಸ್ ಸನ್ಮಾನ ಸಮಾರಂಭದಲ್ಲಿ ಬಿಜೆಪಿ, ಇತರ ಪಕ್ಷದವರು ಪಾಲ್ಗೊಂಡಿರುವುದು ಅಚ್ಚರಿ ತಂದಿದೆ. ವೀರಶೈವ ಮಹಾಸಭಾಕ್ಕೆ ಹೊಸ ವ್ಯಾಖ್ಯಾನ ಕೊಟ್ಟಿದೆ. ಬಿಜೆಪಿಯ ನಾಯಕರು ಸಹ ಕಾರ್ಯಕ್ರಮದ ಯಶಸ್ಸಿಗೆ ತಮ್ಮದೇ ಆದ ಕಾಣಿಕೆ ಕೊಟ್ಟಿದ್ದಾರೆ. ಇದು ಒಂದು ಪಕ್ಷ, ಧರ್ಮ, ಜಾತಿಯ ವೇದಿಕೆಯಲ್ಲ. ಎಲ್ಲ ಧರ್ಮದವರೂ ಪಾಲ್ಗೊಂಡಿದ್ದರಿಂದ, ವೀರಶೈವ ಧರ್ಮಕ್ಕೆ ಅಂಟಿಕೊಂಡಿರುವ ಜಾತಿ ಕಳಂಕ ನಿರ್ಣಾಮವಾಗಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಂತೆಯೇ ಮುಂದಿನ ಚುನಾವಣೆಯಲ್ಲಿ, ಎಲ್ಲ ಪಕ್ಷದವರೂ ಸಹ ಒಂದೇ ವೇದಿಕೆಯಲ್ಲಿ ಕುಳಿತು ಚುನಾವಣಾ ಪ್ರಚಾರ ನಡೆಸಲಿ. ಇದು ಇಡೀ ದೇಶಕ್ಕೆ ಮಾದರಿಯಾಗಲಿ. ಚುನಾವಣೆ ರಣರಂಗವಾಗುವ ಬದಲಿಗೆ, ಸುಧಾರಣೆ ತರಲು ರಾಜಕೀಯ ಪಕ್ಷಗಳು ಮುಂದಾಗಲಿ ಎಂದು ಸಲಹೆ ನೀಡಿದರು.

ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಮಾತನಾಡಿ, ಎಸ್ಸೆಸ್ ವ್ಯಕ್ತಿಯಲ್ಲ; ಶಕ್ತಿ. ಇದನ್ನು ಅವರು ಸಾಧಿಸಿ ತೋರಿಸಿದ್ದಾರೆ. ಕೈಕೊಡುವವರು ಹೆಚ್ಚಿರುವ ಸಂದರ್ಭದಲ್ಲಿ ಕೈಗೆ ಕೊಡುವವರು ಆಗಿದ್ದಾರೆ. ಮಾಸ್ ಲೀಡರ್ ಆಗಿ ಜನರನ್ನು ಕರೆದೊಯ್ಯುವ ಶಕ್ತಿ ಅವರಿಗಿದೆ. ಅವರ ಶಕ್ತಿ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.

ಚಿತ್ರನಟ, ಕೇಂದ್ರದ ಮಾಜಿ ಸಚಿವ ಅಂಬರೀಷ್ ಮಾತನಾಡಿ, ಎಸ್ಸೆಸ್ ಎಲ್ಲರ ಮಕ್ಕಳು ಸಹ ಚೆನ್ನಾಗಿರಬೇಕು ಎಂದು ಬಯಸುತ್ತಾರೆ. ಅವರ ಮನೆ ಎಲ್ಲರಿಗೂ ಆಶ್ರಯ ಕೊಡುವ ದೇವಸ್ಥಾನ ಎಂದರು.
ಶಾಮನೂರು ಶಿವಶಂಕರಪ್ಪ ಜನಕಲ್ಯಾಣ ಟ್ರಸ್ಟ್ ವತಿಯಿಂದ ಬಡ ವಿದ್ಯಾರ್ಥಿಗಳಗೆ ವಿದ್ಯಾರ್ಥಿ ವೇತನ ನೀಡಲಾಯಿತು.

ಸಿದ್ದೇಶ್ವರ ಸ್ವಾಮೀಜಿ, ಸಿದ್ದಲಿಂಗೇಶ್ವರ ಸ್ವಾಮೀಜಿ, ಜಯಮೃತ್ಯುಂಜಯ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಸಂಗನಬಸವ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಸಿದ್ದರಾಮ ಶರಣರು ಬೆಲ್ದಾಳ, ಮಹಾಂತ ಸ್ವಾಮೀಜಿ, ಶಿವಯೋಗೀಂದ್ರ ರಾಜಯೋಗೀಂದ್ರ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ಮುರುಘರಾಜೇಂದ್ರ ಸ್ವಾಮೀಜಿ, ಫಾದರ್ ರಾಬರ್ಟ್ ಡಿಮೆಲೊ, ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ, ಪುರುಷೋತ್ತಮಾನಂದಪುರಿ ಸ್ವಾಮೀಜಿ, ರೇಣುಕಾನಂದ ಸ್ವಾಮೀಜಿ, ಬಸವಪ್ರಭು ಕೇತೇಶ್ವರ ಸ್ವಾಮೀಜಿ, ಬಸವ ಮಡಿವಾಳ ಮಾಚಿದೇವ ಸ್ವಾಮೀಜಿ, ಭಾರತಿ ಜ್ಞಾನೇಶ್ವರ ಸ್ವಾಮೀಜಿ, ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಇಮ್ಮಡಿ

ಸಿದ್ದರಾಮೇಶ್ವರ ಸ್ವಾಮೀಜಿ, ಬಸವಾನಂದ ನಾಗಿದೇವ ಸ್ವಾಮೀಜಿ, ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಭೀಮಣ್ಣ ಖಂಡ್ರೆ, ರಾಜ್ಯ ಘಟಕದ ಅಧ್ಯಕ್ಷ ಎನ್. ತಿಪ್ಪಣ್ಣ, ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ, ಸಚಿವರಾದ ಎಸ್.ಎ. ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ, ಸಂಸತ್ ಸದಸ್ಯ ಜಿ.ಎಂ. ಸಿದ್ದೇಶ್ವರ, ವಿಧಾನ ಪರಿಷತ್ ಮುಖ್ಯ ಸಚೇತಕ  ಡಾ.ಎ.ಎಚ್. ಶಿವಯೋಗಿಸ್ವಾಮಿ, ಶಾಸಕರಾದ ಬಿ.ಪಿ. ಹರೀಶ್, ಎಂ. ಬಸವರಾಜ ನಾಯ್ಕ, ಮಾಡಾಳ್ ವಿರೂಪಾಕ್ಷಪ್ಪ, ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಅಶ್ವತ್ಥರೆಡ್ಡಿ, ಜಿಲ್ಲಾ  ಪಂಚಾಯ್ತಿ ಪ್ರಭಾರ ಅಧ್ಯಕ್ಷೆ  ಜಯಲಕ್ಷ್ಮೀ  ಮಹೇಶ್, ಮಾಜಿಶಾಸಕರಾದ ಮಹಿಮ ಜೆ. ಪಟೇಲ್, ಎಚ್. ಆಂಜನೇಯ, ಸಾಧು ಸದ್ದರ್ಮ ವೀರಶೈವ ಸಮಾಜದ ಅಧ್ಯಕ್ಷ ಕೆ.ಆರ್. ಜಯದೇವಪ್ಪ, `ದೂಡಾ~

ಅಧ್ಯಕ್ಷ ಮಲ್ಲಿಕಾರ್ಜುನಪ್ಪ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಜಬ್ಬಾರ್, ಎಂ.ಪಿ. ರವೀಂದ್ರ, ಕೆಪಿಸಿಸಿ ಸದಸ್ಯ ಡಿ. ಬಸವರಾಜ, ಪಾಲಿಕೆ ಸದಸ್ಯ ದಿನೇಶ್ ಕೆ. ಶೆಟ್ಟಿ, ಸನ್ಮಾನ ಸಮಿತಿಯ ಸಿ. ಕೇಶವಮೂರ್ತಿ, ಎಸ್.ಎಚ್. ಪಟೇಲ್, ಎ.ಸಿ. ಜಯಣ್ಣ, ಅಥಣಿ ಎಸ್. ವೀರಣ್ಣ, ಎಂ. ಶಿವಕುಮಾರ್, ದೇವರಮನಿ ಶಿವಕುಮಾರ್ ಪಾಲ್ಗೊಂಡಿದ್ದರು. ಶಿವಶಂಕರಪ್ಪ ಅವರ ಕುಟುಂಬದವರು ಸೇರಿದಂತೆ, 30 ಸಾವಿರಕ್ಕೂ ಹೆಚ್ಚು ಮಂದಿ ಸನ್ಮಾನ ಸಮಾರಂಭಕ್ಕೆ ಸಾಕ್ಷಿಯಾದರು.

ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸ್ವಾಗತಿಸಿದರು. ಸುಬ್ರಹ್ಮಣ್ಯಸ್ವಾಮಿ, ಲತಿಕಾ ದಿನೇಶ್ ಶೆಟ್ಟಿ, ಮುರುಗೇಶ್ ಬಾಬು, ಡಾ.ಶಶಿಕಲಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು.

ದಯವೇ ಎಲ್ಲರ ಮಂತ್ರವಾಗಲಿ: ಎಸ್ಸೆಸ್
ದಾವಣಗೆರೆ:
ಧರ್ಮದ ತತ್ವ ಸಿದ್ಧಾಂತ, ವಚನಗಳನ್ನು ವಿಶ್ವಮಟ್ಟದಲ್ಲಿ ಪ್ರಚಾರಪಡಿಸಲು ಉದ್ದೇಶಿಸಿರುವುದಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ವಸತಿ ನಿಲಯಗಳ ಸ್ಥಾಪನೆ ಮಾಡಲು ಉದ್ದೇಶಿಸಲಾಗಿದೆ. ತಮ್ಮ ಅಧಿಕಾರ ಅವಧಿಯಲ್ಲಿ ದಾವಣಗೆರೆ ಹಾಗೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಹಾಸಭಾದ ಅಧಿವೇಶನ ನಡೆಸಲು ಆಶಿಸಿದ್ದೇನೆ. ಈ ಸನ್ಮಾನ ಸಮಾರಂಭ ನನ್ನ ಕೆಲಸ ಕಾರ್ಯಕ್ಕೆ ಸ್ಫೂರ್ತಿ ನೀಡಿದೆ ಹಾಗೂ ಜವಾಬ್ದಾರಿ ಹೆಚ್ಚಿಸಿದೆ. ದಯವೇ ಧರ್ಮದ ಮೂಲವಯ್ಯ ಎಂಬ ಮಾತುಗಳು ನಮಗೆ ಮಂತ್ರವಾಗಬೇಕು, ದಾರಿದೀಪವಾಗಬೇಕು ಎಂದು ಆಶಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.