ADVERTISEMENT

ಅರಣ್ಯ ಇಲಾಖೆ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2011, 10:45 IST
Last Updated 1 ಅಕ್ಟೋಬರ್ 2011, 10:45 IST

ಜಗಳೂರು:  ನೌಕರರಿಗೆ ವೇತನ ನೀಡದೆ ಸತಾಯಿಸಲಾಗುತ್ತಿದೆ ಎಂದು ಆರೋಪಿಸಿ ಅರಣ್ಯ ಇಲಾಖೆ ದಿನಗೂಲಿ ನೌಕರರು ಪಟ್ಟಣದ ವಲಯ ಅರಣ್ಯಾಧಿಕಾರಿ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ತಾಲ್ಲೂಕಿನಲ್ಲಿ ದಿನಗೂಲಿ ನೌಕರರಿಗೆ ಒಂದು ವರ್ಷದಿಂದ ವೇತನ ನೀಡಿಲ್ಲ. ವಲಯ ಅರಣ್ಯಾಧಿಕಾರಿಗಳು ತಮಗೆ ಬದ್ಧರಾಗಿರುವ ಕೇವಲ 16 ನೌಕರರಿಗೆ ಮಾತ್ರ ಬ್ಯಾಂಕ್ ಮೂಲಕ ವೇತನ ಪಾವತಿಸಲು ಕ್ರಮ ಕೈಗೊಂಡಿದ್ದು, ಉಳಿದ ದಿನಗೂಲಿಗಳಿಗೆ ವೇತನ ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ನೌಕರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ ಮಾತನಾಡಿ, ಆರ್‌ಎಫ್‌ಒ ಕೆಂಪರಾಜ್ ಅವರು ತಾಲ್ಲೂಕಿನಲ್ಲಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರಿದರು.

ಇಂದು ನಡೆದ ವಾಲ್ಮೀಕಿ ಜಯಂತಿ ಪೂರ್ವಸಿದ್ಧತಾ ಸಭೆ ಸೇರಿದಂತೆ ಯಾವುದೇ ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳದೇ ನಿರ್ಲಕ್ಷ್ಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ವಾರದಲ್ಲಿ ಎರಡು ದಿನವೂ ಕಚೇರಿಯಲ್ಲಿ ಇರುವುದಿಲ್ಲ. ಪ್ರತಿದಿನ ಜಿಲ್ಲಾ ಕಚೇರಿಯಲ್ಲಿ ಸಭೆಗೆ ತೆರಳಿದ್ದಾರೆ ಎಂದು ಇಲ್ಲಿನ ಸಿಬ್ಬಂದಿ ಹೇಳುತ್ತಾರೆ. ಜಿಲ್ಲಾ ಹಾಗೂ ರಾಜ್ಯಮಟ್ಟದ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದಾಗ ಮಾತ್ರ ಕೆಂಪರಾಜ್ ಅವರು ಸಮವಸ್ತ್ರ ಧರಿಸಿಕೊಂಡು ಕಚೇರಿಯಲ್ಲಿ ಕುಳಿತಿರುತ್ತಾರೆ. ಅವರನ್ನು ಕೇಳುವವರೇ ಇಲ್ಲವಾಗಿದೆ ಎಂದು ಆರೋಪಿಸಿದರು.

ನೌಕರರ ಸೇವಾ ವಿವರಗಳನ್ನು ಮೇಲಧಿಕಾರಿಗಳಿಗೆ ಸಲ್ಲಿಸದೆ ವಲಯ ಅರಣ್ಯಾಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ದೂರು ಸಲ್ಲಿಸಲಾಗಿದೆ.

ನ್ಯಾಯಯುತವಾಗಿ ವೇತನ ನೀಡುವಂತೆ ಕೇಳಿದರೆ, `ನಿಮ್ಮ ಬಾಲ ಕಟ್ ಮಾಡುತ್ತೇನೆ~ ಎಂದು ಅವರು ಉಡಾಫೆ ಉತ್ತರ ನೀಡುತ್ತಾರೆ ಎಂದು ಅರಣ್ಯ ಇಲಾಖೆಯ ದಿನಗೂಲಿ ನೌಕರರ ಜಿಲ್ಲಾಧ್ಯಕ್ಷ ಕೆ.ವಿ. ಬಸವರಾಜ್ ದೂರಿದರು.

ಪ್ರತಿಭಟನೆಯ ಸಮಯದಲ್ಲಿ ಆರ್‌ಎಫ್‌ಒ ಕೆಂಪರಾಜ್ ಅವರು ಕಚೇರಿಯಲ್ಲಿ ಹಾಜರಿರಲಿಲ್ಲ. ದೇವೇಂದ್ರಪ್ಪ, ಮಾರನಾಯಕ ಇತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.