ADVERTISEMENT

ಅರಣ್ಯ ಹಕ್ಕು ಕಾಯ್ದೆ ವಿಫಲ: ಕಾಗೋಡು.

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2011, 6:00 IST
Last Updated 7 ಮಾರ್ಚ್ 2011, 6:00 IST

ಹೊನ್ನಾಳಿ: ಅರಣ್ಯ ಹಕ್ಕು ಕಾಯ್ದೆ ಕುರಿತು ಜನರಿಗೆ ಅರಿವು ಇಲ್ಲದ ಕಾರಣ ಬಗರ್‌ಹುಕುಂ ಸಾಗುವಳಿದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.ಹೊನ್ನಾಳಿ ದೇವನಾಯ್ಕನಹಳ್ಳಿಯ ಸ್ಫೂರ್ತಿ ಸಂಸ್ಥೆಯಲ್ಲಿ ಭಾನುವಾರ ನಡೆದ ‘ಅರಣ್ಯ ಹಕ್ಕು ಕಾಯ್ದೆ-2008’ ಕುರಿತ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯ್ದೆ ಸಂಪೂರ್ಣ ವಿಫಲವಾಗಿದೆ, ಸರ್ಕಾರ ಮತ್ತು ಉನ್ನತ ಅಧಿಕಾರಿಗಳ ಅಸಡ್ಡೆ ಇದಕ್ಕೆ ಕಾರಣ ಎಂದು ಆರೋಪಿಸಿದ ಅವರು,ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇದರ ಹೊಣೆ ಹೊರಬೇಕು ಎಂದರು.ಪ್ರತಿ ಗ್ರಾಮಕ್ಕೆ ಒಂದು ಅರಣ್ಯ ಸಮಿತಿ ರಚಿಸಬೇಕು. ಆದರೆ, ರಾಜ್ಯದಲ್ಲಿ ಗ್ರಾಮ ಪಂಚಾಯ್ತಿಗೆ ಒಂದರಂತೆ ಸಮಿತಿ ರಚಿಸಲಾಗಿದೆ. ಸಮಿತಿ ಅಧ್ಯಕ್ಷ, ಕಾರ್ಯದರ್ಶಿಗೆ ಕಾಯ್ದೆ ಬಗ್ಗೆ ಮಾಹಿತಿ ನೀಡಬೇಕು ಎಂದು ಅವರು ಹೇಳಿದರು.

ಇಡೀ ರಾಜ್ಯದಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಮಲ್ಲಂದೂರು ಗ್ರಾಮದ 76 ಬಗರ್ ಹುಕುಂ ಸಾಗುವಳಿದಾರರಿಗೆ ಮಾತ್ರ ಹಕ್ಕುಪತ್ರ ನೀಡಲಾಗಿದೆ. ಶಿಕಾರಿಪುರ ತಾಲ್ಲೂಕಿನಲ್ಲಿ 20 ಸಾವಿರ ಸಾಗುವಳಿದಾರರಿದ್ದಾರೆ. ಆದರೆ, ಒಬ್ಬರಿಗೂ ಹಕ್ಕುಪತ್ರ ನೀಡಿಲ್ಲ. ಮುಖ್ಯಮಂತ್ರಿಗಳ ಸ್ವಕ್ಷೇತ್ರದ ಸ್ಥಿತಿಯೇ ಹೀಗಾದರೆ ಉಳಿದ ಕ್ಷೇತ್ರಗಳ ಪರಿಸ್ಥಿತಿ ಊಹಿಸಿಕೊಳ್ಳಬಹುದು ಎಂದರು.  

ರೈತಪರ ಪ್ರತಿಭಟನೆ, ಬಗರ್‌ಹುಕುಂ ಸಾಗುವಳಿದಾರರಿಗೆ ಜಮೀನು ದೊರಕಿಸಲು ಹೋರಾಟ ಮಾಡುತ್ತಲೇ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಈಗ ಅಧಿಕಾರದಲ್ಲಿದ್ದರೂ ಸಾಗುವಳಿದಾರರ ಸಮಸ್ಯೆ ಪರಿಹರಿಸಲು ಮುಂದಾಗುತ್ತಿಲ್ಲ. ಇದು ವಿಪರ್ಯಾಸ ಎಂದು ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ಅರಣ್ಯ ಹಕ್ಕು ಕಾಯ್ದೆ ಉಲ್ಲಂಘನೆ ಬಗ್ಗೆ ಟೀಕೆಗಳು ಕೇಳಿಬಂದ ತಕ್ಷಣ ನಿದ್ರೆಯಿಂದ ಎಚ್ಚೆತ್ತವರಂತೆ ವರ್ತಿಸಿದ ಯಡಿಯೂರಪ್ಪ, ಗಡಿಬಿಡಿಯಿಂದ ಅಧಿಕಾರಿಗಳ ಸಭೆ ನಡೆಸಿ, ಅರ್ಜಿಗಳು ಸರಿಯಿಲ್ಲ ಎಂಬ ತಾಂತ್ರಿಕ ಕಾರಣ ನೀಡಿ ಎಲ್ಲ ಅರ್ಜಿಗಳನ್ನು ಸಾರಾಸಗಟಾಗಿ ವಜಾ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿವರ್ತನಾ ಸಂಸ್ಥೆ ಅಧ್ಯಕ್ಷ ಡಿ. ಶಂಕ್ರಪ್ಪ, ವಕೀಲ ಶಿರಸಿಯ ರವೀಂದ್ರನಾಯ್ಕ ಮಾತನಾಡಿದರು.ಸ್ಫೂರ್ತಿ ಸಂಸ್ಥೆ ನಿರೂಪಣಾ ನಿರ್ದೇಶಕಿ ರೇಣುಕಾ, ಕಾರ್ಯದರ್ಶಿ ರೂಪ್ಲಾನಾಯ್ಕ ಉಪಸ್ಥಿತರಿದ್ದರು.ಧರ್ಮದಾಸ್ ಸ್ವಾಗತಿಸಿದರು. ಎಚ್.ಸಿ. ಕೆಂಚಪ್ಪ ಕಾರ್ಯಕ್ರಮ ನಿರೂಪಿಸಿದರು. ರೇಷ್ಮಾ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.