ADVERTISEMENT

ಅವೈಜ್ಞಾನಿಕ ಚೆಕ್‌ಡ್ಯಾಂ: ರೈತರ ವಿರೋಧ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 10:00 IST
Last Updated 18 ಫೆಬ್ರುವರಿ 2012, 10:00 IST

ಮಲೇಬೆನ್ನೂರು: ಸಮೀಪದ ಕುಂಬಳೂರಿನ 4ನೇ ಉಪನಾಲಾ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಹಳ್ಳಕ್ಕೆ ಸಣ್ಣ ನೀರಾವರಿ ಇಲಾಖೆ ನೂತನವಾಗಿ ನಿರ್ಮಿಸಿದ ಚೆಕ್‌ಡ್ಯಾಂನಲ್ಲಿ  ನೀರು ನಿಂತಿದ್ದು, ಎರಡೂ ಬದುಗಳು ಕುಸಿಯುವ ಭೀತಿ ಎದುರಾಗಿದೆ ಎಂದು ರೈತರು ಶುಕ್ರವಾರ ಆತಂಕ ವ್ಯಕ್ತಪಡಿಸಿದರು.

ಹಳ್ಳದ ಸುತ್ತಮುತ್ತ ಅನುಕೂಲಕರ ನಾಲಾ ವ್ಯವಸ್ಥೆಯ ನೀರಾವರಿ ಪ್ರದೇಶ ಜಮೀನುಗಳ ಮಧ್ಯೆ ಚೆಕ್‌ಡ್ಯಾಂ ನಿರ್ಮಾಣ ಅಗತ್ಯ ಇತ್ತೇ? ನಿರ್ಮಾಣ ಪೂರ್ವ ಸಾಧಕ-ಬಾಧಕಗಳ ಸಮೀಕ್ಷೆ ವರದಿ ತಯಾರು ಮಾಡಿ ರೈತರಿಗೆ ತೋರಿಸಿ ಒಪ್ಪಿಗೆ ಪಡೆದಿಲ್ಲ. 

ಈಗ ಹಿನ್ನೀರು 2 ಬದುವನ್ನು ಸುಮಾರು 500 ಅಡಿ ಸಡಿಲಗೊಳಿಸಿದೆ. ಬದುವಿನ ಭದ್ರತೆಗೆ ಭೂ ಸವಕಳಿ ತಪ್ಪಿಸಲು ರೈತರು 15 ವರ್ಷಗಳಿಂದ ಬೆಳೆಸಿದ್ದ 50 ತೆಂಗು ಹಾಗೂ 75 ತೇಗದ ಮರ ಶೀತಬಾಧೆಗೆ ಒಳಗಾಗಿ ಒಣಗಿದ್ದು ಬೀಳುವ ಹಂತ ತಲುಪಿದೆ. ಸಮಸ್ಯೆ ಕುರಿತು ನಿರ್ಮಾಣದ ಉಸ್ತುವಾರಿ ಹೊತ್ತ ಎಂಜಿನಿಯರ್ ಅವರನ್ನು ಸಂಪರ್ಕಿಸಿದರೆ ರಾಜಕಾರಣಿಗಳು, ಶಾಸಕರ ಒತ್ತಡದಿಂದ ಕೆಲಸ ನಿರ್ವಹಿಸಲಾಗಿದೆ. ನಮ್ಮ ಪಾತ್ರವಿಲ್ಲ ಎಂದು ನುಣುಚಿಕೊಳ್ಳುತ್ತಾರೆ.

ಇಲ್ಲಿನ ಕಾಮಗಾರಿಯನ್ನು ಪಕ್ಷದ ಕಾರ್ಯಕರ್ತರಿಗೆ ಉಪಗುತ್ತಿಗೆ ನೀಡಿ ಮುಖ್ಯ ಗುತ್ತಿಗೆದಾರರು ನೆಮ್ಮದಿಯಿಂದಿದ್ದು, ಅಕ್ಕಪಕ್ಕದ ಜಮೀನಿನ ರೈತರ ನೆಮ್ಮದಿ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.

ಮುಳುಗಿದ ಪೈಪ್
ಇನ್ನು ಮೇಲ್ಭಾಗದಲ್ಲಿ 6 ಪೈಪ್‌ನ ಸೇತುವೆ ಕರ್ನಾಟಕ ನೀರಾವರಿ ನಿಗಮದಿಂದ ಮಂಜೂರಾಗಿದ್ದು ಸಣ್ಣ ನೀರಾವರಿ ಇಲಾಖೆ ಚೆಕ್‌ಡ್ಯಾಂ ಪೈಪ್‌ಗಳನ್ನು ಹಿನ್ನೀರು ಬೇಸಿಗೆ ಕಾಲದಲ್ಲಿಯೇ ಅರ್ಧ ಮುಳುಗಿಸಿದೆ. ಇನ್ನು ಮಳೆಗಾಲದಲ್ಲಿ ಹೆಚ್ಚು ನೀರು ಸಂಗ್ರಹವಾಗಿ ಪೂರ್ತಿ ಮುಳುಗಿ ಸುಮಾರು 2 ಕಡೆ 500ಮೀಟರ್ ದಂಡೆ ಕುಸಿಯುತ್ತದೆ ಎಂದು ರೈತರಾದ ಉಮೇಶ್, ಬಸವರಾಜು ಇತರರು ಆತಂಕ ವ್ಯಕ್ತಪಡಿಸಿದರು.

ಹಳ್ಳದಲ್ಲಿ ಹೂಳು ತುಂಬಿ ಸರ್ಕಾರದ ಹಣ ವ್ಯರ್ಥವಾಗುತ್ತದೆ. ಇಂತಹ ನೀರಾವರಿ ಪ್ರದೇಶಗದಲ್ಲಿ ನಿರ್ಮಿಸುವ ಚೆಕ್‌ಡ್ಯಾಂಗಳಿಂದ ಅಂತರ್ಜಲ ವೃದ್ಧಿಸುವ ಬದಲು ಇಲಾಖೆಯ ಗುತ್ತಿಗೆದಾರರಿಗೆ ಇನ್ನೂ 1ವರ್ಷ ಕೆಲಸವನ್ನು ಮುಂಚಿತವಾಗಿ ಬುಕಿಂಗ್ ಮಾಡಲಾಗಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಸಣ್ಣ ನೀರಾವರಿ ಇಲಾಖೆ ಕಾಮಗಾರಿಗಳನ್ನು 3ನೇ ತಂಡದಿಂದ ಸಮಗ್ರ ತನಿಖೆ ಮಾಡಿಸಿದರೆ ಇನ್ನೂ ಇತರ ಕಾಮಗಾರಿ ಬಣ್ಣ ಬಯಲಾಗಲಿದೆ.ಇಲ್ಲಿನ ಸಮಸ್ಯೆ ಪರಿಹರಿಸದಿದ್ದರೆ ಇಲಾಖೆ ಹಾಗೂ ಎಂಜಿನಿಯರ್ ವಿರುದ್ಧ ಪರಿಹಾರ ಪಡೆಯಲು ನ್ಯಾಯಾಲಯದ ಮೆಟ್ಟಿಲೇರುವ ಇರಾದೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.