ADVERTISEMENT

ಆಲಿಕಲ್ಲು ಮಳೆ: ಹಾನಿಯಾದ ಭತ್ತದ ಬೆಳೆ

ಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 21 ಮೇ 2018, 6:11 IST
Last Updated 21 ಮೇ 2018, 6:11 IST
ಆಲಿಕಲ್ಲು ಸಹಿತ ಮಳೆಗೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಭೂಮಿಯ ಪಾಲಾಗಿದೆ
ಆಲಿಕಲ್ಲು ಸಹಿತ ಮಳೆಗೆ ಕೊಯ್ಲಿಗೆ ಬಂದಿದ್ದ ಭತ್ತದ ಬೆಳೆ ಭೂಮಿಯ ಪಾಲಾಗಿದೆ   

ಉಚ್ಚಂಗಿದುರ್ಗ: ಈಚೆಗೆ ಸುರಿದ ಆಲಿಕಲ್ಲು ಮಳೆಗೆ ಫಸಲಿಗೆ ಬಂದ ಭತ್ತದ ಬೆಳೆಯು ಸಂಪೂರ್ಣವಾಗಿ ಭೂಮಿಯ ಪಾಲಾಗಿದೆ.

ಭದ್ರಾ ಅಚ್ಚುಕಟ್ಟು ಪ್ರದೇಶಕ್ಕೆ ಸೇರಿದ ಹಿರೇಮೇಗಳಗೆರೆ, ಒಡ್ಡಿನಹಳ್ಳಿ, ಜಂಬುಲಿಂಗನಗಳ್ಳಿ, ಲಕ್ಷ್ಮೀಪುರ, ಸತ್ತೂರು, ಚಿಕ್ಕಮೇಗಳಗೆರೆ, ಸಿಂಗ್ರೀಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ಬೆಳೆದ ಒಂದು ಸಾವಿರಕ್ಕೂ ಅಧಿಕ ಏಕರೆ ಭತ್ತದ ಬೆಳೆ ಆಲಿಕಲ್ಲು ಮಳೆಗೆ ನಾಶವಾಗಿದೆ.

ಭತ್ತದ ಬೆಳೆ ನೆಲಕ್ಕೊರಗಿರುವುದರಿಂದ ಯಂತ್ರಗಳಿಂದ ಕೊಯ್ಲು ಮಾಡಲು ಆಗುತ್ತಿಲ್ಲ. ಗಂಟೆಗೆ ಮುಗಿಯುವ ಕೃಷಿ ಕೆಲಸ ಮೂರು ಗಂಟೆ ಹಿಡಿಯುತ್ತಿದೆ. ಇದರಿಂದ ರೈತರು ದುಪ್ಪಟ್ಟು ಹಣ ಖರ್ಚು ಮಾಡಬೇಕಾಗಿದೆ. ಇನ್ನೊಂದೆಡೆ ಬೆಳೆಗೂ ಯೋಗ್ಯ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

‘ಬೆಳೆಹಾನಿ ಪರಿಹಾರಕ್ಕಾಗಿ ₹200ರಿಂದ ₹300 ಖರ್ಚು ಮಾಡಿ ಅಧಿಕಾರಿಗಳನ್ನು ಕರೆಸಿ ಫೋಟೊಗಳನ್ನು ತೆಗೆಸಿ ಕೊಟ್ಟಿದ್ದೇವೆ. ಮೂರು ವರ್ಷಗಳಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಬೆಳೆ ವಿಮೆ ಮಾಡಿದ್ದರೂ ಪ್ರಯೋಜನವಾಗಿಲ್ಲ. ಪರಿಹಾರ ನೀಡಬೇಕು’ ಎಂದು ರೈತರು ಒತ್ತಾಯಿಸಿದ್ದಾರೆ.

‘ಕಾಲುವೆಯ ಕೊನೆಯ ಭಾಗಕ್ಕೆ ತಡವಾಗಿ ನೀರು ತಲುಪುವುದರಿಂದ ತಡವಾಗಿ ನಾಟಿ ಮಾಡಲಾಗಿತ್ತು. ಬಿಸಿಲ ತಾಪಕ್ಕೆ ಉಷ್ಣಾಂಶ ಹೆಚ್ಚಾಗಿದ್ದು ಬಿರುಗಾಳಿಯ ರಭಸಕ್ಕೆ ಬೆಳೆ ಗದ್ದೆಗೆ ಚಾಪೆ ಹಾಸಿದಂತೆ ಒರಗಿಕೊಂಡಿದೆ. ಸಂಕಷ್ಟದಲ್ಲಿರುವ ರೈತರ ಗೋಳು ಕೇಳಲು ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ’ ಎಂದು ರೈತ ಮೇಗಳಗೆರೆ ಪರಶುರಾಮಪ್ಪ ಆರೋಪಿಸಿದರು.

‘ಗಾಳಿ ಹಾಗೂ ಆಲಿಕಲ್ಲಿನ ರಭಸಕ್ಕೆ ಕಾಳು ಕಟ್ಟಿ ಅರೆ ಒಣಗುತ್ತಿದ್ದ ಭತ್ತದ ಗಟ್ಟಿ ಕಾಳುಗಳು ನೆಲ ಸೇರಿವೆ. ಖರ್ಚು ಮಾಡಿದ ಕೂಲಿ ಹಣವೂ ಕೈಗೆ ಸಿಗುವಂತೆ ಕಾಣುತ್ತಿಲ್ಲ. ಸಾಲದ ಹೊರೆ ತಪ್ಪುತ್ತಿಲ್ಲ’ ಎಂದು ರೈತ ವೀರಭದ್ರಪ್ಪ ಅಳಲು ತೋಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.