ADVERTISEMENT

ಆಶ್ರಯ ಮನೆಗೆ ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2011, 10:10 IST
Last Updated 17 ಜೂನ್ 2011, 10:10 IST

ದಾವಣಗೆರೆ: ಜಿಲ್ಲಾ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ಸ್ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕರ್ತರು ಆಶ್ರಯ ಯೋಜನೆ ಅಡಿ ಮನೆ ನಿರ್ಮಿಸಿಕೊಡುವಂತೆ ಆಗ್ರಹಿಸಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಸಂಘದ ಕಚೇರಿಯಿಂದ ಪ್ರತಿಭಟನೆ ಆರಂಭಿಸಿ, ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.

ದ್ವಿಚಕ್ರ ವಾಹನಗಳ ರಿಪೇರಿ ಮಾಡುವ ಕಾರ್ಮಿಕರು ಆರ್ಥಿಕವಾಗಿ ತೀರಾ ಹಿಂದುಳಿದಿದ್ದು, ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆದ್ದರಿಂದ, ಸರ್ಕಾರ ಕೂಡಲೇ ವಸ್ತುಸ್ಥಿತಿಯನ್ನು ಅರಿತು ಆಶ್ರಯ ಯೋಜನೆ ಅಡಿ ವಸತಿಸೌಲಭ್ಯ ಕಲ್ಪಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ದ್ವಿಚಕ್ರ ವಾಹನ ರಿಪೇರಿ ಮಾಡುವ ಶೇ. 90 ಕಾರ್ಮಿಕರಿಗೆ ಸ್ವಂತ ಮನೆ ಇಲ್ಲ. ಆಧುನಿಕ ಯುಗದಲ್ಲಿ ಹೈಟೆಕ್ ವಾಹನಗಳು ಮಾರುಕಟ್ಟೆಗೆ ಬರುತ್ತಿವೆ. ಇದರಿಂದ ಕಾರ್ಮಿಕರಿಗೆ ಸರಿಯಾದ ಕೆಲಸಗಳಿಲ್ಲದೇ ಜೀವನ ನಿರ್ವಹಣೆ ಕಷ್ಟದಾಯಕವಾಗಿದೆ. ಇದರ ನಡುವೆ ಮನೆ ಬಾಡಿಗೆ, ಮಕ್ಕಳ ಶೈಕ್ಷಣಿಕ ವೆಚ್ಚ ಭರಿಸಲು ಪ್ರತಿದಿನ ಹೋರಾಟ ನಡೆಸಬೇಕಾಗಿದೆ. ಸರ್ಕಾರ ಇದರ ಬಗ್ಗೆ ಗಮನಹರಿಸಿ ಆಶ್ರಯ ಯೋಜನೆ ಅಡಿ ನಿವೇಶನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ದ್ವಿಚಕ್ರ ವಾಹನಗಳ ಮೆಕ್ಯಾನಿಕ್ಸ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್. ನಾಗರಾಜ, ಉಮಾಪತಿ, ಚಂದ್ರಣ್ಣ, ದಾದಾಪೀರ್, ವಾಸು, ಎಸ್.ಎಂ. ವೀರೇಶ, ಪ್ರಕಾಶ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.