ADVERTISEMENT

ಈ ವರ್ಷ ಮಾವು ನಂಬಿದವರ ಪಾಲಿಗೆ ಬೇವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2012, 5:40 IST
Last Updated 16 ಏಪ್ರಿಲ್ 2012, 5:40 IST

ಬಸವಾಪಟ್ಟಣ: ಹಣ್ಣುಗಳ ರಾಜ ಎಂದೇ ಕರೆಯಲಾಗುವ ಮಾವಿನ ಫಸಲು ಈ ವರ್ಷ ತುಂಬಾ ಕಡಿಮೆ ಆಗಿದ್ದು, ಬೆಳೆದ ರೈತನೊಂದಿಗೆ ಇದರ ವ್ಯಾಪಾರಗಳಿಗೂ ಕಹಿಯ ಫಲವೇ ಹೆಚ್ಚಾಗಿ ಕಾಣುತ್ತಿದೆ.

ಏಪ್ರಿಲ್ ತಿಂಗಳು ಅರ್ಧ ಕಳೆಯುತ್ತಾ ಬಂದರೂ ಗಿಡಗಳಲ್ಲಿ ಫಸಲು ಅಪರೂಪವಾಗಿದೆ. ಎಲೆ ಕಾಣದಂತೆ ಕಾಯಿಗಳು ಕಂಗೊಳಿಸುತ್ತಿದ್ದ ಮಾವಿನ ಮರಗಳಲ್ಲಿ ಅಲ್ಲೊಂದು ಇಲ್ಲೊಂದು ಕಾಯಿಗಳು ಇಣುಕುತ್ತಿವೆ. ಪ್ರತಿ ವರ್ಷ ಈ ವೇಳೆಗಾಗಲೇ ಹಲವು ಜಾತಿಯ ಹಣ್ಣುಗಳು ಮಾರುಕಟ್ಟೆಗೆ ಬಂದು ತಿನ್ನುವವರ ಬಾಯಿ ಸಿಹಿ ಮಾಡುತ್ತಿದ್ದವು. ಆದರೆ, ಈ ವರ್ಷ ಈ ಯೋಗ ಇನ್ನೂ ಇಲ್ಲ.

ಈ ಭಾಗದ ಕೆರೆಬಿಳಚಿ, ಹೊಸೂರು, ಸೋಮಲಾಪುರ,ಹೊಸಳ್ಳಿ, ಸೂಳೆಕೆರೆ, ಕಾಶಿಪುರ, ಕಬ್ಬಳ, ಯಲೋದಹಳ್ಳಿ, ಕಂಚುಗಾರನಹಳ್ಳಿ, ನಿಲೋಗಲ್ ಮುಂತಾದ ಹಳ್ಳಿಗಳಲ್ಲಿ ಮಾವಿನಬೆಳೆ ಹೆಚ್ಚಾಗಿದ್ದು, ಫಸಲು ಮಾತ್ರ ಇಲ್ಲವಾಗಿದೆ. ರಸಪೂರಿ, ಬಾದಾಮಿ, ಸಿಂಧೂರ, ಆಫೋಸ್, ತೋತಾಪುರಿ, ನೀಲಂ ಜಾತಿಯ ಮಾವಿನ ಫಸಲು ಇಲ್ಲಿ ಪ್ರತಿ ವರ್ಷ ಹುಲುಸಾಗಿರುತ್ತಿತ್ತು.
 
ಆದರೆ, ಅದನ್ನು ಕೇಳುವುದೇ ಬೇಡ. ರೈತರು ಹೂ ಬಿಟ್ಟ ಮಾವಿನ ಗಿಡಗಳನ್ನು ವ್ಯಾಪಾರಿಗಳಿಗೆ ಹಸಿರು ಕೇಣಿ ನೀಡಿ ಅವರಿಂದ ಮುಂಚಿತವಾಗಿ ಹಣ ಪಡೆಯುತ್ತಿದ್ದೆವು. ಗಿಡಗಳಲ್ಲಿ ಕಾಯಿ ಕಟ್ಟದೇ ಇರುವುದರಿಂದ ವ್ಯಾಪಾರಿಗಳು ಕೇಣಿ ಪಡೆಯಲು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ರೈತರು.

 ಈ ಭಾಗದಲ್ಲಿ ಬೆಳೆಯುವ ಫಸಲನ್ನು ದೂರದ ಮುಂಬೈ, ಪೂನಾ, ಸಾಂಗ್ಲಿ, ಬೆಳಗಾವಿ, ಬೆಂಗಳೂರು ಸೇರಿದಂತೆ ಪ್ರಮುಖ ನರಗಳಿಗೆ ಒಯ್ದು ಮಾರಾಟ ಮಾಡುತ್ತಿದ್ದೆವು. ಆದರೆ, ಈ ವರ್ಷ ನಮಗೆ ಈ ವ್ಯಾಪಾರವೇ ಇಲ್ಲದಂತಾಗಿದೆ. ಈಗಾಗಲೇ ರೈತರಿಗೆ ಲಕ್ಷಾಂತರ ರೂ ಮುಂಗಡ ಹಣ ನೀಡಿ ಗುತ್ತಿಗೆ ಪಡೆದ ಮಾವಿನ ತೋಟಗಳಲ್ಲಿ ಶೇಕಡಾ 60ರಷ್ಟು ಫಸಲು ಇಲ್ಲವಾಗಿದ್ದು, ಅಪಾರ ನಷ್ಟವಾಗಿದೆ ಎನ್ನುತ್ತಾರೆ ಇಲ್ಲಿನ ಹಣ್ಣಿನ ವ್ಯಾಪಾರಿ ಸೈಯದ್ ರಫೀಕ್, ಕಳೆದ ವರ್ಷ ಉಂಟಾದ ಮಳೆಯ ಕೊರತೆ, ಈ ವರ್ಷ ಹೆಚ್ಚಾದ ಬಿಸಿಲಿನಿಂದ ಬೆಳೆ ಕುಂಠಿತವಾಗಿದೆ ಎನ್ನುತ್ತಾರೆ ಕೆರೆಬಿಳಚಿಯ ರೈತ ಅಮೀರ್‌ಜಾನ್.

ಮಾವಿನ ಫಸಲು ಉತ್ತಮವಾಗಿದ್ದರೆ, ಗ್ರಾಹಕರಿಗೂ ಖುಷಿ, ಬೆಳೆದ ರೈತ, ವ್ಯಾಪಾರಿಗಳಿಗೂ ಲಾಭ. ಆದರೆ, ಈ ವರ್ಷ ಅದಾವುದನ್ನೂ ಕಾಣುವಂತಿಲ್ಲ ಎನ್ನುತ್ತಾರೆ ರೈತ ಸಿದ್ದಲಿಂಗಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.