ADVERTISEMENT

ಎಂಎನ್‌ಸಿ ಕಪಿಮುಷ್ಟಿಯಲ್ಲಿ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 6:15 IST
Last Updated 7 ಮಾರ್ಚ್ 2012, 6:15 IST

ಹರಪನಹಳ್ಳಿ: ಸಾರ್ವಜನಿಕ ಉದ್ದೇಶ ಹೆಸರಿನಲ್ಲಿ ಭೂಮಿಯನ್ನು ಸರ್ಕಾರ ಕಬಳಿಸುವ ಮೂಲಕ ಬಹುರಾಷ್ಟ್ರೀಯ ಕಂಪೆನಿಗಳಿಗೆ ಧಾರೆ ಎರೆಯಲು ಮುಂದಾಗಿದೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ಮುಖಂಡ ಡಾ.ಸಿದ್ದನಗೌಡ ಪಾಟೀಲ್ ಆರೋಪಿಸಿದರು.

ಮಂಗಳವಾರ ಅಖಿಲ ಭಾರತ ಕಿಸಾನ್ ಸಭಾ(ಎಐಕೆಎಸ್) ಹಾಗೂ ಪಕ್ಷದ ತಾಲ್ಲೂಕು ಮಂಡಳಿ ಹಮ್ಮಿಕೊಂಡಿದ್ದ ಬಗರ್‌ಹುಕುಂ ಸಾಗುವಳಿದಾರರ ಪ್ರತಿಭಟನಾ ಹಕ್ಕೊತ್ತಾಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಹುರಾಷ್ಟ್ರೀಯ ಕಂಪೆನಿಯ ಬಂಡವಾಳಶಾಹಿಗಳ ಎಂಜಲಿಗೆ ನಾಲಿಗೆ ಚಾಚಿರುವ ರಾಜ್ಯಸರ್ಕಾರ, ಆ ಋಣಭಾರ ತೀರಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 1.20ಲಕ್ಷ ಎಕರೆ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ರೂಪುರೇಷಗಳು ತಯಾರಾಗಿವೆ. ಈ ಪೈಕಿ ಈಗಾಗಲೇ 40 ಸಾವಿರ ಎಕರೆಯಷ್ಟು ಭೂಮಿಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ರಾಜ್ಯದ  12ಲಕ್ಷ ಎಕರೆಗೂ ಅಧಿಕ ವಿಸ್ತೀರ್ಣದ ಸರ್ಕಾರಿ ಭೂಮಿ ಅಕ್ರಮವಾಗಿ ಒತ್ತುವರಿಯಾಗಿದೆ. ಈ ಪೈಕಿ ಭೂರಹಿತ, ಬಡ ಹಾಗೂ ನಿರ್ಗತಿಕ ಕುಟುಂಬಗಳು ಶೇ.20ರಷ್ಟು ಭೂಮಿಯನ್ನು ಜೀವನ ನಿರ್ವಹಣೆಗಾಗಿ ಉಳುಮೆ ಮಾಡಿಕೊಂಡಿರುವುದನ್ನು ಹೊರತುಪಡಿಸಿದರೆ, ಉಳಿದ ಶೇ. 80ರಷ್ಟು ವಿಸ್ತೀರ್ಣದ ಭೂಮಿಯನ್ನು ಆಡಳಿತರೂಢ ಬಿಜೆಪಿ ಸೇರಿದಂತೆ ಕಾಂಗ್ರೆಸ್-ಜೆಡಿಎಸ್ ಪಕ್ಷದ ರಾಜಕಾರಣದ ಮುಖವಾಡ ಧರಿಸಿರುವ `ಭೂಮಾಫಿಯಾ~ ನುಂಗಿಹಾಕಿದೆ. ಈ ಸಂಗತಿಯನ್ನು ಡಾ.ವಿ. ಸುಬ್ರಮಣಿಯನ್ ನೇತೃತ್ವದಲ್ಲಿ ಸರ್ಕಾರವೇ ನೇಮಿಸಿದ್ದ ಸರ್ಕಾರಿ ಜಮೀನು ರಕ್ಷಣೆ ಕಾರ್ಯಪಡೆ ಸಮಿತಿ ಬಹಿರಂಗಪಡಿಸಿದೆ ಎಂದು ದೂರಿದರು.

ಪಕ್ಷದ ಮುಖಂಡರಾದ ಹೊಸಳ್ಳಿ ಮಲ್ಲೇಶ್, ಕೆ.ಎಸ್. ಹಡಗಲಿಮಠ್, ಚಿತ್ರದುರ್ಗದ ರಮೇಶ್, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಗುಡಿಹಳ್ಳಿ ಹಾಲೇಶ್, ಎಚ್.ಎಂ. ಸಂತೋಷ್, ಬಿ.ಎಂ. ತ್ರಿವೇಣಿ, ಮಹಬೂಬ್ ಬಾಷಾ, ಮತ್ತಿಹಳ್ಳಿ ಬಸವರಾಜ್ ಇತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.