ADVERTISEMENT

ಎತ್ತಿನಂತೆ ‘ಬೇಸಾಯ’ ಎಳೆಯಲು ಮುಂದಾದ ರೈತ

ದುಬಾರಿಯಾದ ಬೇಸಾಯ, ಕಳೆ ತೆಗೆಯಲು ಬೈಸಿಕಲ್ ಗಾಲಿ ಸಾಧನ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 6:26 IST
Last Updated 19 ಜೂನ್ 2018, 6:26 IST
ಮಾಯಕೊಂಡದಲ್ಲಿ ರೈತರೊಬ್ಬರು ಬೇಸಾಯದ ಕೊರತೆಗೆ ಬೇಸತ್ತು ಬೈಸಿಕಲ್ ಗಾಲಿ ಬಳಸಿ ಎಡೆ ಹೊಡೆಯುತ್ತಿರುವುದು
ಮಾಯಕೊಂಡದಲ್ಲಿ ರೈತರೊಬ್ಬರು ಬೇಸಾಯದ ಕೊರತೆಗೆ ಬೇಸತ್ತು ಬೈಸಿಕಲ್ ಗಾಲಿ ಬಳಸಿ ಎಡೆ ಹೊಡೆಯುತ್ತಿರುವುದು   

ಮಾಯಕೊಂಡ: ನಾಲ್ಕಾರು ವರ್ಷಗಳಿಂದ ಬೆಂಬಿಡದೇ ಕಾಡುತ್ತಿರುವ ಬರಗಾಲದಿಂದ ರೈತರು ಕಂಗೆಟ್ಟಿದ್ದಾರೆ. ಮೇವಿನ ಅಭಾವದಿಂದ ದನ–ಕರು ಕಸಾಯಿಖಾನೆ ಸೇರಿದವು. ಎತ್ತು ಮಾರಿ ಬರಿಗೈಯಾದ ರೈತ ಹೊಲ ಬಿತ್ತಲು, ಕುಂಟೆ ಹೊಡೆಯಲು ಪರದಾಡುವಂತಾಗಿದೆ. ಊರಲ್ಲಿ ಅಳಿದುಳಿದಿರುವ, ಅಲ್ಲೊಂದು ಇಲ್ಲೊಂದು ಇರುವ ‘ಬೇಸಾಯ’ಗಳಿಗೆ (ಜೋಡೆತ್ತಿನೊಟ್ಟಿಗೆ ಉಳುವ ನೊಗಗಳು) ಈಗ ಎಲ್ಲಿಲ್ಲದ ಬೇಡಿಕೆ. ₹ 1,300ರಿಂದ 1,500 ಕೊಟ್ಟರೂ ‘ಬೇಸಾಯ’ ಸಿಗದಂತಾಗಿದೆ.

ಹೋಬಳಿಯಲ್ಲಿ ಬಿತ್ತಿದ ಮೆಕ್ಕೆಜೋಳ ಅಲ್ಲಲ್ಲಿ ಮೊಳಕೆಯೊಡೆದು ಹೊರಬರುತ್ತಿದ್ದಂತೆ ಮುಳ್ಳುಸಜ್ಜೆ ಕಳೆಯೂ ಮೆಕ್ಕೆಜೋಳ ಹುಟ್ಟುವುದಕ್ಕಿಂತ ಮುಂಚೆಯೇ ಸೊಂಪಾಗಿ ಹುಟ್ಟಿ, ರೈತನ ಆತಂಕ ಹೆಚ್ಚಿಸಿದೆ.

ಊರೆಲ್ಲಾ ಹುಡುಕಿದರೂ ಬೇಸಾಯ ಸಿಗುತ್ತಿಲ್ಲ. ಅಕ್ಕಪಕ್ಕದ ಹಳ್ಳಿ ಅಲೆದರೂ, ₹ 1,500 ಬಾಡಿಗೆ ಕೊಡುತ್ತೇನೆಂದರೂ ಬೇಸಾಯ ಸಿಗುವುದು ಕಷ್ಟವಾಗುತ್ತಿದೆ. ದುಬಾರಿ ಬಾಡಿಗೆ ಕೊಡಲಾರದೇ ರೈತರು ಕೆಲವೆಡೆ ತಾವೇ ನೊಗಕ್ಕೆ ಹೆಗಲು ಕೊಟ್ಟು ಬೇಸಾಯ ಎಳೆಯುತ್ತಿದ್ದಾರೆ.

ADVERTISEMENT

ಹುಚ್ಚವ್ವನಹಳ್ಳಿಯಲ್ಲೂ ಇಂಥದ್ದೇ ಯತ್ನ: ಹೋಬಳಿಯ ಹುಚ್ಚವನಹಳ್ಳಿ ಯಲ್ಲಿ ರೈತ ಪ್ರಕಾಶ ಮತ್ತು ಸಂಗಮೇಶ ಸಹೋದರರೂ ಇಂಥ ಯತ್ನ ನಡೆಸಿದ್ದಾರೆ. ಎತ್ತಿನಂತೆ ಬಹುಹೊತ್ತು ಬೇಸಾಯ ಎಳೆಯಲಾರದ ರೈತ ವಿವಿಧ ಸಾಧನಗಳ ಮೊರೆಹೋಗಿದ್ದಾನೆ.

ಮಾಯಕೊಂಡದ ರೈತ ರಾಮಗೊಂಡನಹಳ್ಳಿ ರೇವಣ್ಣ ಕಳೆ ಕಡಿಮೆ ಮಾಡಿಕೊಳ್ಳಲು ಬೈಸಿಕಲ್‌ನಂಥ ಸಾಧನ ಮಾಡಿಕೊಂಡಿದ್ದಾರೆ. ಇದರಿಂದ ದಿನಕ್ಕೆ ಎರಡು ಎಕರೆ ಜಮೀನಿನ ಕುಂಟೆ ಹೊಡಯಬಹುದು. ಸಣ್ಣ ಹುಲ್ಲು ಬೇರು ಸಹಿತ ಹರಿದುಬಿದ್ದು, ಒಣಗುತ್ತದೆ. ಕೇವಲ ಒಂದೂವರೆ ಸಾವಿರ ಖರ್ಚು ಮಾಡಿ, ತಯಾರಿಸಿರುವ ಬೈಸಿಕಲ್ ಗಾಲಿ ಯಂತ್ರದಿಂದ ದಿನಕ್ಕೆ 2 ಎಕರೆಯಷ್ಟು ಕುಂಟೆ ಹೊಡೆಯಬಹುದು.

‘ಕಳೆ ಹೆಚ್ಚಾಗಿದೆ. ಕುಂಟೆ ಹೊಡೆಯಲು ಎತ್ತಿನ ಬೇಸಾಯ ಸಿಗುವುದೇ ಕಷ್ಟವಾಗಿದೆ. ಹುಡಕಿ ಬೇಸತ್ತು ಎತ್ತಿನಂತೆ ನಾವೂ ಎಳೆಯಲು ಯತ್ನಿಸಿದರೆ ತುಂಬಾ ಕಷ್ಟವಾಗುತ್ತಿತ್ತು. ಬೈಸಿಕಲ್ ಗಾಲಿ ಅಳವಡಿಸಿ ಈರೀತಿ ಮಾಡಿದರೆ ಹಗುರವಾಗಿ ಕಳೆ ಕಡಿಮೆ ಮಾಡಿಕೊಳ್ಳಬಹುದು. ಇಂಥ ಸಾಧನಕ್ಕೆ ಕೃಷಿ ಇಲಾಖೆಯಲ್ಲಿ ಮೋಟಾರ್ ಅಳವಡಿಸಿ ನೀಡಿದರೆ ರೈತರಿಗೆ ಅನುಕೂಲವಾಗುತ್ತದೆ ಎನ್ನುತ್ತಾರೆ, ರೈತ ರಾಮಗೊಂಡನಹಳ್ಳಿ ರೇವಣ್ಣ, ವೆಂಕಟೇಶ, ಗೌಡ್ರ ನಟರಾಜ, ಕಲ್ಕುಟ್ರ ಬಸಣ್ಣ, ಕರೇ ಬಡಪ್ಪರ ರಾಜಣ್ಣ.

ಕಳೆ ತೆಗೆಯುವ ಸಾಧನ ಹೀಗಿದೆ…

ಕಬ್ಬಿಣದ ನೇಗಿಲು ಮಾದರಿಯಲ್ಲಿ ಎರಡೂ ಕೈಯಲ್ಲಿ ಹಿಡಿಯುವಂಥ ಹ್ಯಾಂಡಲ್ ಮಾಡಲಾಗಿದೆ. ಹ್ಯಾಂಡಲ್ ಮುಂದೆ 18 ಇಂಚು ಅಗಲದ ಹರಿತವಾದ ಬ್ಲೆಡ್ ಅನ್ನು ವೆಲ್ಡ್ ಮಾಡಲಾಗಿದೆ. 3 ಕಬ್ಬಿಣದ ರಾಡ್ ನಿಂದ ಚೂಪಾದ ಹಲ್ಲುಗಳನ್ನು ಬ್ಲೇಡ್ನ ಮುಂದೆ ಅಳವಡಿಸಲಾಗಿದೆ. ಇವೆರಡನ್ನೂ ಹೊಂದಿಸಿ ಸೈಕಲ್ ಗಾಲಿಗೆ ಪಟ್ಟಿಗಳ ಮೂಲಕ ಜೋಡಿಸಲಾಗಿದೆ. ಗಾಲಿಗೆ ಹಗ್ಗ ಹಾಕಿಕೊಂಡು ಒಬ್ಬರು ಎಳೆದರೆ ಇನ್ನೊಬ್ಬರು ಹಿಂದಿನ ಹ್ಯಾಂಡಲ್ ಹಿಡಿದುಕೊಂಡು ಕುಂಟೆ ಹೊಡೆಯಬಹುದು. ಮೋಟಾರ್ ಮತ್ತು ಬೇರಿಂಗ್ ಅಳವಡಿಸಿದರೆ ಎಳೆಯುವುದು ತಪ್ಪುತ್ತದೆ, ಹೆಚ್ಚಿನ ಹೊಲ ಉಳುಮೆ ಮಾಡಬಹುದು ಎನ್ನುತ್ತಾರೆ ರೈತರು.

–ಜಿ.ಜಗದೀಶ ಮಾಯಕೊಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.