ADVERTISEMENT

ಐಪಿಸಿ 309ನೇ ಕಲಂ ರದ್ದುಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 9:50 IST
Last Updated 2 ಜನವರಿ 2012, 9:50 IST

ದಾವಣಗೆರೆ: ಹಿರಿಯ ನಾಗರಿಕರಿಗೆ ಭಾರತೀಯ ದಂಡ ಸಂಹಿತೆ (ಐಪಿಸಿ) 309ನೇ ಕಲಂ ಅನ್ವಯವಾಗದಂತೆ ರದ್ದುಪಡಿಸಬೇಕು ಎಂದು ನಿವೃತ್ತ ಶಿಕ್ಷಕಿ, ದಯಾಮರಣದ ಬಗ್ಗೆ ಹಲವು ವರ್ಷಗಳಿಂದ ಹೋರಾಡುತ್ತಿರುವ ಎಚ್.ಬಿ. ಕರಿಬಸಮ್ಮ ಸರ್ಕಾರವನ್ನು ಕೋರಿದ್ದಾರೆ.

ಹಿಂದೆ ಆತ್ಮಹತ್ಯೆಗೆ ಯತ್ನಿಸುವುದು ಖಂಡನೀಯ ಅಪರಾಧವಾಗಿತ್ತು. ಆದರೆ, ಈಗ ಭಾರತೀಯ ದಂಡ ಸಂಹಿತೆ (ಐಪಿಸಿ) 309ನೇ ಕಲಂ ರದ್ದುಪಡಿಸುವುದಾಗಿ ಸರ್ಕಾರ ತಿಳಿಸಿದೆ. ಸಮೀಕ್ಷೆ ನಡೆಸಿರುವ ಪ್ರಕಾರ 29 ರಾಜ್ಯಗಳಲ್ಲಿ 25 ರಾಜ್ಯಗಳು ಈ ವಿಚಾರವನ್ನು ಸಮ್ಮತಿಸಿವೆ.
 

ಐಪಿಸಿಯ 309ನೇ ಕಲಂ ರದ್ದುಗೊಳಿಸಲು ಕಾನೂನು ಆಯೋಗ ಶಿಫಾರಸು ಮಾಡಿ, ಜಾರಿಗೆ ಒಂದು ವರ್ಷ ಕಾಲಮಿತಿಯನ್ನು ನೀಡಿದೆ. ಇದರ ಜಾರಿ ಸಾಧ್ಯವಾಗದೆ ಇ್ದ್ದದಲ್ಲಿ, ಹಿರಿಯ ನಾಗರಿಕರಿಗಾದರೂ ಈ ಕಲಂ ರ್ದ್ದದುಗೊಳಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

ದಯಾಮರಣ ಕಾನೂನಿಗೆ ಸಂಬಂಧಿಸಿದಂತೆ ಆಯ್ದ ದೇಶಗಳ ಸಾಲಿನಲ್ಲಿ ಭಾರತವೂ ನಿಂತಿದೆ ಎಂದು ಸುಪ್ರೀಂಕೋರ್ಟ್ ದಿಟ್ಟತನದಿಂದ ಹೇಳಿಕೆ ನೀಡಿದೆ. ಸಾರಾಸಗಟಾಗಿ ತಳ್ಳಿಹಾಕಿಲ್ಲ. ದೀರ್ಘ ಕಾಲ ಕೋಮಾದಲ್ಲಿದ್ದ ರೋಗಿಯ ಜೀವರಕ್ಷಕ ಸಾಧನಗಳನ್ನು ತೆಗೆಯುವುದು, ಮೂತ್ರಪಿಂಡದ ರೋಗಿಗಳಿಗೆ ಡಯಾಲಿಸಿಸ್ ನಿಲ್ಲಿಸುವುದು, ಮಾರಣಾಂತಿಕ ರೋಗದಿಂದ ನರಳುತ್ತಿರುವ ರೋಗಿಗಳಿಗೆ ಆ್ಯಂಟಿಬಯಾಟಿಕ್ ಔಷಧಿ ನಿಲ್ಲಿಸುವುದು, ವ್ಯಕ್ತಿಗೆ ನೇರವಾಗಿ ಅನುಮತಿ ಬೇಡ, ಪರೋಕ್ಷವಾಗಿ ದಯಾಮರಣ ನೀಡಬಹುದು ಎಂದಿದೆ.

ಔಷಧೋಪಚಾರದಲ್ಲಿ ಇದ್ದಾಗಲೇ ರೋಗಿಯ ನರಳಾಟ ನೋಡಲು ಆಗುವುದಿಲ್ಲ. ಈ ಎಲ್ಲವನ್ನೂ ನಿಲ್ಲಿಸಿದಾಗ ರೋಗಿಯ ಗತಿ ಏನು? ನೀರಿನಿಂದ ಹೊರಬಿದ್ದ ಮೀನಿನಂತೆ ಆಗುತ್ತದೆ. ರೋಗಿಗೆ ಬೇಕಿರುವುದು ನೆಮ್ಮದಿಯ ಸಾವು. ಅದೇ ದಯಾಮರಣ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT