ADVERTISEMENT

ಒಳರೋಗಿಗಳಿಗೆ ಒಂದು ರೂಪಾಯಿಗೆ ಊಟ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 8:00 IST
Last Updated 7 ಫೆಬ್ರುವರಿ 2012, 8:00 IST

ಹುಬ್ಬಳ್ಳಿ: ನಗರದ ಚಿಟಗುಪ್ಪಿ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಹಾಗೂ ಅವರ ಸಂಬಂಧಿಕರಿಗೆ ಎಚ್.ಕೆ. ಸುಮಂಗಲಾ ಚಾರಿಟಿಸ್ ಸಂಸ್ಥೆಯು ಮಧ್ಯಾಹ್ನದ ಹೊತ್ತು ಕೇವಲ ಒಂದು ರೂಪಾಯಿಗೆ ಊಟ ಒದಗಿಸುತ್ತಿದೆ.

ಸುಮಂಗಲಾ ಅವರು ಸೇವಾ ಮನೋಭಾವ ದಿಂದ ಈ ಆಸ್ಪತ್ರೆಯ ಒಳರೋಗಿಗಳು ಮತ್ತವರ ಸಂಬಂಧಿಕರಿಗೆ ಐದು ವರ್ಷಗಳಿಂದ ಮಧ್ಯಾಹ್ನದ ಬಿಸಿಯೂಟವನ್ನು  ಒದಗಿಸುತ್ತಿದ್ದಾರೆ. ಇದರ ಲಾಭ 50-60 ರೋಗಿಗಳು ಹಾಗೂ ಅವರ ಸಂಬಂಧಿಕರಿಗೆ ದೊರೆಯುತ್ತಿದೆ. ತಮ್ಮ ಪತಿ ಎಚ್.ಕೆ. ವೀರಭದ್ರಪ್ಪ ಅವರ ಸ್ಮರಣಾರ್ಥ ಅವರು ಈ ದಾಸೋಹವನ್ನು ಕೈಗೊಂಡಿದ್ದಾರೆ.

`ಮನೆಯವರು ಗುಡಿಗಳ ಜೀರ್ಣೋದ್ಧಾರ ಕ್ಕೆಂದು ನೆರವಾಗುತ್ತಿದ್ದರು. ಅವರು ತೀರಿಕೊಂಡ ದಿನವಾದ ಮೇ 13ರಂದು ಪ್ರತಿ ವರ್ಷ ಸಾಮೂಹಿಕ ವಿವಾಹ ಮಾಡುತ್ತಿದ್ದೆವು. ನನ್ನ ಪುತ್ರ ಅರವಿಂದ ಕುಬಸದ ಹಾಗೂ ಆತನ ಗೆಳೆಯರು ಕೂಡಿ ಅಂಬಾನಿ ಚಾರಿಟಬಲ್ ಟ್ರಸ್ಟ್ ಕಟ್ಟಿಕೊಂಡು ಕಿಮ್ಸನಲ್ಲಿ ಮಧ್ಯಾಹ್ನದ ಹೊತ್ತುಊಟ ಕೊಡಲು ಶುರು ಮಾಡಿದರು. ಆದರೆ ಕೆಲವು ಕಾರಣಗಳಿಂದಾಗಿ ಅದು ಮುಂದುವರಿಯಲಿಲ್ಲ. ಇದಾದ ಮೇಲೆ ಗುಡಿಗಳ ಜೀರ್ಣೋದ್ಧಾರಕ್ಕೆಂದು ದುಡ್ಡು ಕೇಳಲು ಬರುವವರಿಗೆ ಕೊಡುವುದನ್ನು ನಿಲ್ಲಿಸಿದೆವು. ಗುಡಿಗಳ ಉದ್ಧಾರಕ್ಕಿಂತ ಬಡವರಿಗೆ ಅದರಲ್ಲೂ ರೋಗಿಗಳಿಗೆ ಊಟ ಕೊಡುವ ಯೋಜನೆ ಸರಿಯಾದುದು ಎನ್ನಿಸಿತು. ಆಗ ಚಿಟಗುಪ್ಪಿ ಆಸ್ಪತ್ರೆಗೆ ಬರುವವರೆಲ್ಲ ಬಡವರು ಎಂಬುದನ್ನು ಗುರುತಿಸಿದೆವು. ಹೆಚ್ಚಾಗಿ ಗ್ರಾಮೀಣ ಪ್ರದೇಶದಿಂದ ಬರುವವರು. ಔಷಧೋಪಚಾರ ಕ್ಕಾಗಿ ಅವರು ಕಷ್ಟಪಡುವಾಗ ಊಟಕ್ಕೆ ಪರದಾಡಬಾರದೆಂದು ಮಧ್ಯಾಹ್ನ ಊಟ ಕೊಡುವ ಯೋಜನೆಯನ್ನು ಆರಂಭಿಸಲಾಯಿತು~ ಎಂದು ಸುಮಂಗಲಾ `ಪ್ರಜಾವಾಣಿ~ಗೆ ವಿವರ ನೀಡಿದರು.

`ಇದನ್ನೆಲ್ಲ ಪ್ರಚಾರಕ್ಕಾಗಿ ಮಾಡುತ್ತಿಲ್ಲ. ವೈದ್ಯಕೀಯ ಕ್ಷೇತ್ರ ಮೊದಲಿನಿಂದಲೂ ನನಗೆ ಇಷ್ಟ. ಮೆಡಿಕಲ್ ಓದುವ ಆಸೆಯಿತ್ತು. ನಮ್ಮ ತಂದೆಗೆ ನಾವು ಆರು ಪುತ್ರಿಯರು. ಎಸ್‌ಎಸ್‌ಎಲ್‌ಸಿ ನಂತರ ಕಲಿಯುವ ಆಸೆ ವ್ಯಕ್ತಪಡಿಸಿದಾಗ ತಂದೆಯವರು ಒಪ್ಪಲಿಲ್ಲ. ಹೀಗಾಗಿ ಮುಂದೆ ಓದಲಾಗಲಿಲ್ಲ. ಆದರೆ ಬಡವರಿಗೆ ಊಟ ಕೊಡುವ ಮೂಲಕ ವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸುತ್ತಿರುವೆ~ ಎಂದು ನುಡಿದರು.

`ಚಿಟಗುಪ್ಪಿ ಆಸ್ಪತ್ರೆಯಲ್ಲಿ ಊಟದ ಯೋಜನೆ ಆರಂಭಿಸಿದಾಗ ಪ್ರತ್ಯೇಕ ಕೋಣೆ ಇರಲಿಲ್ಲ. ನಂತರ ಪ್ರತ್ಯೇಕ ಕೋಣೆ ಕಟ್ಟಿಸಿಕೊಟ್ಟರು. ಅದಕ್ಕೀಗ ದಾಸೋಹ ಮನೆ ಎಂದು ಹೆಸರಿಟ್ಟಿದ್ದೇವೆ. ನಿತ್ಯ ಬೆಳಿಗ್ಗೆ ಸುರೇಖಾ, ಶೀಲಾ ನಾಯ್ಡು ಹಾಗೂ ಮೇರಿ ತರಕಾರಿ ತಂದು ಅಡುಗೆ ಸಿದ್ಧಪಡಿಸುತ್ತಾರೆ. ಪ್ರತಿ ತಿಂಗಳು ಅವರಿಗೆ ತಲಾ ರೂ 1100 ಪಗಾರ ಕೊಡುತ್ತೇವೆ. ಮುಖ್ಯವಾಗಿ ಬಾಣಂತಿಯರಿಗೆ ಹಾಗೂ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಅಡುಗೆ ತಯಾರಿಸುತ್ತಾರೆ. ಅನೇಕ ಬಾರಿ ರೋಗಿಗಳು ಒಯ್ಯಲು ಆಗದೆ ಇದ್ದಾಗ ನಮ್ಮವರೇ ಒಯ್ದು ಕೊಡುತ್ತಾರೆ. ಇದನ್ನು ನಡೆಸಿಕೊಂಡು ಹೋಗಲು ಯಾರಿಂದಲೂ ಧನಸಹಾಯ ಪಡೆ ದಿಲ್ಲ. ನಮ್ಮ ದುಡಿಮೆಯ ಅಲ್ಪಭಾಗ ಸದ್ವಿ ನಿಯೋಗವಾಲಿ ಎನ್ನುವ ಬಯಕೆ ಈಡೇರುತ್ತಿದೆ~ ಎನ್ನುತ್ತಾರೆ ಅವರು. 

`ಚಿಟಗುಪ್ಪಿ ಆಸ್ಪತ್ರೆ ಪಾಲಿಕೆ ವ್ಯಾಪ್ತಿಯದು ನಿಜ. ಆದರೆ ಪಾಲಿಕೆಯಿಂದ ಊಟ ಕೊಡುವುದಿಲ್ಲ. ಹಾಲು ಮಾತ್ರ ಕೊಡಲಾಗುತ್ತದೆ. ಹೀಗಾಗಿ ಸುಮಂಗಲಾ ಅವರು ಮಧ್ಯಾಹ್ನ ಊಟ ಕೊಡುತ್ತೇವೆಂದಾಗ ಸಂತೋಷದಿಂದ ಒಪ್ಪಿಕೊಂಡೆವು~ ಎನ್ನುತ್ತಾರೆ ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.