ADVERTISEMENT

ಕನ್ನಡ ಶಾಲೆಗಳ ಮೇಲೆ ಕಾಗೇರಿ ಕೆಂಗಣ್ಣು

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 5:22 IST
Last Updated 7 ಡಿಸೆಂಬರ್ 2012, 5:22 IST

ದಾವಣಗೆರೆ: ರಾಜಕೀಯ ಸೇಡಿನ ಹಿನ್ನೆಲೆಯಲ್ಲಿ ಚಿತ್ರದುರ್ಗ ಜಿಲ್ಲಾ ಬಣಜಾರ ಯುವಕ ಸಂಘದ ವತಿಯಿಂದ ರಾಜ್ಯ ವಿವಿಧ ಜಿಲ್ಲೆಗಳಲ್ಲಿ ನಡೆಯುತ್ತಿರುವ ಸುಮಾರು 10 ಕನ್ನಡ ಶಾಲೆಗಳನ್ನು ಮುಚ್ಚಲು ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಆದೇಶಿಸಿದ್ದಾರೆ ಎಂದು ಮಾಜಿ ಸಚಿವ ಶಿವಮೂರ್ತಿನಾಯ್ಕ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಮಾನ್ಯತೆ ನವೀಕರಣಕ್ಕಾಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಮೂರು ಬಾರಿ ಪ್ರಸ್ತಾವ ಸಲ್ಲಿಸಿದ್ದರೂ, ಅಧಿಕಾರಿಗಳು ಮತ್ತು ಶಿಕ್ಷಣ ಸಚಿವರು ಸ್ಪಂದಿಸುತ್ತಿಲ್ಲ. ಬಿಜೆಪಿ ಮುಖಂಡರಾದ ಡಾ.ಎ.ಎಚ್. ಶಿವಯೋಗಿಸ್ವಾಮಿ, ವೈ.ಎ. ನಾರಾಯಣಸ್ವಾಮಿ, ಶಶಿಲ್ ಜಿ. ನಮೋಶಿ ನನ್ನ ವಿರುದ್ಧ ರಾಜಕೀಯ  ಸೇಡು  ತೀರಿಸಿಕೊಳ್ಳುವ ಕಾರಣಕ್ಕೆ ಶಿಕ್ಷಣ  ಸಚಿವರ ಮೇಲೆ ಒತ್ತಡ ಹೇರಿ ಶಾಲೆಗಳ ಮಾನ್ಯತೆ ನವೀಕರಣಕ್ಕೆ   ಅಡ್ಡಿಪಡಿಸುತ್ತಿದ್ದಾರೆ  ಎಂದರು.

ಚಿತ್ರದುರ್ಗ, ದಾವಣಗೆರೆ ಹಾಗೂ ಬೆಂಗಳೂರಿನ ಒಟ್ಟು 10 ಶಾಲೆಗಳ ಮೇಲೆ ಶಿಕ್ಷಣ ಸಚಿವರು ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಂಡಿರುವುದರಿಂದ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು 5 ಸಾವಿರ ಗ್ರಾಮೀಣ ಬಡ ವಿದ್ಯಾರ್ಥಿಗಳು ಶಿಕ್ಷಣ ವಂಚಿತರಾಗುವಂತೆ ಮಾಡಿದೆ ಎಂದ ಅವರು, ಇದರಿಂದಾಗಿ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಸರ್ಕಾರವೇ ಉಲ್ಲಂಘಿಸಿದಂತಾಗಿದೆ ಎಂದರು.

ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಮುಂಚೆ 31 ವರ್ಷ ನಿರಂತರ ಈ ಶಾಲೆಗಳ ಮಾನ್ಯತೆ ನವೀಕರಣಗೊಂಡಿವೆ. ಸಾವಿರಾರು ಗ್ರಾಮೀಣ ಪ್ರದೇಶ ಪರಿಶಿಷ್ಟ ಜಾತಿ ಮತ್ತು ಪಂಗಡ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಮೂಲಕ ಮುಖ್ಯವಾಹಿನಿಗೆ ತರಲಾಗಿದೆ. 2008ರಲ್ಲಿ  ಅಧಿಕಾರಕ್ಕೆ  ಬಂದ  ಬಿಜೆಪಿ ಅಲ್ಪ ಸಂಖ್ಯಾತರನ್ನು ಕಡೆಗಣಿಸಿದೆ ಎಂದರು

ಶಾಲೆಗಳ  ಮಾನ್ಯತೆ ರದ್ದುಪಡಿಸಲು ಹೊರಟಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಈಚೆಗೆ ಉಚ್ಚನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿದೆ. ಆದರೂ, ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ ಕಡತಗಳನ್ನು ಶಿಕ್ಷಣ ಸಂಸ್ಥೆಗಳಿಗೆ ಹಿಂದಿರುಗಿಸಿಲ್ಲ ಎಂದು ಅವರು ಆರೋಪಿಸಿದರು.

ಬಸವಾಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ (ಪರಿಶಿಷ್ಟ ಜಾತಿ ವಿಭಾಗ), ಬಿ.ಟಿ. ವಿಶ್ವನಾಥ, ಪಿ. ರಾಜ್‌ಕುಮಾರ್, ವಕೀಲರಾದ ಕಾಶೀನಾಥ್, ಬಾಡ ರವಿಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.