ADVERTISEMENT

ಕರಪತ್ರ ಮುದ್ರಣಕ್ಕೆ ಅನುಮತಿ ಕಡ್ಡಾಯ

ಲೋಕಸಭಾ ಚುನಾವಣೆ ಹಿನ್ನೆಲೆ: ಡಿಸಿ ಅಂಜನಕುಮಾರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 5:29 IST
Last Updated 22 ಮಾರ್ಚ್ 2014, 5:29 IST

ದಾವಣಗೆರೆ: ಚುನಾವಣಾ ಕರಪತ್ರ ಅಥವಾ ಭಿತ್ತಿಪತ್ರಗಳ ಮೇಲೆ ಅದರ ಮುದ್ರಕ ಮತ್ತು ಪ್ರಕಾಶಕರ ಹೆಸರು ಮತ್ತು ವಿಳಾಸ ಇರುವುದು ಕಡ್ಡಾಯ. ಹೆಸರು, ವಿಳಾಸಗಳನ್ನು ಪ್ರಕಟಿಸದ ಮುದ್ರಕರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಟಿ.ಅಂಜನಕುಮಾರ್ ಎಚ್ಚರಿಕೆ ನೀಡಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಪತ್ರ, ಭಿತ್ತಿಪತ್ರ ಮುದ್ರಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುದ್ರಕರು ಮಾದರಿ ನೀತಿ ಸಂಹಿತೆ ಪಾಲಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಾದ್ಯಂತ ಲೋಕಸಭಾ ಚುನಾವಣೆಗೆ ಸಂಬಂಧಿಸಿದ ಕರಪತ್ರಗಳನ್ನು ಮುದ್ರಿಸಬೇಕಾದಲ್ಲಿ ಜಿಲ್ಲಾ ಚುನಾವಣಾ ಆಯೋಗದ ಅನುಮತಿಯೊಂದಿಗೆ ಮುದ್ರಿಸಬೇಕು. ಮುದ್ರಿಸಿದ ಪ್ರತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಗಮನಕ್ಕೆ ತರಬೇಕು ಎಂದು ಎಚ್ಚರಿಕೆ ನೀಡಿದರು.

ಅಭ್ಯರ್ಥಿಗಳು ಪ್ರಚಾರಕ್ಕಾಗಿ ಮುದ್ರಿಸುವ ಕರಪತ್ರ ಅಥವಾ ಭಿತ್ತಿಪತ್ರದಲ್ಲಿ ಯಾವುದೇ ರೀತಿಯ ಸಮಾಜ, ಜಾತಿ, ಧರ್ಮ ಹಾಗೂ ಕೋಮು ಸೌಹಾರ್ದ ಕದಡುವ ಅಂಶಗಳನ್ನು ಹೊರತುಪಡಿಸಿ ಮುದ್ರಿಸಬೇಕು. ಮುದ್ರಕರು ಮುದ್ರಿಸುವ ಪ್ರತಿಗಳ ಸಂಖ್ಯೆಯನ್ನು ಕಡ್ಡಾಯವಾಗಿ ಆಯೋಗಕ್ಕೆ ತಿಳಿಸಿ ಅನುಮತಿ ಪಡೆದ ನಂತರವೇ ಮುದ್ರಿಸಬೇಕು ಎಂದು ಹೇಳಿದರು.

ಮುದ್ರಕರು ಮುದ್ರಿಸುವಂತಹ ಕರಪತ್ರ, ಭಿತ್ತಿಪತ್ರಗಳು ಪರಿಸರಕ್ಕೆ ಮಾರಕವಾಗದೇ ಪರಿಸರ ಸ್ನೇಹಿಯಾಗಿರುವಂತೆ ನೋಡಿಕೊಳ್ಳುವುದು ಅತ್ಯಗತ್ಯವಾಗಿದೆ. ಇದರಿಂದ ಪರಿಸರದ ಮೇಲೆ ಬೀರುವ ದುಷ್ಪರಿಣಾಮವನ್ನು ನಿಯಂತ್ರಿಸಲು ಮುದ್ರಕರೆಲ್ಲರೂ ಸಹಕರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದರು.

ಯಾವುದೇ ಚುನಾವಣಾ ಕರಪತ್ರ ಅಥವಾ ಭಿತ್ತಿಪತ್ರಗಳು ಮುಂತಾದ ಮುದ್ರಣವನ್ನು ಕೈಗೆತ್ತಿಕೊಳ್ಳುವ ಮೊದಲು ಮುದ್ರಕರು ಅದರೊಂದಿಗಿರುವ ಪರಿಶಿಷ್ಟ- ನಮೂನೆಯಲ್ಲಿ ಚುನಾವಣಾ ಆಯೋಗವು ಗೊತ್ತುಪಡಿಸಿದ ನಮೂನೆಯಲ್ಲಿ ನಿಯಮಾನುಸಾರ ಪ್ರಕಾಶಕನಿಂದ ಒಂದು ಘೋಷಣೆಯನ್ನು ಪಡೆಯುವುದು ಕಡ್ಡಾಯ. ಮುದ್ರಕನು ಮುದ್ರಿತ ವಿಷಯದ ೪ ಪ್ರತಿಗಳನ್ನು ಮುದ್ರಣದ ಮೂರು
ದಿನಗಳೊಳಗಾಗಿ ಪ್ರಕಾಶರ ಘೋಷಣೆಯ ಜತೆಗೆ ಆಯೋಗಕ್ಕೆ ಮಾಹಿತಿ ನೀಡಬೇಕು. ಅಲ್ಲದೇ ಮುದ್ರಿತ ಸಾಮಗ್ರಿ ಮತ್ತು ಘೋಷಣೆಯ ಜತೆಗೆ ಮುದ್ರಕನು ಮುದ್ರಿಸಿದ ಪ್ರತಿಗಳ ಸಂಖ್ಯೆ ಮುದ್ರಣಕ್ಕಾಗಿ ವಿಧಿಸಿದ ದರದ ಮಾಹಿತಿಯನ್ನು ಆಯೋಗವು ಗೊತ್ತುಪಡಿಸಿದ ಪರಿಶಿಷ್ಟ-ಬಿ ನಮೂನೆಯಲ್ಲಿ ಒದಗಿಸಬೇಕು ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಪ್ರಕಾಶ, ಹೆಚ್ಚುವರಿ ಜಿಲ್ಲಾಧಿಕಾರಿ ಇಬ್ರಾಹಿಂ ಮೈಗೂರ, ಜಿಲ್ಲೆಯ ಮುದ್ರಣಾಲಯಗಳ ಮಾಲೀಕರು, ಪ್ರತಿನಿಧಿಗಳು ಹಾಗೂ ಚುನಾವಣಾ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.